ಕುಮಟಾ: ಗಾಂಧೀಜಿಯವರ 150 ನೆಯ ಜನ್ಮೋತ್ಸವದ ಅಂಗವಾಗಿ ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ರಾಮಮನೋಹರ ಲೋಹಿಯಾ ಅವರು ಗಾಂಧೀಜಿಯವರೊಂದಿಗಿನ ಒಡನಾಟದ ಕುರಿತಾಗಿ ಬರೆದ ಮಹಾತ್ಮಾ ಗಾಂಧಿ ಕನ್ನಡ ಅನುವಾದಿತ ಪುಸ್ತಕವನ್ನು ಅನಾವರಣಗೊಳಿಸಲಾಯಿತು. ಅನುವಾದಕ, ಹಿರಿಯ ಕವಿ ಡಾ.ಬಿ.ಎ.ಸನದಿ ಉಪಸ್ಥಿತರಿದ್ದ ಈ ಸಮಾರಂಭದಲ್ಲಿ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಖ್ಯಾತ ಸಾಹಿತಿ ಶಾಂತಾರಾಮ ನಾಯಕ “ರಾಮಮನೋಹರ ಲೋಹಿಯಾ ಕಂಡಂತೆ ಗಾಂಧಿ ಹೇಗಿದ್ದರು ಎನ್ನುವುದನ್ನು ಡಾ.ಬಿ.ಎ.ಸನದಿ ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದಾರೆ” ಎಂದು ಅಭಿಪ್ರಾಯಪಟ್ಟರು. ಗಾಂಧಿ ಮತ್ತು ಲೋಹಿಯಾ ನಡುವೆ ಅನೇಕ ಭಿನ್ನಾಭಿಪ್ರಾಯವಿದ್ದಾಗಲೂ ಅವರಿಬ್ಬರೂ ಪರಸ್ಪರ ಹೊಂದಿರುವ ಗೌರವ ಭಾವನೆಗಳು ಈ ರಾಷ್ಟ್ರ ನಿರ್ಮಾಣಕ್ಕೆ ಪೂರಕವಾಗಿದ್ದವು ಎನ್ನುವುದು ಕೃತಿಯಿಂದ ವಿದಿತವಾಗುತ್ತದೆ ಎಂದರು. ಸತ್ಯ ಅಹಿಂಸೆಯ ಮೂಲಕ ಸ್ವಾತಂತ್ರ್ಯ ತಂದುಕೊಡುವಲ್ಲಿ ಯಶಸ್ವಿಯಾದ ಗಾಂಧಿಯನ್ನು ಸ್ವಾತಂತ್ರ್ಯೋತ್ಸವದ ಭಾರತ ಹಿಂಸೆಯಿಂದ ಕೊಂದುದನ್ನು ದುರಂತವೆಂದು ವಿಷಾದಿಸಿದರು. ಮುಂದುವರಿದು, ಭಾರತ ಪಾಕಿಸ್ಥಾನ ವಿಭಜನೆಗೆ ಗಾಂಧಿ ಕಾರಣ ಎಂಬ ಮಿಥ್ಯಾರೋಪವನ್ನು ಮಾಡುತ್ತಿರುವವರಿಗೆ ಲೋಹಿಯಾ ಕಂಡ ಗಾಂಧಿಯಲ್ಲಿ ಉತ್ತರ ಸಿಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
IMG 20181002 WA0005
ಅತಿಥಿಗಳಾಗಿ ಆಗಮಿಸಿದ ಸಾಹಿತಿ ಕೃಷ್ಣ ನಾಯಕ, ಹಿಚ್ಕಡ ಅವರು ಗಾಂಧಿ ಸಂಪೂರ್ಣ ಬದುಕಿನ ಸ್ವರಚಿತ ಹೈಕುಗನ್ನು ಮಕ್ಕಳೆದುರು ಅರ್ಥವತ್ತಾಗಿ ಸೊಗಸಾಗಿ ಅಭಿವ್ಯಕ್ತಪಡಿಸಿದರು. ಇಂದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಗಾಂಧಿ ಸೂತ್ರಗಳನ್ನು ಹೆಚ್ಚು ಹೆಚ್ಚು ಪ್ರಚುರ ಪಡಿಸಬೇಕಾದ ಅಗ್ಯತತೆಯನ್ನು ಒತ್ತಿಹೇಳಿದರು. ಶಾಂತಿದೂತ ರಾಷ್ಟ್ರಪಿತನ ಹತ್ಯೆಯಾದಾಗ ಇಡಿಯ ಜಗತ್ತು ಮರುಗಿದ್ದನ್ನು ಮತ್ತು ತೋರಿದ ಗೌರವದ ಪರಿ ಐತಿಹಾಸಿಕವಾದುದನ್ನು ಸ್ಮರಿಸಿದರು. ಗಾಂಧಿ ಹೆಸರಿನ ಈ ಶಾಲೆ ತುಂಬಾ ಗಾಂಧಿ ವಿಚಾರಧಾರೆಗಳಿಂದ ಸತ್ಯಾನ್ವೇಷಣೆಗಳ ಫಲಕಗಳಿಂದ ಸದಾ ಬೆಳಗುವಂತಾಗಲಿ ಅದಕ್ಕೆ ತಾನೂ ನೆರವಾಗುವೆ ಎಂದು ಶುಭಕೋರಿದರು.

RELATED ARTICLES  ಬಾಡ ಗ್ರಾಮದಲ್ಲಿ ಎಮ್.ಎಸ್.ಐ.ಎಲ್. ಮದ್ಯದಂಗಡಿ ಸ್ಥಾಪನೆ ವಿಚಾರ : ಮಾತಿನ ಚಕಮಕಿ

ಕವಿ ಸನದಿ ಗಾಂಧಿ ಕುರಿತಾದ ತಮ್ಮ ಕಾವ್ಯಲಹರಿಯ ಆಸ್ವಾದನೆಯನ್ನೇ ಮುದ್ದು ಮಕ್ಕಳಿಗೆ ಉಣಬಡಿಸಿದರು. ಕವಿಪತ್ನಿ ನಝೀರಾ ಸನದಿ ಸಾಥ್ ನೀಡಿದರು. ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಅನಿಲ್ ರೊಡ್ರಿಗಸ್ ಸರ್ವಧರ್ಮ ಪ್ರಾರ್ಥನೆ ಮತು ಗಾಂಧೀಜಿಗಿರುವ ಅವಿನಾಭಾವ ಸಂಬಂಧ ಹಾಗೂ ಅದನ್ನು ನಾವು ಪಾಲಿಸಬೇಕಾದ ಅನಿವಾರ್ಯತೆಯನ್ನು ವಿವರಿಸಿದರು. ಸಾಹಿತಿ ಪ್ರೊ.ಟಿ.ಜಿ.ಭಟ್ಟ ಹಾಸಣಗಿ ತಾವು ವಿದ್ಯಾರ್ಥಿ ಜೀವನದಲ್ಲಿದ್ದಾಗಿನ ಗಾಂಧಿ ಜಂಯಂತ್ಯಾಚರಣೆಯ ಸಡಗರವನ್ನು ನೆನಪಿಸಿಕೊಳ್ಳುತ್ತಾ ತಾಲೂಕಿನಲ್ಲಿಯೇ ಅಪರೂಪವೆನಿಸುವ ಇಂಥ ಕಾರ್ಯಕ್ರಮಗಳ ಸಂಘಟನೆಯನ್ನು ಪ್ರಶಂಸಿಸಿದರು.

ಹಿರಿಯ ಗಾಂಧೀವಾದಿ, ಗಾಂಧಿ ತತ್ವದ ಉಪಾಸಕ ಶೇಷಗಿರಿ ಶಾನಭಾಗ, ತಾವು ಗಾಂಧಿ ಹಾಕಿಕೊಟ್ಟ ಸತ್ಯ ಧರ್ಮ ಅಹಿಂಸೆಯ ಮಾರ್ಗದಲ್ಲಿ ನಡೆಯುವಾಗಿನ ಸಂತಸ ಮತ್ತು ಮುಜುಗುರದ ಸನ್ನಿವೇಶಗಳನ್ನು ತೆರೆದಿಟ್ಟರು. ಆಶುಕವಿ ಸುರೇಶ ಭಟ್ಟ ‘ನಾ ಕಂಡಿಲ್ಲ ದೇವರನ್ನು, ನಾ ಕಂಡಿಲ್ಲ ಗಾಂಧಿಯನ್ನು, ನಾ ಕಂಡೆ ನಮ್ಮೂರ ನಿಧಿಯನ್ನು, ಸನದಿಯೆಂಬ ಮಾಹನುಭಾವನನ್ನು’ ಎಂದು ಸನದಿ ಕುರಿತಾದ ಕವನ ಕಟ್ಟಿ ಹಾಡಿದರು. ಕವಿ ಬೀರಣ್ಣ ನಾಯಕ ಮತು ವೆಂಕಟೇಶ ಬೈಲೂರು ಕವಿ ನಮನ ಸಲ್ಲಿಸಿದರು.

RELATED ARTICLES  ಅಟಲ್ ಚಿತಾಭಸ್ಮದ ಮೆರವಣಿಗೆ: ಮೌನ ಮೆರವಣಿಗೆ ಮೂಲಕ ನಮನ ಸಲ್ಲಿಸಿದ ಕುಮಟಾ ಜನತೆ.

ಇಂದು ರಾಜ್ಯದ ಕೆಲವೇ ಕೆಲವು ಆಯ್ದ ಭಾಗಗಳಲ್ಲಿ ಬಿಡುಗಡೆಗೊಂಡಿರುವ ಈ ಪುಸ್ತಕ ನಮ್ಮ ಜಿಲ್ಲೆಯಲ್ಲಿ ಅದೂ ನಮ್ಮ ಶಾಲೆಯಲ್ಲಿ, ಸನದಿ ವಾಸಸ್ಥಳದಲ್ಲಿ ಸನದಿಯವರ ಸನ್ನಿಧಿಯಲ್ಲಿ ಬಿಡುಗಡೆಗೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯ ಶಿಕ್ಷಕ ಎನ್.ಆರ್.ಗಜು ಅಭಿಪ್ರಾಯಿಸಿದರು.

ಪ್ರಾರಂಭದಲ್ಲಿ ಸ್ಚಚ್ಛತೆಯೇ ಸೇವೆಯೆಂಬಂತೆ ಒಂದು ಗಂಟೆ ಶ್ರಮದಾನ ಕೈಗೊಳ್ಳಲಾಯಿತು. ಕಾರ್ಯಕ್ರಮಕ್ಕೆ ಮೊದಲು ಗಾಂಧಿ ಮತ್ತು ಶಾಸ್ರ್ತೀ ಭಾವಚಿತ್ರಗಳಿಗೆ ಅತಿಥಿಗಳು ಪುಷ್ಪನಮನ ಸಲ್ಲಿಸಿದರು. ಕುಮಾರಿ ಸೌಂದರ್ಯಾ ಮತ್ತು ಸಂಗಡಿಗರು ಗಾಂಧೀಜಿಗೆ ಪ್ರಿಯವಾದ ರಘುಪತಿ ರಾಘವ ರಾಜಾರಾಮ ಭಜನೆ ಹಾಡಿದರು. ಡಾ.ಬಿ.ಎ.ಸನದಿ ಸಾಹಿತ್ಯ ಸಂಘದ ಸಂಚಾಲಕ ಸುರೇಶ ಪೈ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.

ವಿದ್ಯಾರ್ಥಿಗಳಾದ ಕುಮಾರ ವಿಶ್ವಾಸ ಪೈ, ರಕ್ಷಿತಾ ಪಟಗಾರ, ನಿವೇದಿತಾ ಪಟಗಾರ ಅತಿಥಿಗಳನ್ನು ಪರಿಚಯಿಸಿದರು. ಕುಮಾರಿ ಮುಕ್ತಾ ಭಟ್ಟ ರಾಮಮನೋಹರ ಲೋಹಿಯಾ ಕುರಿತು ಪರಿಚಯದ ಮಾತನಾಡಿದರು. ಶಿಕ್ಷಕ ಹಾಗೂ ಜಿ.ಎಸ್.ಬಿ.ಯುವವಾಹಿನಿಯ ಅಧ್ಯಕ್ಷ ಕಿರಣ ಪ್ರಭು ನಿರೂಪಿಸಿದರು. ಶಿಕ್ಷಕ ಹಾಗೂ ಯಕ್ಷಗಾನ ಕಲಾವಿದ ವಿ.ಎನ್.ಭಟ್ಟ ಕೊನೆಯಲ್ಲಿ ವಂದಿಸಿದರು. 282 ವಿದ್ಯಾರ್ಥಿಗಳು ಗಾಂಧಿ ಹುಟ್ಟು ಹಬ್ಬದಾಚರಣೆಯಿಂದ ಮುದಗೊಂಡರು.