ಭಟ್ಕಳ: ದುಬೈಯಿಂದ ಮೀನುಗಾರಿಕೆಗೆ ತೆರಳಿದ್ದ ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಭಟ್ಕಳ, ಮಂಕಿ ಮೂಲದ 15 ಮೀನುಗಾರರನ್ನು ಓಮನ್ ಪೊಲೀಸರು ಸಿನಾವ್ ಎಂಬಲ್ಲಿ ಎರಡು ತಿಂಗಳ ಹಿಂದೆ ಬಂಧಿಸಿದ್ದಾರೆಂಬ ವಿಷಯ ಇದೀಗ ದೊಡ್ಡ ಸುದ್ದಿಯಾಗಿದೆ.
ಸುಮಾರು 17ಕ್ಕೂ ಹೆಚ್ಚು ಮಂದಿ ಮೀನುಗಾರರು ಎರಡು ದೋಣಿಯಲ್ಲಿ ಎರಡು ತಿಂಗಳ ಹಿಂದೆ ಮೀನುಗಾರಿಕೆಗೆ ತೆರಳಿದ್ದರು. ಅವರು ಮೀನುಗಾರಿಕೆಯ ಮೇಲೆ ನಿರ್ಬಂಧ ಹೇರಿದ್ದ ಸಂದರ್ಭದಲ್ಲೇ ಓಮನ್ ನ ಸಿನಾವ್ ಕಡಲಿನಲ್ಲಿ ಮೀನುಗಾರಿಕೆ ನಡೆಸಿ, 800 ಕೆ.ಜಿ. ಕಿಂಗ್ ಫಿಶ್ ಅನ್ನು ಹಿಡಿದಿದ್ದರು.
ಈ ವೇಳೆ ಅಲ್ಲಿನ ಪೊಲೀಸರು, ಕೃಷಿ ಮತ್ತು ಮೀನುಗಾರಿಕೆ ಸಚಿವಾಲಯದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಒಂದು ಮೀನುಗಾರಿಕಾ ದೋಣಿಯಲ್ಲಿದ್ದವರನ್ನು ಬಂಧಿಸಿ ತಮ್ಮ ವಶದಲ್ಲಿರಿಸಿಕೊಂಡಿದ್ದಾರೆ. ಮತ್ತೊಂದು ದೋಣಿಯಲ್ಲಿದ್ದ ಮೀನುಗಾರರನ್ನು ಮರಳಿ ದುಬೈಗೆ ತೆರಳದಂತೆಯೂ ಸಮುದ್ರ ಮಧ್ಯದಲ್ಲೆ ನಿರ್ಬಂಧವನ್ನು ಹೇರಿದ್ದಾರೆ. ಅದರಲ್ಲಿ 15 ಮಂದಿ ಜಿಲ್ಲೆಯ ಮೀನುಗಾರರು ಸೇರಿದ್ದಾರೆ.
ಮುರ್ಡೇಶ್ವರದ ಇಬ್ರಾಹಿಂ ಮುಲ್ಲಾ ಫಖೀರಾ, ಮುಹಮ್ಮದ್ ಅನ್ಸಾರ್ ಬಾಪು, ನಯೀಮ್ ಭಾಂಡಿ, ಭಟ್ಕಳ ತಾಲ್ಲೂಕಿನ ತೆಂಗಿನಗುಂಡಿಯ ಖಲೀಲ್ ಪಾನಿಬುಡು, ಉಸ್ಮಾನ್ ಇಸ್ಹಾಖ್, ಅಬ್ದುಲ್ ಹುಸೇನ್, ಮುಹಮ್ಮದ್ ಬಾಪು, ಅಬ್ದುಲ್ಲಾ ಡಾಂಗಿ, ಕುಮಟಾದ ಅತಿಖ್ ಧಾರು, ಯಾಖೂಬ್ ಶಮು, ಇಲ್ಯಾಸ್ ಅಂಬಾಡಿ, ಇಲ್ಯಾಸ್ ಘರಿ, ಇನಾಯತ್ ಶಮ್ಸು, ಖಾಸಿಮ್ ಶೇಖ್, ಅಜ್ಮಲ್ ಶಮು ಬಂಧಿತ ಮೀನುಗಾರರು ಎಂದು ತಿಳಿದು ಬಂದಿದೆ.