ಕುಮಟಾ: ಇಲ್ಲಿನ ಬೈಪಾಸ್ ವಿರೋಧಿ ಹೋರಾಟ ಸಮಿತಿಯ ವತಿಯಿಂದ ಕುಮಟಾದಲ್ಲಿ ಬ್ರಹತ್ ಪ್ರತಿಭಟನೆ ನಡೆಸಲಾಯಿತು. ರಾಷ್ಟ್ರಪತಿ ಯವರಿಗೆ ಮನವಿ ಸಲ್ಲಿಸಲಾಯಿತು.
ಹಿಂದುಪರ ಸಂಘಟನೆಗಳ ಮುಖಂಡ ಸೂರಜ ನಾಯ್ಕ ಸೋನಿ ಅವರ ಮುಖಂಡತ್ವದಲ್ಲಿ ನಡೆದ ಮೆರವಣಿಗೆಯಲ್ಲಿ ಬೈಪಾಸ್ ಯೋಜನೆಯ ಸಮಗ್ರ ಚಿತ್ರಣವನ್ನು ತೆರೆದಿಟ್ಟರು.
ಇಡೀ ಜಿಲ್ಲೆಯಲ್ಲಿ ಚತುಷ್ಪಥ ಈಗಿನ ಹೆದ್ದಾರಿಯಲ್ಲಿಯೇ ಸಾಗಿದೆ. ಎಲ್ಲು ಇಲ್ಲದ ಬೈಪಾಸ್‌ನ್ನು ಕುಮಟಾದಲ್ಲಿ ನಿರ್ಮಿಸಲು ಯೋಜಿಸಿರುವುದು ಸರಿಯಲ್ಲ. ಕೆಲ ಸ್ವಾರ್ಥಿ ಉದ್ಯಮಿಗಳ ವಾಣಿಜ್ಯ ಮಳಿಗೆ ಮತ್ತು ಉದ್ಯಮಗಳ ರಕ್ಷಣೆಗಾಗಿ ಬೈಪಾಸ್ ನಿರ್ಮಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಇದರಿಂದ ನೂರಾರು ಬಡ ರೈತರು, ಕೂಲಿಕಾರರು ಬೀದಿಗೆ ಬೀಳುವ ಸ್ಥಿತಿ ಎದುರಾಗಿದೆ. ಹಾಗಾಗಿ ಈ ಹೋರಾಟದಲ್ಲಿ ಎಲ್ಲ ರಾಜಕೀಯವನ್ನು ಬದಿಗಿಟ್ಟು, ಬಡಜನರ ಮನೆ ಮತ್ತು ಜಮೀನಿನ ರಕ್ಷಣೆಗಾಗಿ ನಾವೆಲ್ಲ ಒಗ್ಗಟ್ಟಾಗಿ ಹೋರಾಡೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಿಮ್ಮ ಜೊತೆಗೆ ನಾನೆಂದಿಗೂ ಇರುತ್ತೇನೆ ಎಂದು ಸೂರಜ ಸ್ಥಳೀಯರಿಗೆ ಧೈರ್ಯ ತುಂಬಿದರು.
ಉದ್ಯಮಿ ಹರೀಶ ಶೆಟ್ಟಿ ಮಾತನಾಡಿ, ಜನಪ್ರತಿನಿಧಿಗಳ ದ್ವಂದ್ವ ನೀತಿಯಿಂದ ಕುಮಟಾಕ್ಕೆ ಬೈಪಾಸ್ ಬಂದಿದೆ. ಇದರಿಂದ ಊರಿನ ಅಳಿವು, ಉಳಿವಿನ ಪ್ರಶ್ನೆಯಾಗಿದೆ. ಯಾವುದೇ ರಾಜಕೀಯ ವ್ಯಕ್ತಿಗಳಿಂದ ಶೇ.98ರಷ್ಟು ಜನಸಾಮಾನ್ಯರಿಗೆ ಯಾವುದೆ ವೈಯಕ್ತಿಕ ಕಾರ್ಯ ಆಗುವುದಿಲ್ಲ. ಹಾಗಾಗಿ ನೀವೆಲ್ಲ ಒಗ್ಗಟ್ಟಾಗಿ ಹೋರಾಟ ಮಾಡಿದರೆ ಮಾತ್ರ ಈ ಬೈಪಾಸ್‌ನ್ನು ಕಾಮಗಾರಿಯನ್ನು ನಿಲ್ಲಿಸಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಮುಖಂಡ ಭಾಸ್ಕರ ಪಟಗಾರ ,ಜಿಪಂ ಸದಸ್ಯೆ ವೀಣಾ ಸೂರಜ್ ನಾಯ್ಕ, ಪುರಸಭೆ ಸದಸ್ಯೆ ಪಲ್ಲವಿ ಮಡಿವಾಳ, ಶೈಲಾ ಗೌಡ, ಕಲಭಾಗ ಗ್ರಾಪಂ ಸದಸ್ಯೆ ಸವಿತಾ ಪಟಗಾರ, ಸ್ಥಳೀಯ ಪ್ರಮುಖರಾದ ಟಿ.ಎನ್.ಭಟ್, ಗಣೇಶ ಭಟ್ , ಗಣಪತಿ ಪಟಗಾರ, ನಾಗೇಶ ನಾಯ್ಕ ಇತರರಿದ್ದರು.