ಹೊನ್ನಾವರ : ಎತ್ತ ಕಡೆ ನೋಡಿದರೂ ನೆಲಕ್ಕುರುಳಿದ ಮರಗಳು ,ಕಟ್ಟಡಗಳು ,ಅಂಗಡಿಗಳು ಮನೆಗಳು … ಹೊಟ್ಟೆಪಾಡಿಗಾಗಿ ಎಲ್ಲೋ ರಸ್ತೆಯ ಪಕ್ಕದಲ್ಲಿ ಹಾಕಿಕೊಂಡಿದ್ದ ಚಿಕ್ಕಪುಟ್ಟ ಅಂಗಡಿಗಳು ಈಗ ನೆಲಸಮವಾಗಿದ್ದು ಇದೀಗ ಸ್ಮಶಾನದಂತಾಗಿದೆ ಹೊನ್ನಾವರ ತಾಲೂಕಿನ ಹಳದಿಪುರ.
ಚತುಷ್ಪಥ ರಸ್ತೆ ಕಾಮಗಾರಿಯ ಕಾರ್ಯಾಚರಣೆ ನಡೆದಿರುವುದರಿಂದ ಹಳದಿಪುರ ಎತ್ತ ನೋಡಿದ್ರೂ ಬಿಕೋ.. ಎನ್ನುತ್ತಿದೆ . ಅದಷ್ಟೇ ಅಲ್ಲ ಅಂಗಡಿಗಳನ್ನೇ ನಂಬಿಕೊಂಡು ತಮ್ಮ ಜೀವನ ಸಾಗಿಸುತ್ತಿದ್ದ ಅದೆಷ್ಟೋ ಜನ ಬೀದಿಗೆ ಬಂದಿದ್ದಾರೆ ಎಂದರೂ ತಪ್ಪಲ್ಲ .
ಇನ್ನೊಂದು ವಿಪರ್ಯಾಸ ಅಂದ್ರೆ ಕೆಲವರಿಗೆ ಪೂರ್ವ ಮಾಹಿತಿಯೇ ಇಲ್ಲದೆ ಯಾವುದೇ ರೀತಿಯ ಪರಿಹಾರವನ್ನೂ ನೀಡದೆ ಇಲ್ಲಿ ಕಾರ್ಯಾಚರಣೆ ನಡೆಸಲಾಗಿದೆ .ಇದರಿಂದಾಗಿ ಏನೂ ಇಲ್ಲದಂತಾದ ಅಂಗಡಿಕಾರರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ .
ಕುಮಟಾ ಹೊನ್ನಾವರ ಶಾಸಕ ದಿನಕರ್ ಶೆಟ್ಟಿ ಪಾದಯಾತ್ರೆ ನಡೆಸಿ ಜನರ ಅಹವಾಲನ್ನು ಸ್ವೀಕರಿಸಿದರು .ಜನತೆಗೆ ನ್ಯಾಯ ಕೊಡಿಸುವ ಭರವಸೆ ನೀಡಿ ಜಿಲ್ಲಾಧಿಕಾರಿಯವರನ್ನು ಸಂಪರ್ಕಿಸಿ ಈ ಕುರಿತು ಮಾಹಿತಿಯನ್ನು ಪಡೆದುಕೊಂಡರು .ಅದರ ಜೊತೆಗೆ ಪೂರ್ವ ಮಾಹಿತಿ ಇಲ್ಲದೆ ಯಾವುದೇ ಪರಿಹಾರ ನೀಡದೆ ಅಂಗಡಿಗಳನ್ನು ನೆಲಸಮ ಮಾಡಿದ ಬಗ್ಗೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು .
ಚತುಷ್ಪಥ ಕಾಮಗಾರಿಯ ಅಧಿಕಾರಿಗಳು ಬಂದ ಸಂದರ್ಭದಲ್ಲಿ ಅವರ ಮಾತಿನಂತೆ ಪರಿಹಾರದ ಬಗ್ಗೆಯೂ ಯೋಚಿಸದೆ ಅದೆಷ್ಟೋ ಅಂಗಡಿಕಾರರು ತಮಗೇಕೆ ಈ ಉಸಾಬರಿ ಎಂದು ತಮ್ಮ ಅಂಗಡಿಗಳನ್ನು ತಾವೇ ತೆರವು ಮಾಡಿ ಕೊಟ್ಟಿದ್ದಾರೆ ಆದರೆ ಅವರಾರಿಗೂ ಇನ್ನೂ ಬಿಡಿಗಾಸು ಕೈ ಸೇರಿಲ್ಲ .
ಪರಿಹಾರ ನೀಡದೆ ಅಂಗಡಿ ತೆರವು ಪ್ರಕ್ರಿಯೆ ಕೈಗೊಂಡ ಅಧಿಕಾರಿಗಳ ಕ್ರಮ ಈಗ ಠೀಕೆಗೆ ಗುರಿಯಾಗಿದ್ದು ,ಈ ಪ್ರಕ್ರಿಯೆಯಿಂದಾಗಿ ಅದೆಷ್ಟೋ ಬಡ ಅಂಗಡಿಕಾರರ ಜೀವನ ಕಷ್ಟದಾಯಕವಾಗಿದೆ.
ಈ ಬಗ್ಗೆ ಅಧಿಕಾರಿಗಳು ತಕ್ಷಣಕ್ಕೆ ಸ್ಪಂದಿಸಿ ಕಷ್ಟದಲ್ಲಿರುವ ಜನತೆಗೆ ಪರಿಹಾರ ಕೊಡಿಸುವ ಹಾಗೂ ಪರ್ಯಾಯ ವ್ಯವಸ್ಥೆ ಬಗ್ಗೆ ವ್ಯವಸ್ಥೆಮಾಡಲಿ ಎಂಬುದೇ ನಮ್ಮ ಆಶಯ.