ಕಾರವಾರ: ಸ್ಥಳೀಯ ನಗರಸಭೆಯ ದ್ವಿತೀಯ ದರ್ಜೆ ಸಹಾಯಕ ವಿನೋದ ನಾಯ್ಕ ಸರ್ಕಾರದ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದ ಬಗ್ಗೆ ಇಲ್ಲಿನ ಸಿಜೆಎಂ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ಹಾಗೂ 8 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದೆ.
ನಗರಸಭೆ ಸಿಬ್ಬಂದಿಯಾದ ವಿನೋದ ನಾಯ್ಕ ಶಿಕ್ಷೆಗೊಳಗಾದ ವ್ಯಕ್ತಿ.ಈತ ನಕಲಿ ರಶೀದಿ ಪುಸ್ತಕವನ್ನು ತಯಾರಿಸಿ ಒಟ್ಟೂ 63, 809 ರೂ. ಯೋಜನೆಯ ಫಲಾನುಭವಿಗಳಿಂದ ವಸೂಲಿ ಮಾಡಿ ಅವರಿಗೆ ನಕಲಿ ರಶೀದಿ ನೀಡಿದ್ದನಂತೆ. ಈತನಿಗೆ 2002-03ರ ಅವಧಿಯಲ್ಲಿ ನಗರಸಭೆಯಿಂದ ಮಂಜೂರಾದ 25 ಸಾವಿರ ರೂ. ಮರಳಿ ಬಡ್ಡಿ ಸಮೇತ ವಸೂಲಿ ಮಾಡುವ ಜವಾಬ್ದಾರಿ ನೀಡಲಾಗಿತ್ತು. ಆದರೆ ಆಶ್ರಯ ಯೋಜನೆಯ ಫಲಾನುಭವಿಗಳಿಂದ ಆರೋಪಿಯು ಸರ್ಕಾರಕ್ಕೆ ತುಂಬಬೇಕಾಗಿದ್ದ ಹಣ ಪಡೆದುಕೊಂಡು ನಗರಸಭೆಗೆ ತುಂಬದೆ ಸ್ವಂತಕ್ಕೆ ಬಳಕೆ ಮಾಡಿಕೊಂಡಿದ್ದ ಎಂದು ವರದಿಯಾಗಿದೆ.ಸರಕಾರದ ಹಣ ದುರುಪಯೋಗ ಪಡಿಸಿಕೊಂಡಿದ್ದ ಬಗ್ಗೆ ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾಗ ಸತ್ಯತೆ ಪತ್ತೆಯಾದ ಬಳಿಕ 2004ರಲ್ಲಿ ದುರುಪಯೋಗ ಪಡಿಸಿಕೊಂಡ ಹಣವನ್ನು ಸರ್ಕಾರಕ್ಕೆ ಭರಣ ಮಾಡಿದ್ದರು ಎನ್ನಲಾಗಿದೆ. ಆರೋಪಿ ಮೇಲೆ ಕಾರವಾರ ನಗರ ಪೊಲೀಸ್ ಠಾಣೆಯ ಆಗಿನ ಪಿಎಸ್ಐ ಎ. ಎ. ಮುಜಾವರ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಸಿಜೆಎಂ ನ್ಯಾಯಾಲಯ ಆರೋಪ ಸಾಬೀತಾಗಿದ್ದರಿಂದ ಆರೋಪಿಗೆ ಭಾರತೀಯ ದಂಡ ಸಂಹಿತೆ ಕಲಂ 409ರ ಪ್ರಕಾರ 2 ವರ್ಷ ಸಾದಾ ಕಾರಾಗೃಹವಾಸ ಹಾಗೂ 5 ಸಾವಿರ ದಂಡ ಮತ್ತು ಭಾರತೀಯ ದಂಡ ಸಂಹಿತೆ ಕಲಂ 468ರ ಪ್ರಕಾರ ಒಂದು ವರ್ಷ ಸಾದಾ ಜೈಲು ಹಾಗೂ 3 ಸಾವಿರ ರೂ.ದಂಡ ಪಾವತಿಸಲು ಆದೇಶ ನೀಡಿದೆ.