ಕುಮಟಾ : ಸ್ವಾಮಿ ವಿವೇಕಾನಂದರು ಭಾರತ ದೇಶ ಕುರಿತು ಚಿಕಾಗೋದಲ್ಲಿ ಮಾಡಿದ ಭಾಷಣಕ್ಕೆ 125 ವರ್ಷ ಸಂದ ಹಿನ್ನೆಲೆಯಲ್ಲಿ ಯುವಾ ಬ್ರಿಗೇಡ್ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನದಿಂದ ರಾಜ್ಯಾದ್ಯಂತ ಆಯೋಜಿಸಿರುವ ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆ ಇಂದು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.
ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದಿಂದ ಕುಮಟಾ ಪಟ್ಟಣ ಮಾರ್ಗವಾಗಿ ಸಾರೋಟ್‌ನಲ್ಲಿ ಪ್ರತಿಷ್ಠಾಪಿಸಿದ್ದ ಸ್ವಾಮಿ ವಿವೇಕಾನಂದರ ಪ್ರತಿಮೆಯ ರಥವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೆರವಣಿಗೆ ಮಾಡಲಾಯಿತು.
ಗಾರುಡಿ ಗೊಂಬೆ,ಪೇಟಾ ತೊಟ್ಟ ಜನರ ನೃತ್ಯ ,ಚಂಡೆ, ನಗಾರಿ, ಮಹಿಳೆಯರ ಭಜನಾ ತಂಡಗಳು ಹಾಗೂ ಪೂರ್ಣ ಕುಂಬ ಹಿಡಿದ ಮಹಿಳೆಯರು ಮೆರವಣಿಗೆಯಲ್ಲಿ ಸಾಗಿದವು.
ಕುಮಟಾ ತಾಲೂಕಿನ ಅನೇಕ ಶಾಲೆ ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಭಾವಚಿತ್ರ, ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಗಮನ ಸೆಳೆದರು.
ಯುವಾ ಬ್ರಿಗೇಡ್ ರಾಜ್ಯ ಮಾರ್ಗದರ್ಶಕ ಶ್ರೀ ಚಕ್ರವರ್ತಿ ಸೂಲಿಬೆಲೆ ಮಾತನಾಡಿ ಸ್ವಾಮಿ ವಿವೇಕಾನಂದ ಎನ್ನುವುದು ಒಂದು ಪ್ರಖರ ಶಕ್ತಿ .ನೂರ ಇಪ್ಪತ್ತೈದು ವರ್ಷಗಳ ಹಿಂದೆ ಅವರು ಚಿಕಾಗೋದಲ್ಲಿ ಮಾಡಿದ ಭಾಷಣ ಇಂದಿಗೂ ಹಸಿರಾಗಿದೆ .ಭಾರತೀಯರನ್ನು ತುಚ್ಛವಾಗಿ ಕಾಣುತ್ತಿದ್ದ ಸಂಸ್ಕೃತಿಯನ್ನು ಅಳಿಸಿ ಹಾಕಿದವರು ಸ್ವಾಮಿ ವಿವೇಕಾನಂದರು .ಹಿಂದೂ ಸಂಪ್ರದಾಯದಲ್ಲಿರುವ ಎಲ್ಲ ದೇವತೆಗಳನ್ನು ಒಂದೆಡೆ ಕಟ್ಟಿಟ್ಟು ಭಾರತ ಮಾತೆಯನ್ನು ಐವತ್ತು ವರ್ಷ ಪೂಜಿಸಿ ಎಂದವರು ಸ್ವಾಮಿ ವಿವೇಕಾನಂದರು . ಸ್ವಾಮೀಜಿಯವರ ಮಾತುಗಳಿಂದ ಪ್ರಭಾವಿತರಾಗಿ ಸೋದರಿ ನಿವೇದಿತಾ ಭಾರತಕ್ಕೆ ಬಂದು ವಿವೇಕಾನಂದರ ಆದರ್ಶಗಳನ್ನು ಮುನ್ನಡೆಸಿಕೊಂಡು ಬಂದರು ಎಂದು ಅವರು ಹೇಳಿದರು .ಸ್ವಾಮಿ ವಿವೇಕಾನಂದರ ಆದರ್ಶಗಳು ತತ್ವಗಳನ್ನು ಜನರಲ್ಲಿ ಜಾಗೃತಿ ಮಾಡುವ ಮೂಲಕ ದೇಶಾಭಿಮಾನವನ್ನು ಬೆಳೆಸುವುದೇ ಇದರ ಉದ್ದೇಶವಾಗಿದೆ ಎಂದರು . ಪ್ರತಿಯೊಬ್ಬ ಭಾರತೀಯ ನಲ್ಲಿರುವ ಸುಪ್ತ ಈ ದೇಶಾಭಿಮಾನವನ್ನು ಹೊರ ಹಾಕಲು ಈ ರಥಯಾತ್ರೆ ಕೈಗೊಂಡಿರುವುದಾಗಿ ಅವರು ತಿಳಿಸಿದರು .
ಶನಿ ದಾರಾವಾಹಿಯ ನಟ ಹಾಗೂ ಸಭಾ ಅತಿಥಿಗಳಾಗಿ ಹಾಜರಿದ್ದು ಮಾತನಾಡುತ್ತಾ ಸ್ವಾಮಿ ವಿವೇಕಾನಂದರ ಕುರಿತಾಗಿ ಶಾಲಾ ನಾಟಕ ಪ್ರದರ್ಶನ ಮಾಡುವ ಅವಕಾಶ ಸಿಕ್ಕಂದಿಗಿನ ಅವರ ಪ್ರೇರಣೆಯನ್ನು ಅವರು ಬಿತ್ತರಿಸಿದರು. ಸ್ವಾಮಿ ವಿವೇಕಾನಂದರು ದೇಶ ಕುರಿತು ಚಿಕಾಗೋನಲ್ಲಿ ಮಂಡಿಸಿದ ವಿಚಾರಧಾರೆಗಳನ್ನು ಯುವಜನರಿಗೆ ಮನದಟ್ಟು ಮಾಡಲು ರಥ ಯಾತ್ರೆ ನಡೆಸಲಾಗುತ್ತಿದೆ. ಪ್ರಸ್ತುತ ದಿನಗಳಲ್ಲಿ ಯುವಕರನ್ನು ದೇಶಸೇವೆಗೆ ಪ್ರೇರೇಪಿಸುವುದು ರಥಯಾತ್ರೆಯ ಉದ್ದೇಶವಾಗಿದೆ ಎಂದು ಹೇಳಿದರು.
ಶ್ರೀ ಭವೇಶಾನಂದ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಯುವ ಜನರನ್ನು ಬಡಿದೆಬ್ಬಿಸುವ ನಿಟ್ಟಿನಲ್ಲಿ ಸ್ವಾಮಿ ವಿವೇಕಾನಂದರು ಸಾರಿದ ಸಂದೇಶಗಳು ಸರ್ವಕಾಲಿಕ ಎಂದು ಅಭಿಪ್ರಾಯಪಟ್ಟರು.
ಬಾಡದಲ್ಲಿ ಕೆರೆಯ ಹೂಳೆತ್ತಿ ಜಲ ತರಿಸಿದ ಪುಟಾಣಿ ಮಕ್ಕಳನ್ನು ಸನ್ಮಾನಿಸಲಾಯಿತು.
ಯುವ ಬ್ರಿಗೇಡ್ ಕಾರ್ಯಕರ್ತ ಕಿರಣ ಪ್ರಾಸ್ಥಾವಿಕ ಮಾತನಾಡಿದ ಕುಮಟಾ ಯುವ ಬ್ರಿಗೇಡ್ ಕಾರ್ಯಯೋಜನೆ ಹಾಗೂ ಕೈಗೊಂಡ ಕಾರ್ಯಗಳನ್ನು ಸವಿಸ್ತಾರವಾಗಿ ತೆರೆದಿಟ್ಟರು.ಅಂತರ್ ಕಾಲೇಜು ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಈಶ್ವರ ಭಟ್ಟ ಕಾರ್ಯಕ್ರಮ ನಿರೂಪಿಸಿದರು.