(ಪ್ರಭಾ ಭಟ್ಟ, ಪುಣೆ – ‘ಶ್ರೀಧರಾಮೃತ ವಚನಮಾಲೆ’ಯಿಂದ)
ಪುರುಷ ಏವೇದಂ ವಿಶ್ವಂ ಕರ್ಮ ತಪೋಬ್ರಹ್ಮಪರಾಮೃತಮ್|
ಏತದೋ್ಯ ವೇದ ನಿಹಿತಂ ಗುಹಾಯಾಂ ಸೋsವಿದ್ಯಾಗ್ರಂಥಿಂ
ವಿಕಿರತೀಯ ಸೋಮ್ಯ||
ಆ ಪರಮಾತ್ಮನೆ ಈ ಎಲ್ಲಾ ವಿಶ್ವವಾಗಿರುವನು. ಇಲ್ಲದ ಸರ್ಪದ ‘ಬ್ರಮೆ’ ತೊರೆದಾಗ, ಹಗ್ಗವೇ ತೋರಿಬರುವಂತೆ, ಈ ವಿಶ್ವದಲ್ಲೆಲ್ಲಾ ಪರಮಾತ್ಮನೇ ತೋರಿಬರುವನು.
ಮಣ್ಣಿನ ಕೊಡವು ಮಣ್ಣಿಗಿಂತಲೂ ಬೇರೆಯಲ್ಲ. ಪರಮಾತ್ಮನಿಂದಾದ ಈ ವಿಶ್ವ ಪರಮಾತ್ಮನಿಗಿಂತಲೂ ಬೇರೆಯಲ್ಲ.
ಚಿನ್ನವನ್ನು ದೃಷ್ಟಿಯಲ್ಲಿಟ್ಟು ಒಡವೆಯನ್ನು ನೋಡಿದಾಗ ‘ಒಡವೆ ಚಿನ್ನವೇ ಸರಿ’ ಎಂಬುದು ಅನುಭವಕ್ಕೆ ಬರುತ್ತದೆ. ಅದರಂತೆ, ಆ ತ್ರಿಕಾಲಾಬಾಧಿತ ಪರಮಾತ್ಮನನ್ನು ದೃಷ್ಟಿಯಲ್ಲಿಟ್ಟು ಜಗತ್ತನ್ನು ನೋಡಿದರೆ ‘ಜಗತ್ತು ಸತ್ಯ-ಸ್ವರೂಪದಿಂದ ಪರಮಾತ್ಮನೇ’ ಎಂಬುದಾಗಿ ಅನುಭವಕ್ಕೆ ಬರುವದು.
ಈ ಜಗತ್ತು, ಜಗತ್ತಿನಲ್ಲಿರುವ ಎಲ್ಲ ಜೀವಿಗಳು, ವಿಧಿಮಾನ್ಯ ಕರ್ಮ-ತಪಸ್ಸು ಎಲ್ಲವೂ ಪರಮಾತ್ಮಸ್ವರೂಪವೇ!
ಯಾವಾತನು ಈ ಅಮೃತರೂಪವನ್ನು ‘ಅಮೃತವೇ ನಾನು, ಅದೇ ಇದೆಲ್ಲವೂ’ ಎಂದು ಮನಗೊಳ್ಳುವನೋ ಆತನೇ ಆತ್ಮಜ್ಞಾನಿ! ಈ ಆತ್ಮಜ್ಞಾನದ ಮೂಲಕ ‘ಅಜ್ಞಾನ’ದಿಂದಾದ ಎಲ್ಲ ವಾಸನೆ, ‘ದೇಹವೇ ಆತ್ಮ’ ಎಂಬ ಬುದ್ಧಿ ಅಂದರೆ ‘ಅವಿದ್ಯಾಗ್ರಂಥಿ’ಯನ್ನು ನಷ್ಟಪಡಿಸುವನು. ಅಜ್ಞಾನದಿಂದ ‘ತೋರಿಬರುವ ಈ ಎಲ್ಲ ಜಗತ್ತಿನ’ ಸತ್ಯರೂಪವು ಪರಮಾತ್ಮನೇ ಸರಿ!