ಯಲ್ಲಾಪುರ: ವಿದ್ವತ್‍ಪೂರ್ಣ ಭಾಗವತಿಕೆಯಿಂದ ನಾಡಿನಾದ್ಯಂತ ಕಲಾರಸಿಕರ ಹಾಗೂ ಕಲಾವಿದರ ಪ್ರೀತಿಗೆ ಪಾತ್ರರಾಗಿರುವ ವಿದ್ವಾನ್ ಗಣಪತಿ ಭಟ್ಟ ಅವರನ್ನು ಸನ್ಮಾನಿಸುವ `ವಿದ್ವಾನ್-ಗಾನ-ಸಂಮಾನ’ ಕಾರ್ಯಕ್ರಮವನ್ನು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸೆ.29 ರಂದು ಮಧ್ಯಾಹ್ನ 3.15 ಕ್ಕೆ ಪಟ್ಟಣದ ನಾಯಕನಕೆರೆ ಶಾರದಾಂಬಾ ಸಂಸ್ಕೃತ ಪಾಠಶಾಲೆಯ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಯಕ್ಷಗಾನ ಭಾಗವತಿಕೆ, ಸಂಗೀತ,ಸಂಸ್ಕೃತಗಳು ಸಮಪಾಕವಾಗಿ ಸಮಾಜಕ್ಕೆ ವಿದ್ವಾನರ ಕೊಡುಗೆ ಅಪಾರ. ಅವರ ಸುದೀರ್ಘ 37 ವರ್ಷಗಳ ಕಲಾಸೇವೆಗೆ ಶಿಷ್ಯರು ಹಾಗೂ ಅಭಿಮಾನಿಗಳು ಸೇರಿ ಸನ್ಮಾನಿಸುವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ.
ಅಂದು ಮಧ್ಯಾಹ್ನ 3.15 ಕ್ಕೆ `ಯಕ್ಷಗಾಯನ-ಕುಂಚ ವೈಭವ’ ಕಾರ್ಯಕ್ರಮ ನಡೆಯಲಿದ್ದು, ಅನಂತ ಹೆಗಡೆ ದಂತಳಿಗೆ ಅವರ ಭಾಗವತಿಕೆಗೆ ಕಲಾವಿದ ಸತೀಶ ಯಲ್ಲಾಪುರ ಚಿತ್ರ ಬರೆಯಲಿದ್ದಾರೆ. ಮದ್ದಲೆಯಲ್ಲಿ ನರಸಿಂಹ ಭಟ್ಟ ಹಂಡ್ರಮನೆ, ಚಂಡೆಯಲ್ಲಿ ಪ್ರಮೋದ ಕಬ್ಬಿನಗದ್ದೆ ಸಹಕರಿಸಲಿದ್ದಾರೆ. 4.30 ಕ್ಕೆ ನಡೆಯುವ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಕ್ಷಋಷಿ ಹೊಸ್ತೋಟ ಮಂಜುನಾಥ ಭಾಗ್ವತ ವಹಿಸಲಿದ್ದಾರೆ. ವಿದ್ವಾನ್ ಗಣಪತಿ ಭಟ್ಟ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಅರ್ಥಧಾರಿ ದಿವಾಕರ ಹೆಗಡೆ ಕೆರೆಹೊಂಡ ಅಭಿನಂದನಾ ನುಡಿಗಳನ್ನಾಡಲಿದ್ದು, ವಿದ್ವಾನರ ಒಡನಾಡಿ ಎ.ಪಿ.ಪಾಠಕ ಮಾತನಾಡಲಿದ್ದಾರೆ. ವಿದ್ವಾನ್ ಶ್ರೀಪತಿ ಉಪಾಧ್ಯಾಯ ಕುಂಭಾಶಿ, ಪಾಠಶಾಲೆಯ ಅಧ್ಯಕ್ಷ ಶಂಕರ ಭಟ್ಟ ಆನೆಜಡ್ಡಿ ಭಾಗವಹಿಸಲಿದ್ದಾರೆ.
ವಿದ್ವಾನ್ ಗಣಪತಿ ಭಟ್ಟ, ಶ್ರೀಪತಿ ಉಪಾಧ್ಯಾಯ, ರವಿಕುಮಾರ್ ಉಡುಪಿ, ಗಣೇಶ ಗುಂಡ್ಕಲ್ ಅವರಿಂದ ಗಾನ-ಆಖ್ಯಾನ ಕಾರ್ಯಕ್ರಮ ನಡೆಯಲಿದೆ. ನಂತರ ನಡೆಯುವ ಹಿಮ್ಮೇಳ ವೈಭವದಲ್ಲಿ ವಿದ್ವಾನರೊಂದಿಗೆ ರವೀಂದ್ರ ಭಟ್ಟ ಅಚವೆ, ಶಂಕರ ಭಟ್ಟ ಬ್ರಹ್ಮೂರು, ಪ್ರಸಾದ ಗೋಡೆ ಭಾಗವತರಾಗಿ, ಮದ್ದಲೆವಾದಕರಾಗಿ ಗಣಪತಿ ಭಾಗ್ವತ ಕವಾಳೆ, ಎ.ಪಿ.ಪಾಠಕ, ಎನ್.ಜಿ.ಹೆಗಡೆ, ಚಂಡೆವಾದಕರಾಗಿ ಗಣೇಶ ಗಾಂವ್ಕಾರ ಕನಕನಹಳ್ಳಿ ಭಾಗವಹಿಸಲಿದ್ದಾರೆ.