ಭಟ್ಕಳ: ಇನ್ನು 15 ದಿನಗಳಿಗೊಮ್ಮೆ ಭಟ್ಕಳದ ತಹಶಿಲ್ದಾರರ ಕಚೇರಿ ಹಾಗೂ ನೆಮ್ಮದಿ ಕೇಂದ್ರ ಈ ಎರಡೂ ಕಚೇರಿಗಳಿಗೆ ಭೇಟಿ ನೀಡಿ, ಕಚೇರಿಯಲ್ಲೇ ಕುಳಿತು ಸಾರ್ವಜನಿಕರ ಕೆಲಸ ಮಾಡಿಸಿಕೊಡುತ್ತೇನೆ ಎಂದು ಶಾಸಕ ಸುನೀಲ್ ನಾಯ್ಕ ಭರವಸೆ ನೀಡಿದರು. ಅವರು ಇಂದು ತಹಶಿಲ್ದಾರರ ಕಚೇರಿ ಹಾಗೂ ನೆಮ್ಮದಿ ಕೇಂದ್ರದಲ್ಲಿ ನಡೆಯುತ್ತಿರುವ ಅವ್ಯವಸ್ಥೆಯ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಸ್ವತಃ ಕಚೇರಿಗಳಿಗೆ ತೆರಳಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.
ಈ ವೇಳೆ ಮಾತನಾಡಿದ ಅವರು, ಈ ಎರಡೂ ಕಚೇರಿಗಳಲ್ಲಿ ಅವ್ಯವಸ್ಥೆ ಇದೆ ಎಂದು ಸಾರ್ವಜನಿಕರು ದೂರು ನೀಡಿದ್ದರು. ಅದರಂತೆ ಎರಡೂ ಕಡೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ ಎಂದು ತಿಳಿಸಿದರು.
ಇಲ್ಲಿನ ತಹಶಿಲ್ದಾರರ ಕಚೇರಿಯೆಂದರೆ ಜನರು ಮೂಗು ಮುರಿಯುವ ಪರಿಸ್ಥಿತಿ ಉಂಟಾಗಿದೆ. 30 ಸಿಬ್ಬಂದಿ ಇರಬೇಕಾದ ಕಚೇರಿಯಲ್ಲಿ ಕೇವಲ 9 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿಗರ ಭೇಟಿ ಕೊಟ್ಟಾಗ ತಹಶಿಲ್ದಾರರು, ಉಪ ತಹಶಿಲ್ದಾರರು ಕಚೇರಿಯಲ್ಲಿ ಇಲ್ಲ ಎಂದರು.
ಇನ್ಮುಂದೆ ಈ ಅವ್ಯವಸ್ಥೆಗಳನ್ನು ಸರಿಪಡಿಸಿ, ಜನರಿಗೆ ಅನುಕೂಲಕರ ಆಗುವಂತೆ ಮಾಡಿಕೊಡಲು ಪ್ರಯತ್ನಿಸಲಾಗುವುದು. ಈಗಾಗಲೇ ಜಿಲ್ಲಾಧಿಕಾರಿ ಜತೆ ಮಾತನಾಡಿದ್ದು, ಅವರು ಕಾಲಾವಕಾಶ ಕೇಳಿದ್ದಾರೆ. ಸರಿಪಡಿಸಿಕೊಡುವ ಭರವಸೆ ನೀಡಿದ್ದಾರೆ ಎಂದರು.