ಭಟ್ಕಳ:ತಾಲೂಕಿನ ಮುಂಡಳ್ಳಿಯಲ್ಲಿ ಕಳೆದ ಮೂರು ತಿಂಗಳಿನಿಂದ ಮಂಗಗಳು ತೀವ್ರ ಉಪಟಳ ನೀಡುತ್ತಿವೆ. ಮಂಗಗಳ ಗುಂಪೊಂದು ಮುಂಡಳ್ಳಿಯಲ್ಲಿಯೇ ಬೀಡು ಬಿಟ್ಟಿದ್ದು ಬೆಳೆದ ಕೃಷಿ ಉತ್ಪನ್ನಗಳನ್ನು, ತೋಟದ ಉತ್ಪನ್ನಗಳನ್ನು ನಾಶ ಮಾಡುತ್ತಿವೆ. ಅಲ್ಲದೇ ಗುಂಪಿನಲ್ಲಿರುವ ಭಾರೀ ಗಾತ್ರದ ಮಂಗವೊಂದು ಚಲಿಸುತ್ತಿರುವ ಅಟೋದ ಮೇಲೆ ಹಾರಿ ಭಾರೀ ಭಂಗ ಉಂಟು ಮಾಡುತ್ತಿದೆಯಲ್ಲದೇ ಅಟೋದಲ್ಲಿರುವ ಪ್ರಯಾಣಿಕರು ಕಂಗಾಲಾಗುವಂತೆ ಮಾಡಿದೆ ಎಂಬ ಬಗ್ಗೆ ವರದಿಯಾಗಿದೆ.
ಅಟೋದ ಮೇಲೆ ಕುಳಿತು ರೆಕ್ಸಿನ್ ಹರಿಯುವುದಲ್ಲದೇ ಒಳಕ್ಕೆ ಇಣುಕಿ ಭಯ ಹುಟ್ಟುಸುತ್ತದೆ. ಹಲವಾರು ಬಾರಿ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಮಹಿಳೆಯರ ಮೇಲೆ ಎರಗಿ ಹಾನಿ ಮಾಡಿದ್ದಲ್ಲದೇ ಮಕ್ಕಳನ್ನು ಬೆದರಿಸುತ್ತಿದೆ. ಶಾಲಾ ಮಕ್ಕಳು ಈ ದಾರಿಯಲ್ಲಿ ಓಡಾಡಲೂ ಕೂಡಾ ಹೆದರುವ ಪ್ರಸಂಗ ಎದುರಾಗಿದೆ. ಈಗಾಗಲೇ ನೂರಕ್ಕೂ ಹೆಚ್ಚು ಅಟೋಗಳ ಮೇಲೆ ಹಾರಿ ರೆಕ್ಸಿನ್ ಹರಿದು ಹಾನಿ ಮಾಡಿದ್ದಲ್ಲದೇ ಭಯದ ವಾತಾವಣ ಮೂಡಿಸಿದೆ ಎಂದು ಮುಂಡಳ್ಳಿ ಗ್ರಾಮಸ್ಥರು, ರಿಕ್ಷಾ ಚಾಲಕರು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ.
ಮುಂಡಳ್ಳಿಯಲ್ಲಿ ಮಂಗಗಳ ಹಾವಳಿಯನ್ನು ತಡೆಯಲಾಗುತ್ತಿಲ್ಲ ತಕ್ಷಣ ಅವುಗಳನ್ನು ನಿಯಂತ್ರಿಸುವಂತೆ ಸೂಚನೆ ನೀಡಿ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಅರಣ್ಯ ಇಲಾಖೆಗೆ ಈಗಾಗಲೇ ತಿಳಿಸಿದ್ದರೂ ಸಹ ಇನ್ನೂ ತನಕ ಯಾವುದೇ ಕ್ರಮ ಕೈಗೊಂಡಿಲ್ಲ ತಕ್ಷಣ ತಾವು ಅರಣ್ಯಾಧಿಕಾರಿಗಳಿಗೆ ಕೋತಿಗಳ ಕಾಟದಿಂದ ಮುಂಡಳ್ಳಿ ನಾಗರೀಕರಿಗೆ ಮುಕ್ತಿ ಕೊಡಿಸಿ ಎಂದು ವಿನಂತಿಸಿದ್ದಾರೆ.