ಲೇಖನ : ವಿದ್ವಾನ್ ಗಜಾನನ ಶರ್ಮಾ

ಅಂದು ಕೊಡಗನ್ನು ಪುನರ್ನಿರ್ಮಿಸುವ ಗುರುತರ ಹೊಣೆಗಾರಿಕೆ ಹೆಗಲಮೇಲಿತ್ತು. ರಾಜ್ಯದ ಮೂರನೇ ಒಂದು ಭಾಗದಷ್ಟು ತಾಲ್ಲೋಕುಗಳು ಬರದ ಬೆಂಕಿಯಲ್ಲಿ ಸುಡುತ್ತಿದ್ದವು. ಬ್ಯಾಂಕಿನವರು ಸಾಲವನ್ನು ಭರಿಸಲು ನೀಡುತ್ತಿದ್ದ ನೋಟೀಸಿಗೆ ಹೆದರಿ ಸಾಲು ಸಾಲು ರೈತರು ಸಾವಿಗೆ ಶರಣಾಗುತ್ತಿದ್ದರು. ಮಹದಾಯಿಯ ನೀರು ಬಳಸಿಕೊಳ್ಳುವ ಯೋಜನೆ, ಹೊಗೇನಕಲ್ ಯೋಜನೆ, ಬರಪೀಡಿತ ಬಯಲುಸೀಮೆಗೆ ಕುಡಿಯುವ ನೀರು ಒದಗಿಸುವ ಯೋಜನೆ, ಬೆಂಗಳೂರಿನ ಮೆಟ್ರೋ ಎರಡು ಮೂರನೇ ಹಂತ ಹೀಗೆ ಹತ್ತು ಹಲವು ಆದ್ಯತೆಯ ಕೆಲಸಗಳು ಕಾಯುತ್ತಿದ್ದವು. ಸುಪ್ರೀಂ ಕೋರ್ಟಿನ ಆದೇಶದ ಸಂದಿಗ್ಧತೆಯಲ್ಲಿ ಹಿಂಬಡ್ತಿ ಮುಂಬಡ್ತಿ ಪ್ರಕರಣ ತೂಗುಯ್ಯಾಲೆಯಲ್ಲಿ ತೊಯ್ದಾಡುತ್ತಿತ್ತು………

ಆದರೆ ಇದೆಲ್ಲದಕ್ಕಿಂತ ಮೊದಲ ಆದ್ಯತೆ ಎಂಬಂತೆ ಸುಪ್ರೀಂ ಕೋರ್ಟಿನ ಆದೇಶವೊಂದನ್ನು ಅಪವ್ಯಾಖ್ಯಾನಿಸಿ ತರಾತುರಿಯಲ್ಲಿ ಗೋಕರ್ಣ ದೇವಾಲಯವನ್ನು ವಶಕ್ಕೆ ಪಡೆಯುವ ಪ್ರಕ್ರಿಯೆಯಲ್ಲಿ ಸರ್ಕಾರ ಅತೀವ ಆಸಕ್ತಿ ಮೆರೆಯಿತು!

ಯಾಕೆ? ಯಾಕೆ ಬೇಕಿತ್ತು ಈ ಅರ್ಜೆನ್ಸಿ? ಏನಿತ್ತು ಅಂತಹ ಎಮರ್ಜೆನ್ಸಿ!?
ಆದೇಶವನ್ನು ಅರ್ಥೈಸಲು ಸಾಕಷ್ಟು ಸಮಯ ತೆಗೆದುಕೊಂಡು ಸರಿಯಾಗಿ ವ್ಯಾಖ್ಯಾನಿಸಿ ನ್ಯಾಯಯುತ ತೀರ್ಮಾನ ಕೈಗೊಂಡಿದ್ದರೆ ಮಹಾಬಲೇಶ್ವರ ಮರುಗುತ್ತಿದ್ದನೇ?
ರಾತ್ರಿಬೆಳಗಾಗುವುದರಲ್ಲಿ ಗೋಕರ್ಣದ ಆತ್ಮಲಿಂಗವನ್ನು ರಾವಣ ಮತ್ತೆ ಬಂದು ಹೊತ್ತೊಯ್ಯುತ್ತಿದ್ದನೇ? ಗೋಕರ್ಣ ಪಟ್ಟಣ ಸುನಾಮಿಯಲ್ಲಿ ಕೊಚ್ಚಿಹೋಗುತ್ತಿತ್ತೇ?
ಯಾಕೆ ಬೇಕಿತ್ತು ಅಷ್ಟೊಂದು ಆತುರ!?

ಸುಪ್ರೀಂ ಕೋರ್ಟ್ ನೀಡಿದ ಆದೇಶದಲ್ಲಿ, ಸಂಶಯವಿದ್ದಿದ್ದರೆ, ದ್ವಂದ್ವವಿದ್ದರೆ ಅದರ ಬಳಿಗೆ ಹೋಗಿ ಸಮಜಾಯಿಷಿ ಪಡೆಯಬಹುದಿತ್ತಲ್ಲವೇ?
ನಿಜ, ಈಗಲೂ ಮಹಾಬಲೇಶ್ವರ ದೇಗುಲ ರಾಮಚಂದ್ರಾಪುರದ್ದೆಂದು ಸುಪ್ರೀಂಕೋರ್ಟ್ ಹೇಳಿಲ್ಲ. ನಾಳೆ ಅದನ್ನು ರಾಮಚಂದ್ರಾಪುರಕ್ಕೆ ನೀಡಿದ್ದು ಸರಿ ಎನ್ನಲೂಬಹುದು, ತಪ್ಪು ಎಂದೂ ನಿರ್ಣಯಿಸಬಹುದೇನೋ? ಅದು ಯಾವ ತೀರ್ಮಾನಕ್ಕೆ ಬರುವುದೋ ಅದು ಕಾನೂನಿಗೆ ಮತ್ತು ಕಾಲಕ್ಕೆ ಬಿಟ್ಟ ವಿಚಾರ. ಅದು ಮುಂದಿನ ಮಾತು. ಆದರೆ ಸರ್ಕಾರ ಈಗ ಅದನ್ನು ಕಿತ್ತುಕೊಂಡಿದ್ದು, ಅದೂ ಆದೇಶವನ್ನು ಅಪವ್ಯಾಖ್ಯಾನಿಸಿ ವಶಕ್ಕೆ ಪಡೆದು ಪರವಶವಾದದ್ದು ಯಾವ ಪುರುಷಾರ್ಥಕ್ಕೆ? ನಿತ್ಯ ಅನ್ನದಾಸೋಹ, ಸಂತ ಗೌರವದಂತಹ ಸಾರ್ಥಕ ಕಾರ್ಯಗಳು ನಡೆಯುತ್ತಿದ್ದದ್ದು ಕಣ್ಣು ಕುಕ್ಕಿತೇ? ಅಥವಾ ಕಾಣದ ಕೈಗಳು ಸರ್ಕಾರದ ಮೇಲೆ ಪ್ರಭಾವ ಬೀರಿದವೇ?
ದಯವಿಟ್ಟು ಸಂತರನ್ನು, ಶರಣರನ್ನು ವಿನಾಕಾರಣ ಅವಮಾನ ಮಾಡಬೇಡಿ.ಅದು ಯಾರನ್ನೂ ಸುಮ್ಮನೆ ಬಿಡದು. ಸಂತರೊಡನೆ ಮರೆದು ಸರಸವನಾಡಿದರೆ ಏನಾಗುವುದೆಂಬುದನ್ನು ಬಸವಣ್ಣನವರ ವಚನವೊಂದು ಹೀಗೆ ವರ್ಣಿಸುತ್ತದೆ …..

RELATED ARTICLES  ಶೌಚಾಲಯದಲ್ಲಿ ಬಚ್ಚಿಡಲಾಗಿತ್ತು ಬರೋಬ್ಬರಿ 7 ಕೋಟಿ ರೂಪಾಯಿ

ಹಾವಿನ ಹೆಡೆಗಳ ಕೊಂಡು
ಕೆನ್ನೆಯ ತುರಿಸಿಕೊಂಡಂತೆ,
ಹುಲಿಯ ಮೀಸೆಯ ಹಿಡಿದು
ಒಲಿದು ಉಯ್ಯಾಲೆಯ ಆಡಿದಂತೆ,
ಉರಿವ ಕೊಳ್ಳಿಯ ಹಿಡಿದು
ಮಂಡೆಯ ಸಿಕ್ಕ ಬಿಡಿಸಿದಂತೆ,
ಕೂಡಲ ಸಂಗನ ಶರಣರೊಡನೆ
ಮರೆದು ಸರಸವಾಡಿದರೆ
ಸುಣ್ಣದ ಕಲ್ಲ ಮಡಿಲಲ್ಲಿ ಕಟ್ಟಿಕೊಂಡು
ಮಡುವ ಬಿದ್ದಂತೆ!

ಯಾಕೆ ಸ್ವಾಮಿ ಇಂತಹದ್ದೊಂದು ಅಪಾಯಕಾರೀ ಕಟು ನಿರ್ಧಾರ?
ನಿತ್ಯವೂ ನಾಡಿನುದ್ದಗಲದಿಂದ ಸಂತರು ಬಂದು ಸಂತಸದಿಂದ ಆತ್ಮಲಿಂಗವನ್ನು ಅರ್ಚಿಸಿ ಹೋಗುತ್ತಿದ್ದುದನ್ನು ಸಹಿಸದವರು ಶಂಖ ಊದಿದರೆ?ಸಾವಿರಾರು ಭಕ್ತರು ಮಹಾಬಲನನ್ನು ಪೂಜಿಸಿ ಪುನೀತರಾಗಿ, ಅಮೃತಾನ್ನವನುಂಡು ಆನಂದದಿಂದ ಹಿಂತಿರುಗುತ್ತಿದ್ದುದನ್ನು ಕಂಡು ಕರುಬಿದವರು ಕಹಿ ಉಗುಳಿದರೇ? ಏನಾಯಿತು? ಯಾಕಿಂತ ನಿರ್ಧಾರ!?
ಸರ್ಕಾರಕ್ಕೆ ಮಾಡಲು ಅದೆಷ್ಟು ಕೆಲಸಗಳಿವೆ. ಹೇಳಿಕೇಳಿ ಇದು ಜಾತ್ಯಾತೀತ ಸರ್ಕಾರ. ಇಂತಹ ಸರ್ವಧರ್ಮ ಸಮನ್ವಯದ ಸರ್ಕಾರಕ್ಕೇಕೆ ಒಂದು ಧರ್ಮದ ದೇಗುಲವನ್ನು ವಶಕ್ಕೆ ಪಡೆದು ಪೂಜಿಸುವ ಪಾರುಪತ್ಯ?
ಈ ಸಂದರ್ಭದಲ್ಲಿ ಕುಮಾರವ್ಯಾಸ ಭಾರತದ ಸಭಾಪರ್ವದ ಸಂದರ್ಭವೊಂದು ನೆನಪಿಗೆ ಬರುತ್ತದೆ. ಧರ್ಮರಾಯ ಇಂದ್ರಪ್ರಸ್ಥದಲ್ಲಿ ರಾಜಸೂಯ ಯಾಗವನ್ನು ಮುಗಿಸಿ, ತಮ್ಮಂದಿರೊಡನೆ ಸದ್ಧರ್ಮದಿಂದ ರಾಜ್ಯಭಾರ ನಡೆಸುತ್ತಿದ್ದ ಸಂದರ್ಭದಲ್ಲಿ ಒಂದು ದಿನ ನಾರದ ಮಹರ್ಷಿಗಳು ಆಸ್ಥಾನಕ್ಕೆ ಬರುತ್ತಾರೆ. ಅವರನ್ನು ಯಥಾಯೋಗ್ಯವಾಗಿ ಸತ್ಕರಿಸಿ ಧರ್ಮರಾಯ ಅವರೆದುರು ವಿನೀತನಾಗಿ ನಿಲ್ಲುತ್ತಾನೆ
‌ಆಗ ಅವರು ಕೇಳಿದ ಮೊದಲ ಪ್ರಶ್ನೆ
“ನಿಂದಿಸರಲೇ ದುರ್ಜನರು ಸುಜನರನು!?” ಎಂಬುದು.‌ಅಂದರೆ ನಿಮ್ಮ ರಾಜ್ಯದಲ್ಲಿ ದುಷ್ಟ ವ್ಯಕ್ತಿಗಳು ಸಾತ್ವಿಕರನ್ನು ನಿಂದಿಸುತ್ತಿಲ್ಲವಷ್ಟೇ? ಎಂಬುದು.‌ಅದಾದ ನಂತರ ಅವರು ರಾಜ್ಯಭಾರದ ಕುರಿತು ರಾಜ ಹೇಗೆ ವರ್ತಿಸಬೇಕಬ ಕುರಿತು ಹೇಳುತ್ತ ಹೋಗುತ್ತಾರೆ.

ಸತ್ಯವುಳ್ಳರೆ ಧರಣಿ ಸಾರುಗು
ಸತ್ಯವುಳ್ಳರೆ ಪದವಿ ಸಾರುಗು
ಸತ್ಯವುಳ್ಳರೆ ಸಕಲರಾಜ್ಯದ
ವೀರಸಿರಿ ಸಾರ್ಗು

ಸತ್ಯವೇ ಬೇಹುದು ನೃಪರಿಗಾ
ಸತ್ಯ ಭುಜಬಲಗೂಡಿ ಮಂತ್ರದ
ಸತ್ಯವೇ ಸತ್ವಾಧಿಕವು ಭೂಪಾಲ
ಕೇಳೆಂದ

ಆಡಳಿತಕ್ಕೆ ಸತ್ಯವೇ ಆಧಾರವಾಗಬೇಕು. ಧರ್ಮವೇ ದಾರಿದೀಪವಾಗಬೇಕು. ಸಾತ್ವಿಕ ರಾಜ್ಯಭಾರ ಸಮರ್ಥವಾಗಿರಬೇಕು.
ಮುಂದೆ ಪ್ರಭುತ್ವವು ಯಾವುದಕ್ಕೆ ಆದ್ಯತೆ ಕೊಡಬೇಕು ಎಂಬುದನ್ನು ಹೇಳುತ್ತ ನಾರದರು,
ಕೃಷಿಗೆ, ಕೃಷಿಕನಿಗೆ ಆದ್ಯತೆ ಕೊಡಬೇಕೆಂಬುದನ್ನು ಸುಂದರವಾಗಿ ಹೇಳುತ್ತಾರೆ.

ಕೃಷಿ ಮೊದಲು ಸರ್ವಕ್ಕೆ ಕೃಷಿಯಿಂ ಪಸರಿಸುವುದಾ ಕೃಷಿಯನುದ್ಯೋ
ಗಿಸುವ ಜನವನು ಪಾಲಿಸುವುದಾ
ಜನಪದವ ಜನದಿ

RELATED ARTICLES  ರಿತಿಯ ಚಿಕಿತ್ಸೆಗೆ ಸ್ವಯಂ ಪ್ರೇರಿತರಾಗಿ 20 ಸಾವಿರ ಧನಸಹಾಯ ಮಾಡಿ ಮಾನವೀಯತೆ ಮೆರೆದ ಮಾಜಿ ಶಾಸಕ ಮಂಕಾಳುವೈದ್ಯರು.

ವಸು ತೆರಳುವುದು ವಸುವಿನಿಂ ಸಾ
ಧಿಸುವಡಾವುದಸಾಧ್ಯವದರಿಂ
ಕೃಷಿವಿಹೀನನ ದೇಶವದು
ದುರ್ದೇಶ ಕೇಳೆಂದ

ಸತ್ಯ, ಧರ್ಮ, ಕೃಷಿ, ಋಷಿಗಳಿಗೆ ಆದ್ಯತೆ ಕೊಟ್ಟು ರಾಜ್ಯಭಾರ ನಡೆಸದಿದ್ದರೆ, ಪ್ರಜೆಗಳು ಏನು ಆಡಿಕೊಳ್ಳುತ್ತಾರೆ ಮತ್ತು ಏನು ಮಾಡುತ್ತಾರೆ ಎಂಬುದನ್ನು ಅವರು ಹೀಗೆ ಹೇಳುತ್ತಾರೆ…..

ಅರಸು ರಾಕ್ಷಸ ಮಂತ್ರಿಯೆಂಬುವ
ಮೊರೆವ ಹುಲಿ ಪರಿವಾರ ಹದ್ದಿನ
ನೆರವಿ ಬಡವರ ಭಿನ್ನಪವನಿನ್ನಾರು
ಕೇಳುವರು

ಉರಿವುರಿವುತಿದೆ ದೇಶ ನಾವಿ
ನ್ನಿರಲು ಬಾರದೆನುತ್ತ ಜನ ಬೇ
ಸರಿನ ಬೇಗೆಯಲಿರದಲೇ ಭೂಪಾಲ
ಕೇಳೆಂದ.

ಹೌದು, ಸತ್ಯ ಧರ್ಮ ನ್ಯಾಯಗಳನ್ನು ಧಿಕ್ಕರಿಸಿ ರಾಜ್ಯವಾಳುತ್ತ ಹೋದರೆ ಪ್ರಜೆಗಳು, “ಅರಸು ರಕ್ಕಸ, ಮಂತ್ರಿಯೆಂಬುವ ಮೊರೆವ ಹುಲಿ” ಎಂದು ನೋಯುತ್ತ ಸಂಕಟ ಅನಭವಿಸುತ್ತ ಬಾಳುತ್ತಾರೆ.

ಹಾಗಾಗಿ ಸನ್ಮಾನ್ಯರೇ, ಸಂತರನ್ನು ಸಂಕಟಕ್ಕೆ ದೂಡಬೇಡಿ. ಅದು ಆಡಳಿತಕ್ಕೂ ಒಳಿತಲ್ಲ, ರಾಜ್ಯಕ್ಕೂ ಒಳಿತಲ್ಲ. ಸಮಾಜಕ್ಕೂ ಅಲ್ಲ, ಸಕಲ ಚರಾಚರಗಳಿಗೂ ಒಳಿತಲ್ಲ. ಸಲ್ಲದ ಆತುರ ತೋರಿ ಸುಗಮವಾಗಿ ನಡೆದಿದ್ದ ದೇಗುಲವನ್ನು ಕಬಳಿಸಯತ್ನಿಸುವುದೋ, ಸಂತರನ್ನು ಸಂಕಟಕ್ಕೊಡ್ಡಲು ಪ್ರಯತ್ನಿಸುವುದೋ ಸಮರ್ಥನೀಯವಲ್ಲ. ಧರ್ಮರಾಯನಿಗೆ ನಾರದ ಮಹರ್ಷಿಗಳು ಹೇಳಿದಂತೆ ಸತ್ಯ, ನ್ಯಾಯ, ನೀತಿಯ ಅಡಿಯಲ್ಲಿ ಆಡಳಿತ ಸಾಗಬೇಕು. ನಾಳೆ ಸುಪ್ರೀಂ ಕೋರ್ಟ್ ಗೋಕರ್ಣವನ್ನು ಸರ್ಕಾರಕ್ಕೇ ಕೊಟ್ಟರೆ, ಅಲ್ಲಿಯವರೆಗೂ ನೀವಿದ್ದರೆ ಆಗ ಕಿತ್ತು ಒಪ್ಪಿಸಿಕೊಳ್ಳಿ. ಬೇಡವೆನ್ನುವರಾರು?
‌‌‌‌ ಅಂದು ಮಠ ಮೌನವಾಗಿ ನಿಮಗದನ್ನು ಒಪ್ಪಿಸುತ್ತದೆ. ಯಾರೂ ಹೆದರಬೇಕಿಲ್ಲ, ಅಂದೂ ರಾಮಚಂದ್ರಾಪುರ ಮಠ ಇದ್ದೇ ಇರುತ್ತದೆ. ಅದು ಈಗ ಸಾವಿರದ ಮುನ್ನೂರು ವರುಷಗಳಿಂದ ಬಾಳಿ ಬಂದಿದೆ. ಇನ್ನೂ ಅದೆಷ್ಟೋ ಸಹಸ್ರ ವರ್ಷ ಸತ್ಯಧರ್ಮವನ್ನು ಪಸರಿಸುತ್ತ ಇರಲಿದೆ. ಯಾಕೆಂದರೆ ಈ ಮಠ ಆರಂಭವಾದ ಮೇಲೆ ಅದೆಷ್ಟೋ ರಾಜವಂಶಗಳು ಆಳಿ, ಅಳಿದು, ಇತಿಹಾಸದ ಪುಟ ಸೇರಿವೆ. ಅದೆಷ್ಟೋ ಪಾಳೆಯ ಪಟ್ಟುಗಳು ಮಣ್ಣಾಗಿ ಚರಿತ್ರೆಗೆ ಸರಿದಿವೆ. ಶರಾವತಿಯಲ್ಲಿ ಕೋಟಿ ಕೋಟಿ ಕ್ಯೂಸೆಕ್ಸ್ ನೀರು ಹನಿಗಡಿಯದೆ ಧುಮ್ಮಿಕ್ಕಿ ಹರಿದು ಹೋಗಿದೆ. ಆದರೆ ಅದೇ ಶರಾವತಿಯ ತೀರದಲ್ಲಿ ಈ ರಾಮಚಂದ್ರಾಪುರ ಮಠ ಸ್ಥಿರವಾಗಿ, ಎಲ್ಲ ಆಕ್ರಮಣಗಳನ್ನು ಅಂಜದೆ ಅಳುಕದೆ ಎದುರಿಸುತ್ತ ಸ್ಥಿರವಾಗಿ ನಿಂತಿದೆ, ನಿಲ್ಲಲಿದೆ.