ಸಾಮಾನ್ಯವಾಗಿ ದೇವರ ಮೂರ್ತಿಗಳಲ್ಲಿ ನಾವು ನಾಲ್ಕು ಕೈ ಹಾಗು ನಾಲ್ಕು ಆಯುಧವನ್ನು ನೋಡುತ್ತೇವೆ. ಉದಾಹರಣೆಗೆ ವಿಷ್ಣು- ಶಂಖ, ಚಕ್ರ, ಗಧಾ, ಪದ್ಮಧಾರಿ. ಹಾಗೇ ಗಣಪತಿ-ಪಾಶ, ದಂತ, ಅಂಕುಶ ಮತ್ತು ಅಭಯಧಾರಿ. ಏನಿದು ? ಏನಿದರ ಅರ್ಥ?
೧. ಚಕ್ರ: ಚಕ್ರ ‘ಧರ್ಮದ’ ಸಂಕೇತ. ಅಧರ್ಮವನ್ನು ಸಂಹಾರಮಾಡುವ, ನಿರಂತರ ತಿರುಗುವ ವಿಷ್ಣು ಚಕ್ರ, ಸಂಹಾರಶಕ್ತಿ ಮಾತೆ ದುರ್ಗೆಯ ಸಂಕೇತ.
೨. ಶಂಖ: ಧರ್ಮದ ಪಂಚಾಂಗದಲ್ಲಿ ನಮ್ಮ ಬದುಕು ಸಮೃದ್ದಿಯಾಗಿರುವ ‘ಅರ್ಥದ’ ಸಂಕೇತ.
೩.ಗಧಾ: ಭಗವಂತನ ಗದೆ ಸ್ವಚ್ಚಂದ ‘ಕಾಮದ ನಿಯಂತ್ರಣದ’ ಸಂಕೇತ.
೪. ಪದ್ಮ: ‘ಶಾಂತಿಯ ಮತ್ತು ಮೋಕ್ಷದ’ ಸಂಕೇತ
ಇದೇ ರೀತಿ ಗಣಪತಿಯನ್ನು ನೋಡಿದರೆ:
೧. ಪಾಶ: ನಮ್ಮ ಬದುಕಿಗೆ ಬೇಕಾದ ಧರ್ಮದ ಬಿಗಿ (ಪಾಶ).
೨.ದಂತ: ಸಂಪತ್ತಿನ ಜೊತೆಗೆ ಆತ್ಮ ಸಂಯಮ (ತನ್ನ ಧಾಡೆಯನ್ನು ಮುರಿದು ಹಿಡಿದಿರುವುದು).
೩. ಅಂಕುಶ: ಸ್ವಚ್ಚಂದ ಕಾಮಕ್ಕೆ ಅಂಕುಶ.
೪. ಅಭಯ: ಈ ಮೇಲಿನ ಮೂರನ್ನು ಪಾಲಿಸಿದರೆ ಮೋಕ್ಷದ ಅಭಯ.
ವಿಷ್ಣುವಿನ ಕೈಯಲ್ಲಿನ ನಾಲ್ಕು ಆಯುದಗಳನ್ನು ಇಪ್ಪತ್ನಾಲ್ಕು ವಿಧದಲ್ಲಿ ಇಡಲು ಬರುತ್ತದೆ. ಚಕ್ರ-ಶಂಖ-ಗಧಾ-ಪದ್ಮಧಾರಿ-ಜನಾರ್ದನ ಮೂರ್ತಿಯಾದರೆ, ಶಂಖ-ಚಕ್ರ-ಗಧಾ-ಪದ್ಮದಾರಿ-ಕೇಶವ ಮೂರ್ತಿ. ಈ ರೀತಿ ವಿಷ್ಣುವಿನ ಇಪ್ಪತ್ನಾಲ್ಕು ಮೂರ್ತಿಗಳಿವೆ. ಅವುಗಳೆಂದರೆ ೧. ಕೇಶವ ೨. ನಾರಾಯಣ ೩. ಮಾದವ ೪. ಗೋವಿಂದ. ೫. ಮದುಸೂದನ ೬. ತ್ರಿವಿಕ್ರಮ ೭. ವಿಷ್ಣು ೮. ಶ್ರೀಧರ ೯. ಹೃಷೀಕೇಶ ೧೦. ಪದ್ಮನಾಭ ೧೧. ದಾಮೋದರ ೧೨. ಸಂಕರ್ಷಣ ೧೩. ವಾಮನ ೧೪. ವಾಸುದೇವ ೧೫. ಪ್ರದ್ಯುಮ್ನ ೧೬. ಅನಿರುದ್ದ ೧೭. ಪುರುಷೋತ್ತಮ ೧೮.ಅದೊಕ್ಷಜ ೧೯. ನಾರಸಿಂಹ ೨೦.ಅಚ್ಚುತ ೨೧. ಜನಾರ್ದನ ೨೨. ಉಪೇಂದ್ರ ೨೩. ಹರಿ ೨೪. ಕೃಷ್ಣ.
ಈ ರೀತಿ ವಿಶಿಷ್ಟವಾದ ನಾಲ್ಕು ಬಾಹುವುಳ್ಳ ಭಗವಂತನನ್ನು ಚತುರ್ಭುಜ ಎನ್ನುತ್ತಾರೆ.

RELATED ARTICLES  ದಿನಕರ ಶೆಟ್ಟಿ ಅಭಿಮಾನಿಗಳಿಂದ ವಿಜಯೋತ್ಸವ.

ಭುಜ ಎನ್ನುವುದಕ್ಕೆ ಭೋಜನ ಎನ್ನುವ ಅರ್ಥ ಕೂಡಾ ಇದೆ. ನಾಲ್ಕು ವಿಧದಲ್ಲಿ ತಿನ್ನುವವನು ಹಾಗು ತಿನ್ನಿಸುವವನು ಚತುರ್ಭುಜ. ಭಗವಂತನು ಗೀತೆಯಲ್ಲಿ ಹೇಳಿರುವಂತೆ-

ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ
ಪ್ರಾಣಾಪಾನಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಮ್

ಇಲ್ಲಿ ‘ಪಚಾಮ್ಯನ್ನಂ ಚರ್ತುವಿಧಮ್’ ಎಂದರೆ ನಾಲ್ಕು ಬಗೆಯ ಅನ್ನವನ್ನು ಅರಗಿಸುವೆ” ಎಂದರ್ಥ.
ಅನ್ನವೆಂದರೆ ಎಲ್ಲಾ ರೀತಿಯ ‘ಆಹಾರ’. “ಪ್ರಾಣಿನಾಂ ದೇಹಮಾಶ್ರಿತಃ” ಎಂದರೆ ‘ಪ್ರಾಣಿ’ಗಳು ತಿನ್ನಬಲ್ಲ ಆಹಾರ ಎಂದರ್ಥ. ಪ್ರಾಣಿಗಳ ಅಹಾರವನ್ನು ನಾಲ್ಕು ವಿಧಗಳಲ್ಲಿ ವಿಂಗಡಿಸಬಹುದು- ಭಕ್ಷ್ಯ, ಭೋಜ್ಯ, ಲೇಹ್ಯ ಮತ್ತು ಚೋಷ್ಯ.
ಭಕ್ಷ್ಯ = ಅಗಿದು, ಕಡಿದು ತಿನ್ನಲು ಯೋಗ್ಯವಾದುದು (ತಿನ್ನುವುದು)
ಭೋಜ್ಯ = ಅಗಿಯದೆಯೇ, ನವಣಿಸಿ ತಿನ್ನಲು ಯೋಗ್ಯವಾದುದು (ಉಣ್ಣುವುದು).
ಲೇಹ್ಯ = ನೆಕ್ಕಿ ತಿನ್ನಲು ಯೋಗ್ಯವಾದುದು.
ಚೋಷ್ಯ = ಕುಡಿಯಲು ಯೋಗ್ಯವಾದುದು.
ಈ ನಾಲ್ಕು ವಿಧದ ’ಅನ್ನ’ವನ್ನು ಸೇವಿಸುವ ಎಲ್ಲಾ ಜೀವಿಗಳ ಜಠರದಲ್ಲಿ ಅಗ್ನಿಯ ರೂಪದಲ್ಲಿದ್ದು, ನಾಲ್ಕು ಬಗೆಯ ಅನ್ನವನ್ನು ಮೂರು ಬಗೆಯಲ್ಲಿ ವಿಭಾಗಮಾಡಿ, ದೇಹಕ್ಕೆ ಉಣಬಡಿಸಿ ನಮಗೆ ಬದುಕಲು ವ್ಯವಸ್ಥೆ ಮಾಡಿಸುವವನು ಚತುರ್ಭುಜ.
ಎಲ್ಲಾ ಆಹಾರ ಮಣ್ಣು-ನೀರು-ಬೆಂಕಿಯಿಂದ ಆಗಿರುತ್ತದೆ. ಆಹಾರದ ಮಣ್ಣಿನ ಸೂಕ್ಷ್ಮ ಭಾಗ ಮೆದುಳಿಗೆ, ಮಧ್ಯ ಭಾಗ ಮಾಂಸ-ಚರ್ಮಕ್ಕೆ, ಹಾಗು ಸ್ಥೂಲ ಭಾಗ ಮಲವಾಗಿ ವಿಸರ್ಜನೆಯಾಗುತ್ತದೆ. ಅದೇ ರೀತಿ ನೀರಿನ ಸೂಕ್ಷ್ಮ ಭಾಗ ಉಸಿರಾಗಿ, ಮಧ್ಯ ಭಾಗ ನೆತ್ತರಾಗಿ ಹಾಗು ಸ್ಥೂಲ ಭಾಗ ಮೂತ್ರವಾಗಿ ವಿನಿಯೋಗವಾಗುತ್ತದೆ. ಇನ್ನು ಬೆಂಕಿಯ ಸೂಕ್ಷ್ಮ ಭಾಗ ವಾಕ್ ಶಕ್ತಿಯಾಗಿ, ಮಧ್ಯ ಭಾಗ ಅಸ್ಥಿಮಜ್ಜೆಯಾಗಿ , ಸ್ಥೂಲ ಭಾಗ ಹಲ್ಲು ಮತ್ತು ಅಸ್ಥಿಯಾಗಿ ವಿನಿಯೋಗವಾಗುತ್ತದೆ.
ಈ ರೀತಿ ಚಿನ್ನದ ಗಣಿಯಿಂದ ಚಿನ್ನವನ್ನು ಬೇರ್ಪಡಿಸುವುದಕ್ಕಿಂತ ಕಠಿಣವಾದ ಈ ಕಾರ್ಯವನ್ನು ನಮ್ಮೊಳಗಿದ್ದು ವ್ಯವಸ್ತಿತ ರೀತಿಯಲ್ಲಿ ಮಾಡಿ , ನಾಲ್ಕು ಬಗೆಯ ಆಹಾರವನ್ನು ಮೇಲಿನ ಮೂರು ರೀತಿಯಲ್ಲಿ ವಿನಿಯೋಗ ಮಾಡುವ ಭಗವಂತ ಚತುರ್ಭುಜ.
ಸಂಗ್ರಹ:ವಿದ್ಯಾವಾಚಸ್ಪತಿ ಶ್ರೀ ಬನ್ನಂಜೆ ಗೋವಿಂದಾಚಾರ್ಯರು

RELATED ARTICLES  ರಾಜ್ಯ ರಾಜಕಾರಣದಲ್ಲಿ ಅನಂತಣ್ಣನಿಗೆ ಸಿಗಲಿ ಸೂಕ್ತ ಸ್ಥಾನಮಾನ : ಇದು ಅಭಿಮಾನಿಗಳ ಮನದಾಳ.