ಕುಮಟಾ: ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಸರ್ಜಿಕಲ್ ದಿನಾಚರಣೆಯನ್ನು ವಿಶಿಷ್ಠ ರೀತಿಯಲ್ಲಿ ಆಚರಿಸಲಾಯಿತು. ಛತ್ತಿಸ್‍ಗಡ್ ನಕ್ಷಲ್ ಪೀಡಿತ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧ ವಿನಾಯಕ ನಾರಾಯಣ ಹರಿಕಾಂತ ಅವರನ್ನು ಇಲ್ಲಿನ ಶಿಕ್ಷಕ-ಸಿಬ್ಬಂದಿ ಹಾಗೂ ವಿದ್ಯಾರ್ಥಿವೃಂದವರು ಹೃದಯಂಗಮವಾಗಿ ಸನ್ಮಾನಿಸಿದರು.
ಮುಖ್ಯಾಧ್ಯಾಪಕ ಎನ್.ಆರ್.ಗಜು ಮಾತನಾಡಿ, ಅಂದಿನ ಕಗ್ಗತ್ತಲಲ್ಲಿ ನಮ್ಮ ಯೋಧರ ರೋಚಕ ಸಾಹಸವನ್ನು ವಿವರಿಸುತ್ತಾ ಅವರ ಪರಾಕ್ರಮ ಪರ್ವವನ್ನು ಸ್ಮರಿಸಿದರು. ಭಾರತ-ಪಾಕ್ ನಡುವಿನ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಉಗ್ರ ಶಿಬಿರಗಳ ಮೇಲೆ ಭಾರತೀಯ ಸೇನೆ ಮಿಂಚಿನ ದಾಳಿ ನಡೆಸಿ ಸರಿಯಾಗಿ ಎರಡು ವರ್ಷ ಕಳೆದ ನೆನಪಿಗಾಗಿ ಈ ದಿನವನ್ನು ಇಲಾಖಾ ಆದೇಶದ ಮೇರೆಗೆ ಆಚರಿಸುತ್ತಿದ್ದೇವೆ ಎಂದರು. ಮಹಾಯುದ್ದ ಸಾರಿ ಅಪಾರ ಹಾನಿ ಉಂಟುಮಾಡುವುದಕ್ಕಿಂತ ಇಂತಹ ಯುದ್ದಗಳನ್ನು ನಡೆಸಿ ವೈರಿ ಪಡೆಗಳ ಮೇಲೆಯೇ ನೇರ ಗುರಿದಾಳಿ ಮಾಡಿ ಜನಹಾನಿ ತಡೆಗಟ್ಟಲು ದೇಶ ಮುಂದಾಗಿದ್ದು ಉಜ್ವಲ ಭವಿಷ್ಯದ ಕಲ್ಪನೆಯ ಸಾಕಾರ ಎಂದು ಅಭಿಪ್ರಾಯಪಟ್ಟರು. ಹಿರಿಯ ಶಿಕ್ಷಕ ವಿ.ಎನ್.ಭಟ್ಟ ಮಾತನಾಡಿ ದೇಶ ರಕ್ಷಣೆಗಾಗಿ ತಮ್ಮ ಪ್ರಾಣದ ಹಂಗು ತೊರೆದು ಕಾವಲಾಗಿರುವ ಸೈನಿಕರನ್ನು ಗೌರವಿಸುವುದು ಆ ಮೂಲಕ ವಿದ್ಯಾರ್ಥಿಗಳಿಗೆ ದೇಶ ರಕ್ಷಣೆಯ ಪಾಠ ಹೇಳಿಕೊಡುವುದು ತಮ್ಮ ಜವಾಬ್ದಾರಿ ಕೂಡ ಆಗಿದೆ ಎಂದರು.
ಸನ್ಮಾನ ಸ್ವೀಕರಿಸಿದ ಯೋಧ ವಿನಾಯಕ ಹರಿಕಾಂತ ಪವಿತ್ರ ಕಾರ್ಯದಲ್ಲಿ ತೊಡಗಿಕೊಂಡ ತನಗೆ ದೇಶ ಸೇವೆಯಲ್ಲಿ ಅಪಾರವಾದ ತೃಪ್ತಿ ಇದೆ ಎಂದು ನುಡಿದರು. ಶಾಲಾ ಶಿಕ್ಷಕವರ್ಗ ವಿದ್ಯಾರ್ಥಿವೃಂದದವರು ಪರೀಕ್ಷಾ ಸಮಯವನ್ನು ಲೆಕ್ಕಿಸದೇ ಗೌರವಾರ್ಪಣೆಗೈದು ಸಂತಸಪಟ್ಟರು.