ಬೆಂಗಳೂರು :ನಾನೊಬ್ಬ ಮಹಿಳೆಯಾಗಿ ಹುಟ್ಟಿರುವುದಕ್ಕೆ ನಾನು ತುಂಬಾ ಹೆಮ್ಮೆ ಪಡುತ್ತೇನೆ. ಸಂಸಾರದ ಜವಾಬ್ದಾರಿಗಳನ್ನು ನಿಭಾಯಿಸುತ್ತಾ, ಸಾಮಾಜಿಕವಾಗಿಯೂ ತೊಡಗಿಸಿಕೊಳ್ಳುವ ಮಹಿಳೆಯ ಕೌಶಲ್ಯ ಶ್ಲಾಘನೀಯ. ಮಕ್ಕಳು ಪುಸ್ತಕದಲ್ಲಿ ಮುಳುಗುವಂತೆ ಮಾಡಬಾರದು, ಸಮಾಜದ ಜೊತೆ ಬೆರೆಯುವಂತೆ ಮಾಡಬೇಕು ಎಂದು ಖ್ಯಾತ ಕಲಾವಿದೆ ಸೀತಾ ಕೋಟೆ ಹೇಳಿದರು.
ಮಲ್ಲೇಶ್ವರದ ಹವ್ಯಕ ಮಹಾಸಭೆಯ ಪ್ರಾಂಗಣದಲ್ಲಿ ಪ್ರಥಮಬಾರಿಗೆ ನಡೆದ “ಹವ್ಯಕ ಮಹಿಳಾ ಸಮಾವೇಶ”ದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ,ಮಹಾಸಭೆಯ ಅಧ್ಯಕ್ಷರಾದ ಡಾ. ಗಿರಿಧರ್ ಕಜೆ, “ಗೃಹಿಣಿ ಗೃಹಮುಚ್ಯತೇ” ಎಂದು ಹೇಳಲಾಗಿದೆ. ಕುಟುಂಬ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಹೃದಯದ ಸ್ಥಾನವನ್ನು ನೀಡಲಾಗಿದ್ದು, ಆಕೆ ಸರಿಯಾಗಿ ಕಾರ್ಯ ನಿರ್ವಹಿಸಿದಾಗ ಸಂಪೂರ್ಣ ಮನೆ ಚನ್ನಾಗಿರುತ್ತದೆ. ಆದರೆ ಅದಕ್ಕೆ ವ್ಯತಿರಿಕ್ತವಾದಾಗ “ಗೃಹ ಮುಚ್ಚತ್ತೆ” ಆಗುತ್ತದೆ. ಹಾಗಾಗಿ ಮಹಿಳೆಯ ಪಾತ್ರ ಹಿರಿದು. ಮಾತೆಯರು ಒಟ್ಟಾದರೆ ಸಮಾಜ ಸಶಕ್ತವಾಗಿ, ಮುಂದಿನ ಪೀಳಿಗೆ ಉತ್ತಮ ಪೀಳಿಗೆಯಾಗುತ್ತದೆ. ಹವ್ಯಕ ಸಂಸ್ಕೃತಿ ಸಂಸ್ಕಾರಗಳನ್ನು ಜಾಗೃತಗೊಳಿಸುವ ಕಾರ್ಯವನ್ನು ಮಹಿಳೆಯರು ಮಾಡಬೇಕು ಎಂದು ಕರೆನೀಡಿದರು.
ಹವ್ಯಕ ಮಹಾಸಭೆಯ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಮಹಿಳಾ ಸಮಾವೇಶ ನಡೆದಿದ್ದು, ಇದರಲ್ಲಿ ಮಹಿಳೆಯರು ಒಗ್ಗಟ್ಟಾಗಿರುವುದು ಸಂತಸ ಉಂಟುಮಾಡಿದೆ. ಡಿಸೆಂಬರ್ 28, 29,30 ರಂದು ಅರಮನೆ ಮೈದಾನದಲ್ಲಿ “ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ” ನಡೆಯಲಿದ್ದು ನಾವೆಲ್ಲರೂ ಒಗ್ಗಟ್ಟಾಗಿ ಅದನ್ನು ಐತಿಹಾಸಿಕ ಕಾರ್ಯಕ್ರಮವನ್ನಾಗಿಸೋಣ ಎಂದು ತಿಳಿಸಿದರು.
ಒಗ್ಗಟ್ಟಾಗಿ ಅಪಪ್ರಚಾರಗಳಿಗೆ ತಕ್ಕ ಉತ್ತರವನ್ನು ನೀಡಬೇಕಿದೆ :
ಹವ್ಯಕರೆಲ್ಲ ಒಗ್ಗಟ್ಟಾಗಿ ಅಪಪ್ರಚಾರಗಳಿಗೆ ತಕ್ಕ ಉತ್ತರವನ್ನು ನೀಡಬೇಕಿದೆ. ನಾಲ್ಕಾರು ಜನರಿರುವ ಸಣ್ಣ ಪುಟ್ಟ ಒಕ್ಕೂಟಗಳು, ಮಾಧ್ಯಮಗಳ ಮುಂದೆ ಸಮಾಜದ ಅವಹೇಳನ ಮಾಡುವ ಪ್ರಕ್ರಿಯೆಗಳಿಗೆ ಸಮಾಜ ಒಗ್ಗಟ್ಟಾಗಿ ಉತ್ತರ ನೀಡೋಣ ಎಂದು ಅಧ್ಯಕ್ಷರಾದ ಡಾ. ಕಜೆ ಹೇಳುತ್ತಿದ್ದಂತೆ ಸಭೆಯಲ್ಲಿ ಭಾರೀ ಕರತಾಡನದ ಮೂಲಕ ಸಹಮತ ವ್ಯಕ್ತವಾಯಿತು.
ಮಕ್ಕಳಿಗೆ ಸಂಸ್ಕಾರ ಕೊಡುವುದರಲ್ಲಿ ಮಹಿಳೆಯ ಪಾತ್ರ ಹಿರಿದಾಗಿದ್ದು, ಹುಟ್ಟಿನ ನಂತರವಲ್ಲ, ಗರ್ಭಾವಸ್ಥೆಯಿಂದಲೇ ಮಗುವಿಗೆ ಸಂಸ್ಕಾರ ಕೊಡುವ ಕಾರ್ಯ ಆರಂಭಿಸಬೇಕು. ಮಕ್ಕಳು ಹೆಚ್ಚಿನ ಅಂಕ ಪಡೆಯಬೇಕು ಎಂಬುದನ್ನಷ್ಟೇ ಯೋಚಿಸದೆ, ಮಗುವಿನ ಆಸಕ್ತಿಯ ವಿಷಯದಲ್ಲಿ ಮಕ್ಕಳನ್ನು ಬೆಳಸಬೇಕು ಎಂದು ಡಾ. ಸುವರ್ಣಿನಿ ಕೊಣಾಲೆ ಅಭಿಪ್ರಾಯಪಟ್ಟರು.
ಗಮನ ಸೆಳೆದ ಪ್ರತಿಭಾಪ್ರದರ್ಶನ :
ಹವ್ಯಕ ಮಹಿಳೆಯರ ಕೋಲಾಟ, ಭರತನಾಟ್ಯ, ಯಕ್ಷನೃತ್ಯ, ರೂಪಕ, ಹಾಡು , ಫ್ಯಾಷನ್ ಷೋ ಸೇರಿದಂತೆ ಮಹಿಳಾ ಪ್ರತಿಭಾ ಪ್ರದರ್ಶನ ಕಾರ್ಯಕ್ರಮಗಳು ಜನರ ಗಮನಸೆಳೆದರೆ, ಮಹಿಳೆಯರಿಗಾಗಿ ಆಯೋಜಿಸಿದ್ದ ವಿವಿಧ ಆಟೋಟಗಳು, ಕರಕುಶಲ ಮೇಳ ಕಾರ್ಯಕ್ರಮಕ್ಕೆ ಮೆರುಗನ್ನು ತಂದುಕೊಟ್ಟಿತ್ತು. ಪ್ರಬಂಧ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾಧವರಿಗೆ ಬಹುಮಾನ ವಿತರಿಸಲಾಯಿತು.
50 ವರ್ಷ ದಾಂಪತ್ಯ ಜೀವನ ಪೂರೈಸಿದ ನಾಡಿನ ನಾನಾ ಭಾಗದ 8 ಹಿರಿಯ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಅಂತೆಯೇ 4 ಜನ ಮಹಿಳಾ ನಾಟಿ ವೈದ್ಯರನ್ನು ಗೌರವಿಸಲಾಯಿತು.
ಮಹಿಳಾ ಸಮಾವೇಶದ ಸಂಚಾಲಕಿ ಮಾಮತಾ ಜೋಷಿ ಮಾತನಾಡಿ, ಪ್ರತಿದಿನ ಮನೆಯ ದೈನಂದಿನ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಮಹಿಳೆಯರು ಇಂದು ಒಗ್ಗಟ್ಟಾಗಿ ಇಲ್ಲಿ ಸೇರಿದ್ದೇವೆ. ಕಡಿಮೆ ಅವಧಿಯಲ್ಲಿ ಆಯೋಜಿತವಾದ ಈ ಕಾರ್ಯಕ್ರಮಕ್ಕೆ ಸಮಾಜದಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಗ್ಗಟ್ಟಾಗಿ ಸಮಾಜದ ಒಳಿತಿಗೆ ತೊಡಗಿಕೊಳ್ಳೋಣ ಎಂದ ಅವರು, ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.
ಯಶಸ್ವಿಯಾದ ಸಮಾರೋಪ
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ, ಡಾ. ಶಾರದಾ ಜಯಗೋವಿಂದ, ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಕಲಾ ಶಾಸ್ತ್ರಿ ಹಾಗೂ ಅನುಪಮಾ ಹೆಗಡೆ ಅತಿಥಿಗಳಾಗಿ ಭಾಗವಹಿಸಿದ್ದರು.
ಉತ್ತರ ಕನ್ನಡ ಜಿ.ಪಂ ಸದಸ್ಯೆ ಹಾಗೂ ಬಿಜೆಪಿ ಮುಖಂಡರಾದ ಶ್ರೀಕಲಾ ಶಾಸ್ತ್ರೀ ಮಾತನಾಡಿ ಹವ್ಯಕ ಸಮಾಜದ ಜನರು ಹಿಂದೆ ಜಮೀನುದಾರರಾಗಿದ್ದವರು ನಂತರದಲ್ಲಿ ತಮ್ಮ ಜಮೀನುಗಳನ್ನು ಕಳೆದುಕೊಳ್ಳುವಂತಾಯಿತು. ಅಂತಹ ಸಂದರ್ಭದಲ್ಲಿಯೂ ಮಹಿಳೆಯರು ಸಮರ್ಥವಾಗಿ ಮನೆ ನಿಭಾಯಿಸಿದವರು ಎಂದರು. ಹವ್ಯಕರು ಬುದ್ದಿವಂತರು ಇವರ ಸಾಮರ್ಥ್ಯ ಅತ್ಯಂತ ವಿಶಾಲವಾದುದು. ಹವ್ಯಕ ಮಕ್ಕಳ ಬುದ್ದಿಮತ್ತೆ ಹಾಗೂ ಸಾಮರ್ಥ ಅಗಾಧವಾದುದು ಎಂದರು.
ಹವ್ಯಕರು ಪರಸ್ಪರ ಸಹಕಾರ ಹಾಗೂ ಸಹಾಯದ ಮೂಲಕ ಬದುಕಬೇಕು. ಇತರರಿಗೆ ಒಳಿತು ಮಾಡಲು ಪ್ರಯತ್ನ ಪಡುವ ನಾವುಗಳು ನಮ್ಮ ಸಮಾಜದ ಒಳಿತಿನೆಡೆಗೂ ಚಿಂತನೆ ನಡೆಸಬೇಕು ಎಂದು ಅಭಿಪ್ರಾಯಪಟ್ಟರು. ಸಮಾಜದ ಜನರ ಜೊತೆಗೆ ತಾವು ಹಿಂದಿನಿಂದಲೂ ಇದ್ದು ಮುಂದೆಯೂ ಅಗತ್ಯ ಇರುವವರಿಗೆ ಸಹಾಯ ಮಾಡುವುದಾಗಿ ತಿಳಿಸಿದರು.
75ರ ಸಂಭ್ರಮದಲ್ಲಿ ಹವ್ಯಕರ ಮಹಾಸಭೆ,ಅದಕ್ಕೆ ಪೂರಕವಾಗಿ ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅದರಲ್ಲಿ ಈ ಹವ್ಯಕ ಮಹಿಳಾ ಸಮಾವೇಶ ಒಂದು.
ಹೊನ್ನಾವರ, ಕುಮಟಾದಲ್ಲಿ ಹವ್ಯಕರ ಭಾಷೆ ಸ್ವಲ್ಪ ಬೇರೆ ರೀತಿ ಹಾಗೆಯೇ ದಕ್ಷಿಣ ಕನ್ನಡದಲ್ಲಿಯೂ ಬೇರೆ ರೀತಿ ಇರುತ್ತದೆ ಏನೇ ಇದ್ದರೂ ಸಹ, ಆ ಬಾಂಧವ್ಯ ಮತ್ತು ಪ್ರೀತಿ ಒಂದೇ ಎಂದು ಹೇಳಿದರು.
ಹವ್ಯಕರ ಮೂಲ ಎಲ್ಲೆಂದರೆ, ಹೊನ್ನಾವರ ತಾಲ್ಲೂಕಿನ ಹೈಗುಂದ ದಿಂದ ಪ್ರಾರಂಭವಾದದ್ದು. ಹವ್ಯಕರು ಮೊದಲಿನಿಂದಲೂ ಅಡಿಕೆ ತೋಟಗಳನ್ನು ನಂಬಿಕೊಂಡು ಬಂದಿದ್ದಾರೆ. ಹವ್ಯಕರು ಉತ್ತಮ ಕೃಷಿಕರು ಎಂದು ತಿಳಿಸಿದರು .
ಮಹಿಳಾ ಸಾಧಕರಲ್ಲಿ ಒಬ್ಬರಾದ ದೊಡ್ಮನೆ ರಾಮಕೃಷ್ಣ ಹೆಗಡೆಯವರ ಮನೆತನದ ಮಾದೇವಿ ತಾಯಿ ಎಂಬುವರು ಆಗಿನ ಕಾಲದಲ್ಲಿ ಬ್ರಿಟಿಷ್ ರ ವಿರುದ್ಧ ಹೋರಾಡಿದ ಧೀರ ಮಹಿಳೆ .
ಮಲ್ಟಿ ಟಾಸ್ಕ್ ಎಂಬುದು ಮಹಿಳೆಯರಿಗೆ ವರದಾನವಾಗಿ ಬಂದಿದೆ.10 ಕೆಲಸವನ್ನು ಒಂದೇ ಸಲ ಮಾಡುವ ಶಕ್ತಿ ಹವ್ಯಕರ ಮಹಿಳೆಯರಿಗೆ ಇದೆಯೇ ಎಂದರು. ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮ ಕೈಯಲ್ಲಿದೆ ಎಂದರು.
ಒಂದು ಕಾಲದಲ್ಲಿ ಹವ್ಯಕ ಕುಟುಂಬಗಳು ದೊಡ್ಡ ದೊಡ್ಡ ಜಮೀನ್ದಾರ ಗಿದ್ದರು.ಆದರೆ ಈಗ ಅಷ್ಟೇ ಜಮೀನುಗಳನ್ನು ಕಳೆದುಕೊಂಡಿದ್ದಾರೆ .
ಹೆಣ್ಣು ಮಕ್ಕಳು ಎಂತಹ ಪರಿಸ್ಥಿತಿ ಬಂದರೂ ಅಂದರೆ 25 ಎಕರೆ ಇದ್ದವ 25 ಗುಂಟೆಗೆ ಇಳಿದು ಹೋದ್ರೂ ಸಹ ಅಂತಹ ಸಂದರ್ಭದಲ್ಲೂ ಜವಾಬ್ದಾರಿ ತೆಗೆದುಕೊಂಡು ಸಂಸಾರ ನಡೆಸುತ್ತಿದ್ದರು.
ಹವ್ಯಕ ಸಮಾಜದಲ್ಲಿರುವ ಹೊಂದಾಣಿಕೆ ಮತ್ತು ಬಾಂಧವ್ಯ ಯಾವ ಸಮಾಜದಲ್ಲೂ ಇಲ್ಲ ಎಂದರು.ಹವ್ಯಕ ಸಮಾಜವು ಬುದ್ಧಿವಂತರ ಸಮಾಜ ಅವರು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಡಬೇಕು ಎಂದರು.ಹವ್ಯಕರಲ್ಲಿ ಅತ್ಯಂತ ಶ್ರೀಮಂತರು ಅಲ್ಲದೆ ಕಡು ಬಡವರು ಸಹ ಇದ್ದಾರೆ ಎಂದರು.
ಪ್ರಧಾನ ಕಾರ್ಯದರ್ಶಿ ಸಿ ಎ ವೇಣು ವಿಘ್ನೇಶ್, ಪ್ರಶಾಂತ್ ಭಟ್, ಶ್ರೀಧರ್ ಭಟ್ ಸಾಲೇಕೊಪ್ಪ, ಚಂಪಕಾ ಭಟ್ , ಅಖಿಲಾ ಹೆಗಡೆ, ಕಮಲಾಕ್ಷಿ ಹೆಗಡೆ ಸೇರಿದಂತೆ ಹಲವಾರು ಉಪಸ್ಥಿತರಿದ್ದರು