ನವದೆಹಲಿ: ಗೋಕರ್ಣದ ಮಹಾಬಲೇಶ್ವರ ದೇವಸ್ಥಾನವನ್ನು ಮುಂದಿನ ಆದೇಶದವರೆಗೆ ರಾಮಚಂದ್ರಾಪುರ ಮಠದ ಸುಪರ್ದಿಗೆ ಒಪ್ಪಿಸಲು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಕುರಿಯನ್ ಜೋಸೆಫ್, ಎ.ಎಂ. ಖನ್ವಿಲ್ಕರ್ ಪೀಠ ಬುಧವಾರ ಆದೇಶ ಹೊರಡಿಸಿದ್ದಾರೆ.
ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಆಡಳಿತವನ್ನು, ದೇವಸ್ಥಾನದ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಹೈಕೋರ್ಟ್ ಆದೇಶದ ಮೇರೆಗೆ ಸೆ.19ರಂದು ವಹಿಸಿಕೊಂಡಿದ್ದರು. ಇದನ್ನು ಪ್ರಶ್ನಿಸಿ ರಾಮಚಂದ್ರಾಪುರ ಮಠ ನ್ಯಾಯಪೀಠದ ಎದುರು ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿತ್ತು.
ಗೋಕರ್ಣ ದೇಗುಲದ ಉಸ್ತುವಾರಿಯನ್ನು ಜಿಲ್ಲಾಡಳಿತಕ್ಕೆ ನೀಡಿದ್ದ ಸರ್ಕಾರದ ಆದೇಶವನ್ನು ಹಿಂಪಡೆಯುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ದೇವಾಲಯದ ಆಡಳಿತ ಮೇಲ್ವಿಚಾರಣೆಗಾಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ನೇತೃತ್ವದಲ್ಲಿ ರಾಜ್ಯ ಸರ್ಕಾರ ಉತ್ತರ ಕನ್ನಡ ಜಿಲ್ಲಾಧಿಕಾರಿ ಸೇರಿ 6 ಸದಸ್ಯರ ಉಸ್ತುವಾರಿ ಸಮಿತಿ ರಚಿಸಿತ್ತು.
ಆದರೀಗ ಶ್ರೀ ರಾಮಚಂದ್ರಾಪುರ ಮಠವೇ ಆಡಳಿತ ಮುಂದುವರೆಸಲು ಸುಪ್ರೀಂ ಸೂಚನೆ ನೀಡಿದ್ದು ಈ ಬಗ್ಗೆ ಕಾರ್ಯಗಳು ನಡೆಯಲಿದೆ ಎನ್ನಲಾಗಿದೆ.
ಕೆಲ ಪಟ್ಟಭದ್ರ ಹಿತಾಸಕ್ತಿಗಳು ಶ್ರೀ ರಾಮಚಂದ್ರಾಪುರ ಮಠದ ಮೇಲೆ ಪಿತೂರಿ ನಡೆಸುತ್ತಿದ್ದು .ಈ ತೀರ್ಪಿನಿಂದಾಗಿ ಅವರಿಗೆ ಹಿನ್ನೆಡೆ ಉಂಟಾದಂತಾಗಿದೆ.