ಯಲ್ಲಾಪುರ: ಸೈಕಲ್ ಚಲಾಯಿಸಿಕೊಂಡು ಹೊರಟಿದ್ದ ವೃದ್ಧನಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮೃತಪಟ್ಟ ಘಟನೆ ಯಲ್ಲಾಪುರದಲ್ಲಿ ನಡೆದಿದೆ.
ತಾಲೂಕಿನ ದೇವಸ ತಟಗಾರ ಗ್ರಾಮದ ನಿವಾಸಿ ಜಾನು ಗಣಪ ಮರಾಠೆ (74) ಅಪಘಾತದಲ್ಲಿ ಮೃತಪಟ್ಟರು ಎಂದು ವರದಿಯಾಗಿದೆ.
ಇವರು ರಾಷ್ಟ್ರೀಯ ಹೆದ್ದಾರಿ 63ರ ಟಿಎಸ್ಎಸ್ ಪೆಟ್ರೋಲ್ ಪಂಪ್ ಎದುರಿನ ಘಟ್ಟದಲ್ಲಿ ಸೈಕಲ್ ತಳ್ಳಿಕೊಂಡು ಘಟ್ಟ ಹತ್ತುವ ಸಂದರ್ಭದಲ್ಲಿ ಲಾರಿ ಡಿಕ್ಕಿ ಹೊಡೆದಿದೆ. ಕಾಲು ಹಾಗೂ ಸೊಂಟಕ್ಕೆ ತೀವ್ರ ಗಾಯವಾಗಿದ್ದರಿಂದ ಯಲ್ಲಾಪುರದ ತಾಲೂಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಲಾರಿ ಚಾಲಕ ಲಾರಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.