ಶಿರಸಿ : ಜಗತ್ತೆಲ್ಲ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಸ್ವಾಮಿ ವಿವೇಕಾನಂದರ ಐತಿಹಾಸಿಕ ಚಿಕಾಗೋ ಭಾಷಣಕ್ಕೆ ಈ ಸಪ್ಟೆಂಬರ್ ೧೧ಕ್ಕೆ ೧೨೫ವರ್ಷಗಳು ಪೂರ್ಣವಾಗಿವೆ. ಚಿಕಾಗೋ ಸೇರಿದಂತೆ ಪಶ್ಚಿಮದಲ್ಲಿನ ವಿವೇಕಾನಂದರ ಭಾಷಣಗಳು ಹಿಂದುತ್ವಕ್ಕೆ ಮತ್ತು ನವಭಾರತ ನಿರ್ಮಾಣಕ್ಕೆ ದಿಕ್ಸೂಚಿಯಾಗಿವೆ. ೧೨೫ವರ್ಷಗಳ ನಂತರವೂ ಅವರ ಭಾಷಣ ಕೋಟ್ಯಾಂತರ ಭಾರತೀಯರಿಗೆ ಪ್ರೇರಣೆಯಾಗಿದೆ. ಸ್ವಾಮಿ ವಿವೇಕಾನಂದರ ಪ್ರಭಾವಕ್ಕೆ ಒಳಗಾದ ಪಶ್ಚಿಮದ ಸೋದರಿ ನಿವೇದಿತಾ ಭಾರತ ಮಾತೆಯ ಸೇವೆಗೆ, ಭಾರತದ ಏಳ್ಗೆಗೆ ನಿವೇದನೆಯಾದ ಪುಷ್ಪ. ಭಾರತವನ್ನು ಅರ್ಥೈಸಿಕೊಳ್ಳಬೇಕೆಂದರೆ ಸೋದರಿ ನಿವೇದಿತೆಯನ್ನು ಓದಬೇಕು ಎಂದು ತಿಳಿದವರು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಸ್ವಾಮಿ ವಿವೇಕಾನಂದರನ್ನು ಹಾಗೂ ಸೋದರಿ ನಿವೇದಿತೆಯ ಚಿಂತನೆಗಳನ್ನು ಸಮಾಜಕ್ಕೆ ತಲುಪಿಸಬೇಕಾಗಿದೆ. ಈ ಉದ್ದೇಶದೊಂದಿಗೆ ಯುವಾ ಬ್ರಿಗೇಡ್ ಮತ್ತು ಸೋದರಿ ನಿವೇದಿತಾ ಪ್ರತಿಷ್ಠಾನ ಸಂಘಟನೆಗಳ ವತಿಯಿಂದ ‘ಮತ್ತೊಮ್ಮೆ ದಿಗ್ವಿಜಯ’ ಎಂಬ ರಥಯಾತ್ರೆಯನ್ನು ಹಮ್ಮಿಕೊಂಡಿದೆ. ಸ್ವಾಮಿ ವಿವೇಕಾನಂದರನ್ನು ಹಾಗೂ ಸೋದರಿ ನಿವೇದಿತೆಯನ್ನು ಹೊಂದಿರುವ ಭವ್ಯ ರಥವು ರಾಜ್ಯಾದ್ಯಂತ ಸಂಚರಿಸುತ್ತಿದ್ದು ಇದೇ ಅಕ್ಟೋಬರ್ 2 ಮಂಗಳವಾರ ಬೆಳಿಗ್ಗೆ ಶಿರಸಿ ನಗರಕ್ಕೆ ಆಗಮಿಸಲಿದೆ. ಬೆಳಿಗ್ಗೆ 9:30 ಗಂಟೆಗೆ ಶಿರಸಿ ಹಳೆ ಬಸ್ ನಿಲ್ದಾಣ ವೃತ್ತದಲ್ಲಿ ರಥಯಾತ್ರೆಯನ್ನು ಮಾತೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಲಿದ್ದಾರೆ.

RELATED ARTICLES  ಕೈ ಕೊಟ್ಟ ಪ್ರೇಯಸಿ : ಆತ್ಮಹತ್ಯೆಗೆ ಯತ್ನಿಸಿದ ಯುವಕ.

ಇದೇ ಸಂದರ್ಭದಲ್ಲಿ ಶಿರಸಿಯ ವಿವಿಧ ಕ್ಷೇತ್ರದ ಗಣ್ಯರಿಂದ ರಥಯಾತ್ರೆಗೆ ಚಾಲನೆ ದೊರೆಯಲಿದೆ. ಈ ಸಂದರ್ಭದಲ್ಲಿ ಯುವಾ ಬ್ರಿಗೇಡ್ ಮಾರ್ಗದರ್ಶಕರಾದ ಖ್ಯಾತ ವಾಗ್ಮಿ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರು ಉಪಸ್ಥಿರುತ್ತಾರೆ. 10:00 ಗಂಟೆಗೆ ಚಂಡೆ, ವಾದ್ಯಗಳೊಂದಿಗೆ ಪ್ರಾರಂಭವಾಗುವ ಶೋಭಾಯಾತ್ರೆಯು ಶಿವಾಜಿ ಚೌಕ್ – ಸಿ.ಪಿ.ಬಝಾರ್ ಮಾರ್ಗವಾಗಿ ದೇವಿಕೆರೆ ಮೂಲಕ ಅಶ್ವಿನಿ ವೃತ್ತವನ್ನು ಸುತ್ತುವರೆದು ವಿಕಾಸಾಶ್ರಮ ತಲುಪಲಿದೆ. ಈ ಶೋಭಾಯಾತ್ರೆಯಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳು, ಸೇವಾದಳ, ಎನ್.ಸಿ.ಸಿ., ಎನ್.ಎಸ್.ಎಸ್ ಕಾರ್ಯಕರ್ತರು ಹಾಗೂ ಲಯನ್ಸ್ ಶಾಲೆಯ ವತಿಯಿಂದ ದಿವ್ಯತ್ರಯರ ವಿಶೇಷವಾದ ಬಂಡಿ(ಟ್ಯಾಬ್ಲೊ) ಇರಲಿದೆ.
ನಂತರದಲ್ಲಿ ಬೆಳಿಗ್ಗೆ 11:00 ಗಂಟೆಗೆ ಶಿರಸಿಯ ವಿಕಾಸಾಶ್ರಮ ಬಯಲಿನಲ್ಲಿ ಶ್ರೀ ಚಕ್ರವರ್ತಿ ಸೂಲಿಬೆಲೆ ಅವರ ದಿಕ್ಸೂಚಿ ಭಾಷಣ ಒಳಗೊಂಡಂತೆ ಬೃಹತ್ ಸಾರ್ವಜನಿಕ ಸಮಾವೇಶ ನಡೆಯಲಿದೆ. ಈ ಸಭೆಯಲ್ಲಿ ಶಿರಸಿಯ ರುದ್ರದೇವರ ಮಠದ ಪರಮಪೂಜ್ಯ ಶ್ರೀ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಹಾಗೂ ಸರಿಗಮಪ ಖ್ಯಾತಿಯ ರಜತ್ ಹೆಗಡೆ ಮತ್ತು ಭಾರತದ ರಾಷ್ಟ್ರೀಯ ಮಹಿಳಾ ಥ್ರೋಬಾಲ್ ತಂಡದ ನಾಯಕಿ ಹಾಗೂ 14 ಅಂತರರಾಷ್ಟ್ರೀಯ ಚಿನ್ನದ ಪದಕಗಳನ್ನು ಗೆದ್ದಿರುವ ಶ್ರೀಮತಿ ಸಂಪೂರ್ಣಾ ಹೆಗಡೆ ಅವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸರ್ವ ದೇಶಭಕ್ತ ಬಂಧುಗಳನ್ನು ಯುವಾ ಬ್ರಿಗೇಡ್ ಶಿರಸಿ ಆಹ್ವಾನಿಸುತ್ತದೆ‌.

RELATED ARTICLES  ದಿ.೨೨ ರಂದು ಕುಮಟಾ ರೋಟರಿ ಲೈಫ್ ಸಪೋರ್ಟ್ ಯೋಜನಾನುಷ್ಠಾನದ ಹಸ್ತಾಂತರ ಸಮಾರಂಭ.

ಶಿರಸಿಯ ಕಾರ್ಯಕ್ರಮದ ನಂತರ ದಿಗ್ವಿಜಯ ರಥವು ಬನವಾಸಿಯಲ್ಲಿ ಸಂಚರಿಸಲಿದೆ. ಹೆಚ್ಚಿನ ಮಾಹಿತಿಗಾಗಿ +919482557153 ಸಂಪರ್ಕಿಸಬಹುದಾಗಿದೆ.

ವಿವೇಕಾನಂದರ ಆದರ್ಶಗಳನ್ನು ಜನಮಾನಸಕ್ಕೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ರಥಯಾತ್ರೆಯ ಸಂದರ್ಭದಲ್ಲಿ ಸಾರ್ವಜನಿಕರು, ಅಂಗಡಿ ಮುಂಗಟ್ಟುಗಳ‌ ಮಾಲೀಕರು ಪುಷ್ಪಾರ್ಚನೆಯೊಂದಿಗೆ ಹಾಗೂ ಸಭಾಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು.