ಲೇಖಕರು :- ಪ್ರಭಾ ಮತ್ತು ವೆಂಕಟರಮಣ ಭಟ್ಟ, ಪುಣೆ
ಸಮುದ್ರದ ನೀರಿನಲ್ಲಿ ಅನೇಕ ಗುಳ್ಳೆ ಏಳುತ್ತ ಬೀಳುತ್ತಿದ್ದರೂ, ಬಿದ್ದು ಸಮುದ್ರವೇ ಆದ ಒಂದು ಆ ನೀರಿನ ಗುಳ್ಳೆ, ತನಗಿಂತ ಅಂದರೆ ಸಮುದ್ರಕ್ಕಿಂತ ಬೇರೇನು ಅಲ್ಲಿ ಕಾಣಬಹುದು?
(ಇಸವಿ ಸನ ೧೯೪೩-೪೪ರ ಸುಮಾರಿಗೆ ಕು. ರಾಧಾಳು ತನ್ನ ಕಿಶೋರಾವಸ್ಥೆಯಲ್ಲಿ ಸ್ವಾಮಿಗಳಿಗೆ ಬರೆದ ಪತ್ರಕ್ಕೆ ಸ್ವಾಮಿಗಳ ಉತ್ತರದ ಉರ್ವರಿತ ಭಾಗ)
ಒಂದು ದೇಹದಲ್ಲಿ ಸ್ಫುರಿಸುತ್ತಿರುವ ‘ನಾನು’ ಎನ್ನುವ ಆತ್ಮಸಾಕ್ಷಿ ಉಳಿದೆಲ್ಲ ‘ಅರಿವಿ’ಗಿಂತ ಮೊದಲು ಎಲ್ಲ ದೇಹಗಳಲ್ಲೂ ಒಂದೇ ರೀತಿ ಕಾಣಬರುವದರಿಂದ ‘ಅದು’ ‘ಒಂದೇ’ ಎಲ್ಲ ದೇಹಗಳಲ್ಲೂ ವ್ಯಾಪಿಸಿಕೊಂಡಿದ್ದೆಂಬುದು ಸ್ಫುಟವಾಗುತ್ತದೆ. ಎಲ್ಲವನ್ನೂ ವ್ಯಾಪಿಸಿದ ಆ ‘ಒಂದು’ ಉಳಿದೆಲ್ಲ ವ್ಯಾಪಿಸಿರುವ ದೃಶ್ಯದಿಂದ ಬೇರೆ ಮತ್ತು ಹಾಗಾಗಿಯೇ ಸರ್ವದೃಶ್ಯಕ್ಕಿಂತ ಶ್ರೇಷ್ಠವೆಂದೇ ಆಗುತ್ತದೆ. ಆ ಎಲ್ಲಕ್ಕಿಂತಲೂ ಶ್ರೇಷ್ಟ ‘ಒಂದ’ನ್ನು ಯಾವುದೇ ಒಂದು ಅಥವಾ ಸಂಪೂರ್ಣ ಈ ದೃಶ್ಯರೂಪ ಎಂದು ನಿಶ್ಚಯಿಸಲಿಕ್ಕೆ ಆಗುವದಿಲ್ಲ. ಸರ್ವಶ್ರೇಷ್ಟ – ಸರ್ವವ್ಯಾಪಕ – ಒಂದೇ ಒಂದಾಗಿ ಇರುವ ಇದನ್ನೇ ‘ಬ್ರಹ್ಮ’ ಎಂದು ಹೇಳುತ್ತಾರೆ. ವ್ಯಾಪಕವಾಗಿರುವ ‘ಇದು’ ವ್ಯಾಪಕವಾಗಿರುವ ಎಲ್ಲ ಪದಾರ್ಥಗಳಿಗಿಂತ ಸೂಕ್ಷ್ಮವಾಗಿ, ಶ್ರೇಷ್ಟವಾಗಿ, ಒಂದೇ ಒಂದಾಗಿ, ತನ್ನದೇ ಪ್ರಕಾಶದಿಂದ ಬೆಳಗುತ್ತ, ಶಾಶ್ವತ ಸುಖರೂಪವಾಗಿ, ಅನುಭವಕ್ಕೆ ಸಿಗದೇ, ತಾನೇ ಅನುಭವರೂಪವಾಗಿ ಇರುವದು ಎಂದು ವಿಚಾರಾಂತದಲ್ಲಿ ನಿಶ್ಚಿತವಾಗುತ್ತದೆ. ದೇಹದ ಒಳ – ಹೊರ ಎಲ್ಲೆಡೆ ಹಬ್ಬಿರುವ ಈ ಅದ್ವಿತೀಯ ಸ್ವರೂಪ ಒಂದೇ ಒಂದು ಸಲ ಯಾರೊಬ್ಬನಿಗೆ ಅರಿವಾಯಿತು ಎಂದಾದರೆ ಆಗ ಆ ಜೀವ ತನ್ನನ್ನು ತದ್ರೂಪವೆಂದು ನಿಶ್ಚಯಿಸುತ್ತದೆ. ಆಗ ಅಲ್ಲಿ ಉದ್ಭವಿಸುವ ಎಲ್ಲ ವೃತ್ತಿಗಳಲ್ಲಿ ಆ ಸ್ವರೂಪಜ್ಞಾನವೇ ಪರಿಪೂರ್ಣವಾಗಿ ಅನುಭವಕ್ಕೆ ಬರುತ್ತದೆ. ಹೇಗೆ ಅಲೆಗಳು ನೀರಿನಲ್ಲಿ ವಿಲೀನವಾಗಿ ಸಮುದ್ರವೇ ಆಗಿ ಇರುತ್ತದೆಯೋ, ಅದೇ ರೀತಿ ‘ನಾನು’ ಎಂಬ ಸ್ಫುರಣೆಯ ‘ಅರಿವು’ ಉದ್ಭವಿಸಿದಂತೆಯೇ ಜ್ಞಾನಮಾತ್ರ, ಸುಖಸ್ವರೂಪಿ ಪೂರ್ಣಬ್ರಹ್ಮದ ಅದ್ವಿತೀಯತೆಯಲ್ಲೇ ವಿಲೀನವಾಗುತ್ತದೆ. ಅವರ ಆ ಅರಿವಿನ ಅವಸ್ಥೆಯಲ್ಲಿ ಈ ಎಲ್ಲ ಅಂತರ್ಬಾಹ್ಯ ದೃಶ್ಯಗಳ ಬದಲು, ಎಲ್ಲ ಜಾಗ್ರತ ಸ್ವಪ್ನಾದಿಗಳ ದೃಶ್ಯಗಳು ಕೇವಲ ಇಂದ್ರಿಯಗಳಲ್ಲಿ ಗೋಚರವಾಗುತ್ತಿರುವ ದೃಶ್ಯಗಳೆಂದು ಅನಿಸುತ್ತದೆ. ‘ಮಡಿಕೆ’ಯ ಆಕಾರ ಕಾಣುತ್ತಿದ್ದಾಗಲೂ ‘ಮಣ್ಣೆಂಬ’ ದೃಷ್ಟಿ ತೊಲಗದೇ ಇರುವಂತೆ, ಅವನಿಗೆ ಎಲ್ಲ ಆಕಾರಗಳಲ್ಲಿ ಸಚ್ಚಿದಾನಂದ ರೂಪವೇ ಕಣ್ಣಿಗೆ ತಾನೇ ತಾನಾಗಿ ವಿಜ್ರಂಭಿಸುತ್ತದೆ.
ಆ ‘ಅದು’ ಬರೇ ಕಣ್ಣಿಗೆ ಕಾಣುವದಲ್ಲ. ಆ ಪರಬ್ರಹ್ಮ ದೃಷ್ಟಿಗೋಚರನಲ್ಲ.
ಮನೋಚಿಂತನೆ ಃ
ನೀರಿನ ಒಂದು ಗುಳ್ಳೆ ಅಥವಾ ತರಂಗ ಅಗಾಧ ಜಲರಾಶಿಯಲ್ಲಿ ಕೂಡಿ ಏಕರೂಪವಾಯಿತು ಎಂದರೆ ಆಗ ಅದು ಸಮುದ್ರವೇ ಆಗುವಂತೆ, ‘ಅಹಂ’ ಎಂಬ ಸ್ಫೂರ್ತಿ, ಭ್ರಮೆಯಿಂದ ಅನಿಸುವ ಪಿಂಡ ಬ್ರಹ್ಮಾಂಡದ ಆಕಾರವನ್ನು ಕಿತ್ತೊಸೆದು, ಆ ಅಜ್ಞಾನವನ್ನು ವಿವೇಕದಿಂದ ನಷ್ಟಗೊಳಿಸಿ, ಯಥಾರ್ಥ ಸ್ವರೂಪದ ಅರಿವಿನಿಂದ, ಆ ಸಚ್ಚಿದಾನಂದಲ್ಲಿ ಕೇವಲರೂಪದಿಂದ ಲೀನವಾಯ್ತು ಅಂದರೆ, ಗುಳ್ಳೆ ಒಡೆದು ಸಮುದ್ರವೇ ಆದಂತೆ, ಆ ಅಹಂಸ್ಫೂರ್ತಿ ಅಥವಾ ಆ ಸ್ತ್ರೀ-ಪುರುಷ ಜೀವ, ಮನೆ-ಜಗತ್ತು, ಜೀವ-ಈಶ, ಜನ್ಮ-ಕರ್ಮ, ಬಂಧ-ಮೋಕ್ಷ, ಸಾಧನ-ಸಾಧ್ಯ ಹಾಗೇ ಮನಸ್ಸಿನ-ಇಂದ್ರಿಯದ ಎಲ್ಲ ಧರ್ಮಗಳನ್ನು ಕಿತ್ತೊಸೆದು ಪರಬ್ರಹ್ಮನಲ್ಲೇ ಕರಗಿ ಏಕರೂಪವಾಗುತ್ತದೆ.
ದೇಹಾಭಿಮಾನದಿಂದ ಕೂಡಿದ ಜೀವರೂಪಿ ಅಹಂಸ್ಫೂರ್ತಿಗೆ ಹಿಮಗಡ್ಡೆಯ ಉಪಮೆ ಕೊಡಬಹುದು. ವಿವೇಕರೂಪಿ ಉಷ್ಣತೆಯಿಂದ ಕರಗಿದ ಮೇಲೆ ಎಲ್ಲವೂ ನೀರೇ. ಅದರಂತೆ ಜ್ಞಾನಿ ಕೇವಲ ಚಿನ್ಮಾತ್ರ ಬ್ರಹ್ಮ.
ಸಮುದ್ರದ ನೀರಿನಲ್ಲಿ ಅನೇಕ ಗುಳ್ಳೆ ಏಳುತ್ತ ಬೀಳುತ್ತಿದ್ದರೂ, ಬಿದ್ದು ಸಮುದ್ರವೇ ಆದ ಒಂದು ಆ ನೀರಿನ ಗುಳ್ಳೆ, ತನಗಿಂತ ಅಂದರೆ ಸಮುದ್ರಕ್ಕಿಂತ ಬೇರೇನು ಅಲ್ಲಿ ಕಾಣಬಹುದು? ಬ್ರಹ್ಮಸ್ವರೂಪ ಜ್ಞಾನಕ್ಕೆ ಎಲ್ಲವೂ ಅದೇ ನಿತ್ಯ ನಿರ್ವಿಕಾರ ಬ್ರಹ್ಮರೂಪ ಎಂದು ಎಲ್ಲ ದೃಶ್ಯಜಗಳೂ ಒಂದೇ ತರ ಭಾಸವಾಗುತ್ತದೆ. ಆ ದೃಶ್ಯಗಳಲ್ಲಿ ಸ್ವರೂಪಸ್ಮೃತಿರೂಪದ ಅರಿವೇ ಅವನಿಗೆ ದೃಶ್ಯವಾಗಿ ಭಾಸವಾಗುತ್ತದೆ. ಒಂದು ನೀರಿನ ಗುಳ್ಳೆ ಒಡೆದು ಸಮುದ್ರದಲ್ಲಿ ಏಕರೂಪವಾಯಿತು ಎಂದು ಗುಳ್ಳೆಗಳು ಇರಲೇಬಾರದು, ಆಗಲೇಬಾರದು ಎಂದು ಹೇಗೆ ಹೇಳಲಿಕ್ಕೆ ಬರುವದಿಲ್ಲವೋ ಹಾಗೆಯೇ ಒಂದು ಜೀವ ಮುಕ್ತವಾಯಿತು ಎಂದರೆ ಎಲ್ಲ ಜೀವಿಗಳೂ ಮುಕ್ತರಾಗಬೇಕು ಅಥವಾ ಆ ಜೀವಿಯೇ ಇರಬಾರದು ಎಂದು ಹೇಳಲಾಗುವದಿಲ್ಲ. ಪ್ರಾರಬ್ದದ ಯೋಗದಿಂದ ದೇಹವಿರುತ್ತದೆ ಮತ್ತು ಈ ದೇಹ ಬೀಳುವವರೆಗೆ ಮನವೂ ಇರುತ್ತದೆ. ಆದರೆ ಆ ಶುದ್ಧ ಮನ, ಪಿಂಡ-ಬ್ರಹ್ಮಾಂಡ, ಜೀವ-ಈಶ ಇತ್ಯಾದಿಗಳ ಆವರಣಗಳಿಂದ ಮುಕ್ತವಾಗಿರದಿದ್ದಾಗ್ಯೂ, ಅವೆಲ್ಲವೂ ತೆರೆದಿಟ್ಟ ಶುದ್ಧ ಬ್ರಹ್ಮರೂಪದ ‘ಅರಿವಿ’ನದೇ ಎಂದರಿತು, ಕೇವಲ ಶೇಷರೂಪದಲ್ಲಿ ಇರುತ್ತದೆ. ಇದನ್ನೇ ಚರಮ ಅಥವಾ ಜ್ಞಾನದೃಷ್ಟಿ ಎಂದು ಹೇಳುತ್ತಾರೆ. ಇದೇ ತುರಿಯಾವಸ್ಥೆ.
ಮತ್ತೆಲ್ಲಾ ಕ್ಷೇಮ
ಶ್ರೀಧರ
(ಮುಂದುವರಿಯುವದು)