ಹೆದ್ದಾರಿ ಅಗಲೀಕರಣ ಕಾಮಗಾರಿಯಿಂದಾಗಿ ಮಳೆಯ ನೀರು ಸರಾಗವಾಗಿ ಹರಿದು ಹೋಗದೆ ಕೃತಕ ನೆರೆ ಇತ್ಯಾದಿ ತೊಂದರೆಗಳು ಉಂಟಾಗಬಹುದಾದ ಸ್ಥಳಗಳನ್ನು ಗುರುತಿಸಿ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಸ್.ನಕುಲ್ ಅವರು ಐಆರ್‍ಬಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಐಆರ್‍ಬಿ ಸಂಸ್ಥೆ ಪ್ರತಿನಿಧಿಗಳು ಹಾಗೂ ವಿವಿಧ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಮಳೆಗಾಲ ಪೂರ್ವದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆಗಳನ್ನು ನೀಡಿದರು.
ರಸ್ತೆಯ ಎರಡು ಬದಿಗಳಲ್ಲಿ ಮಳೆಯ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆಯನ್ನು ಮಾಡಬೇಕು. ರಸ್ತೆಗೆ ಅಡ್ಡವಾಗಿ ಮೋರಿಗಳ ನಿರ್ಮಾಣ ಕಾರ್ಯವನ್ನು ತ್ವರಿತಗೊಳಿಸಬೇಕು. ಗುಡ್ಡ ಕುಸಿತ ಸಂಭವಿಸಬಹುದಾದ ಸ್ಥಳಗಳನ್ನು ಗುರುತಿಸಿ ಸಂಭಾವ್ಯ ಅವಘಡ ತಪ್ಪಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಕಳೆದ ಬಾರಿ ಗುಡ್ಡ ಕುಸಿತ ಉಂಟಾದ ಸ್ಥಳಗಳಲ್ಲಿ ಹೆಚ್ಚಿನ ಮುನ್ನಚ್ಚರಿಕೆ ಅಗತ್ಯ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಕುಮಟಾ ವಿಭಾಗದಲ್ಲಿ 16ಕಡೆಗಳಲ್ಲಿ ಮಣ್ಣು ಕುಸಿತ ಸಂಭವಿಸಬಹುದಾದ ಸ್ಥಳಗಳನ್ನು ಗುರುತಿಸಲಾಗಿದೆ. ಇದೇ ರೀತಿ ಎಲ್ಲಾ ವಿಭಾಗಗಳಲ್ಲಿ ಅಂತಹ ಸ್ಥಳಗಳನ್ನು ಗುರುತಿಸಿ ಪಟ್ಟಿಯನ್ನು ತಕ್ಷಣ ಒದಗಿಸಬೇಕು. ಧಾರೇಶ್ವರ ಮತ್ತು ಕುಮಟಾ ಭಾಗದಲ್ಲಿ ಮೋರಿ ನಿರ್ಮಾಣ ಕಾರ್ಯವನ್ನು ತ್ವರಿತಗೊಳಿಸಬೇಕು. ಮಳೆಗಾಲದ ಒಳಗಾಗಿ ಕಾರವಾರದ ಸದಾಶಿವಗಢ ಗುಡ್ಡವನ್ನು ತೆರವುಗೊಳಿಸುವ ಕಾರ್ಯವನ್ನು ಪೂರ್ಣಗೊಳಿಸಬೇಕು. ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಹಸ್ತಾಂತರಿಸಲಾಗಿರುವ ಸ್ಥಳಗಳಲ್ಲಿ ಸಹ ಇನ್ನೂ ಕಾಮಗಾರಿಯನ್ನು ಪ್ರಾರಂಭಿಸಿರುವುದಿಲ್ಲ. ಹಸ್ತಾಂತರಿಸಲಾಗಿರುವ ಸ್ಥಳಗಳಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲು ಅಡ್ಡಿಯೇನಿದೆ ಎಂದು ಜಿಲ್ಲಾಧಿಕಾರಿ ಅವರು ಪ್ರಶ್ನಿಸಿದರು.
ಬೋರ್‍ವೆಲ್, ಪೈಪ್‍ಲೈನ್ ಅಳವಡಿಸಬೇಕು: ಚತುಷ್ಪಥ ಕಾಮಗಾರಿಯಿಂದಾಗಿ ಹಾಳಾಗಿರುವ ಬೋರ್‍ವೆಲ್ ಹಾಗೂ ನೀರಿನ ಪೈಪ್‍ಲೈನ್‍ಗಳನ್ನು ಐಆರ್‍ಬಿ ವತಿಯಿಂದ ಪುನರ್ ನಿರ್ಮಿಸಬೇಕು. ಎಷ್ಟು ಬೋರ್‍ವೆಲ್‍ಗಳು ಕಾಮಗಾರಿಯಿಂದ ತೆರವಾಗಿವೆ ಎಂಬ ಕುರಿತು ಮಾಹಿತಿಯನ್ನು ಒದಗಿಸುವಂತೆ ತಹಶೀಲ್ದಾರ್‍ಗಳಿಗೆ ಅವರು ಸೂಚನೆ ನೀಡಿದರು.
ಮಳೆಗಾಲದಲ್ಲಿ ಹೆದ್ದಾರಿಯಲ್ಲಿ ಅಪಘಾತ ಸಂಭವಿಸುವ ಸಾಧ್ಯತೆಗಳು ಅಧಿಕವಿದ್ದು, ಈ ಹಿನ್ನೆಲೆಯಲ್ಲಿ ಕಾಮಗಾರಿ ನಡೆಯುವ ಸ್ಥಳಗಳಲ್ಲಿ, ತಿರುವುಗಳಲ್ಲಿ ಎಚ್ಚರಿಕೆ ಫಲಕಗಳನ್ನು ಕಡ್ಡಾಯವಾಗಿ ಹಾಕಬೇಕು. ತಾತ್ಕಾಲಿಕ ಬ್ಯಾರಿಕೇಡ್‍ಗಳನ್ನು ಸಮರ್ಪಕವಾಗಿ ಅಳವಡಿಸಿ ಅದಕ್ಕೆ ರಿಫ್ಲೆಕ್ಟರ್‍ಗಳನ್ನು ಅಳವಡಿಸಬೇಕು. ಮಳೆಯಿಂದ ಹಾನಿ ಸಂಭವಿಸಿದರೆ ತಕ್ಷಣ ಕಾರ್ಯಪ್ರವೃತ್ತವಾಗಲು ಐಆರ್‍ಬಿ ಅಧಿಕಾರಿ ಸಿಬ್ಬಂದಿಗಳು ಯಂತ್ರೋಪಕರಣಗಳೊಂದಿಗೆ ಸದಾ ಸನ್ನದ್ಧರಾಗಿರಬೇಕು. ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿದರೆ ಮಳೆಗಾಲದಲ್ಲಿ ಯಾವುದೇ ಅವಘಡಗಳು ಸಂಭವಿಸುವುದನ್ನು ತಪ್ಪಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಆರ್.ದೇವರಾಜ್, ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್‍ಗಳು, ಐಆರ್‍ಬಿ ಸಂಸ್ಥೆಯ ಪ್ರತಿನಿಧಿಗಳು, ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು