ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳ 25 ನೇ ಚಾತುರ್ಮಾಸ್ಯವಾದ “ಗೋಸ್ವರ್ಗ ಚಾತುರ್ಮಾಸ್ಯ”ದ ವ್ರತ ಸಮಾಪ್ತಿ ಹಾಗೂ ಸೀಮೋಲ್ಲಂಘನ ಕಾರ್ಯಕ್ರಮ ನಾಳೆ ಗಿರಿನಗರದ ಶಾಖಾಮಠದಲ್ಲಿ ನಡೆಯಲಿದೆ.
ಎರಡು ತಿಂಗಳುಗಳ ಕಾಲ ಒಂದೇ ಸ್ಥಳದಲ್ಲಿ ನೆಲೆನಿಂತು, ಮಠೀಯ ಪದ್ಧತಿಯಂತೆ ವ್ರತಾಚರಣೆಯ ಜೊತೆಗೆ ಶ್ರೀಗಳು ಸಮಾಜದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು. ಇದೀಗ ಸೀಮೋಲ್ಲಂಘನದ ಮೂಲಕ ಚಾತುರ್ಮಾಸ್ಯ ಕಾರ್ಯಕ್ರಮ ಸಮಾಪನಗೊಳ್ಳಲಿದೆ.
ಬೆಳಗ್ಗೆ 10 ಗಂಟೆಗೆ ಶ್ರೀಕರಾರ್ಚಿತ ರಾಮದೇವರ ಪೂಜೆ ನಡೆಯಲಿದ್ದು, 12 ಗಂಟೆಗೆ ಶ್ರೀಮಠದ ಶಾಸನತಂತ್ರ ವ್ಯವಸ್ಥೆಯಿಂದ ಭಿಕ್ಷಾಂಗ ಫಲಸಮರ್ಪಣೆ ನಡೆಯಲಿದೆ. ಆನಂತರ ಸೀಮೋಲ್ಲಂಘನ ವಿಧಿವಿಧಾನಗಳು ಸಂಪನ್ನವಾಗಲಿದ್ದು, ಮಧ್ಯಾಹ್ನ 3.00 ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಚಾತುರ್ಮಾಸ್ಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಯಲಿದೆ.
ಶಿಕ್ಷಣ ತಜ್ಞೆಗೆ ಚಾತುರ್ಮಾಸ್ಯ ಪ್ರಶಸ್ತಿ :
ಶಿಕ್ಷಣ ತಜ್ಞೆ ಡಾ. ಶಾರದಾ ಜಯಗೋವಿಂದ ಅವರಿಗೆ ಈ ಬಾರಿಯ ಚಾತುರ್ಮಾಸ್ಯ ಪ್ರಶಸ್ತಿ ಘೋಷಣೆಯಾಗಿದ್ದು, ಪೂಜ್ಯ ಶ್ರೀಗಳು ಪ್ರಶಸ್ತಿಯನ್ನು ನೀಡಿ ಅನುಗ್ರಹಿಸಲಿದ್ದಾರೆ. ಡಾ. ಶಾರದಾ ಜಯಗೋವಿಂದ ಅವರು ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಯ ಜೊತೆಗೆ ಸಾಮಾಜಿಕವಾಗಿಯೂ ತಮ್ಮನ್ನು ತೊಡಗಿಸಿಕೊಂಡಿರುವವರಾಗಿದ್ದಾರೆ.
ಮಧ್ಯಾಹ್ನ 3.00 ಗಂಟೆಗೆ ನಡೆಯುವ ಧಾರ್ಮಿಕ ಸಭೆಯಲ್ಲಿ ಅನೇಕ ಗಣ್ಯರು ಪಾಲ್ಗೊಳ್ಲಿದ್ದು, ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ ಶಿಷ್ಯ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.