ಯಲ್ಲಾಪುರ:ಪಟ್ಟಣದ ನಾಯಕನಕೆರೆ ಶಾರದಾಂಬಾ ಸಂಸ್ಕೃತ ಪಾಠಶಾಲೆಯ ಸಭಾಭವನದಲ್ಲಿ ವಿದ್ವಾನ್ ಗಾನ ಸಂಮಾನ ಕಾರ್ಯಕ್ರಮ ನಡೆಯಿತು.ವಿದ್ವಾನ್ ಗಾನ ಸಂಮಾನ ಕಾರ್ಯಕ್ರಮದಲ್ಲಿ ಶಿಷ್ಯರು ಹಾಗೂ ಅಭಿಮಾನಿಗಳು ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಹಿರಿಯ ಯಕ್ಷಗಾನ ಭಾಗವತ ವಿದ್ವಾನ್ ಗಣಪತಿ ಭಟ್ಟ ಯಕ್ಷಗಾನ ಎತ್ತರದ ಕಲೆ. ಅನೇಕ ಹಿರಿಯ ಕಲಾವಿದರು ಶತಮಾನಗಳಿಂದ ಶ್ರಮ ವಹಿಸಿ ಯಾವುದೇ ಫಲಾಪೇಕ್ಷೆಯಿಲ್ಲದೇ ಈ ಕಲೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಅವರ ಶ್ರಮದ ಪ್ರತಿಫಲ ಈಗಿನ ಕಲಾವಿದರಿಗೆ ಗೌರವ ರೂಪದಲ್ಲಿ ಲಭ್ಯವಾಗುತ್ತಿದೆ, ಇಂದಿನ ಸನ್ಮಾನ ತಂದೆ-ತಾಯಿ ಹಾಗೂ ಗುರುಗಳಿಗೆ ಸಮರ್ಪಣೆ ಎಂದರು. ಗೌರವ ಎನ್ನುವುದು ವ್ಯಕ್ತಿಗೆ ಸಲ್ಲುವುದಲ್ಲ, ಅವನಲ್ಲಿರುವ ವಿಶೇಷ ಶಕ್ತಿಗೆ ಸಲ್ಲುವುದು. ಈವರೆಗೆ ನನಗೆ ಸಂದ ಗೌರವ, ಸ್ಥಾನಮಾನಗಳೇನೇ ಇದ್ದರೂ ಅವೆಲ್ಲ ನಾನು ಆರಾಧಿಸುವ ಯಕ್ಷಗಾನ ಕಲೆಗೆ ಸಲ್ಲಬೇಕು ಎಂದು ಅವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗ್ವತ ಮಾತನಾಡಿ, ಭಾಗವತಿಕೆಯಲ್ಲಿ ಸಂಗೀತದ ರಾಗ, ರಸಭಾವವನ್ನು ನೀಡಿದವರು ಗಣಪತಿ ಭಟ್ಟ. ಸನ್ಮಾನಕ್ಕೆ ಅರ್ಹತೆಗಿಂತ ಮಿಗಿಲಾದ ಮಾನದಂಡವಿಲ್ಲ. ವಿದ್ವಾನರಂತಹ ಅರ್ಹರನ್ನು ಸನ್ಮಾನಿಸಿರುವುದು ಸನ್ಮಾನಕ್ಕೊಂದು ಅರ್ಥ ಬಂದಿದೆ ಎಂದರು.
ಅಭಿನಂದನಾ ನುಡಿಗಳನ್ನಾಡಿದ ದಿವಾಕರ ಹೆಗಡೆ ಕೆರೆಹೊಂಡ, ಗಣಪತಿ ಭಟ್ಟ ಅವರು ಶಿಕ್ಷಣ, ಅನುಭವ ಹಾಗೂ ಪ್ರಯೋಗಗಳಿಂದ ಸಿದ್ಧಗೊಂಡ ಕಲಾವಿದ. ಯಾವ ಕಸರತ್ತಿಲ್ಲದೇ ಹಾಡಿಗೆ ನ್ಯಾಯ ಸಲ್ಲಿಸಿ ಯಕ್ಷಾಭಿಮಾನಿಗಳ ಮೆಚ್ಚುಗೆ ಗಳಿಸಿದವರು. ಯಾರ ಅನುಕರಣೆಗೆ ಹೋಗದೇ ತನ್ನದೇ ಆದ ಶೈಲಿಯನ್ನು ನಿರೂಪಿಸಿ, ಹೊಸತನಕ್ಕೂ ಹೊಂದಿಕೊಳ್ಳುವ ಮೂಲಕ ವಿದ್ವಾನರು ಹಳತಾಗಿಲ್ಲ. ಪ್ರತಿ ಪದ್ಯಕ್ಕೂ ನ್ಯಾಯ ಒದಗಿಸುವ ಭಾಗವತಿಕೆಯನ್ನು ನೀಡಿ ವಿಶೇಷ ಭಾಗವತರಾಗಿ ಕಾಣಿಸಿಕೊಳ್ಳುತ್ತಾರೆ. ಯಕ್ಷಗಾನದ ನಿಜವಾದ ಪರಿಧಿಯ ವಿಸ್ತರಣೆ ಮಾಡಿ, ಪರಂಪರೆ, ಪ್ರಯೋಗ, ನಿಷ್ಠೆ, ಸರಳತೆ, ಸಜ್ಜನಿಕೆಯಿಂದ ಯಕ್ಷಗಾನದಲ್ಲೊಂದು ಸಂಸ್ಕೃತಿ ಇದೆ ಎಂಬುದನ್ನು ತಿಳಿಸಿದವರು. ವಿದ್ವಾನ್ ಶೈಲಿಯನ್ನು ಯುವ ಕಲಾವಿದರು ಅಳವಡಿಸಿಕೊಂಡು ಉಳಿಸಬೇಕೆಂದರು.
ವಿದ್ವಾನರ ಒಡನಾಡಿಗಳಾದ ಎ.ಪಿ.ಪಾಠಕ, ಶ್ರೀಪತಿ ಉಪಾಧ್ಯಾಯ, ಶಂಕರ ಭಟ್ಟ ಆನೆಜಡ್ಡಿ ಮಾತನಾಡಿದರು. ಗಣೇಶ ಕೊಪ್ಪಲತೋಟ ಅವರು ಛಂದೋಬದ್ಧವಾಗಿ ಯಕ್ಷಸಾಹಿತ್ಯದಲ್ಲಿ ಗಣಪತಿ ಭಟ್ಟ ಅವರ ಕುರಿತು ಬರೆದ ಸನ್ಮಾನಪತ್ರವನ್ನು ವಿದ್ವಾನರ ಶಿಷ್ಯ ಅನಂತ ಹೆಗಡೆ ದಂತಳಿಗೆ ಹಾಡಿದರು.