ಬೆಂಗಳೂರು, ಜುಲೈ 21: ರಾಜ್ಯ ಉಚ್ಚ ನ್ಯಾಯಾಲಯ ಗಿರಿನಗರದಲ್ಲಿರುವ ರಾಮಚಂದ್ರಾಪುರ ಮಠದ ಜಾಗಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಪ್ರಕರಣವನ್ನು ವಿಲೇವಾರಿ ಮಾಡಿ ಅದೇಶಿಸಿದೆ. ಹಿಂದಿನ ಬಿಡಿಎ ಆಯುಕ್ತರಾಗಿದ್ದ ಶ್ಯಾಂ ಭಟ್ ಮೌಖಿಕ ಆದೇಶದಂತೆ ಬಿಬಿಎಂಪಿಗೆ ಪತ್ರ ಬರೆದು, ನಕ್ಷೆ ಹಿಂಪಡೆಯಲು ಸೂಚಿಸಿದ್ದಾಗಿ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದ ಬಿಡಿಎ ಮಾಜಿ ಇಂಜಿನಿಯರ್ ರಾಜಗೋಪಾಲ್, ಶುಕ್ರವಾರ (ಜುಲೈ 20) ನ್ಯಾಯಮೂರ್ತಿ ವಿನಿತ್ ಕೊಠಾರಿ ಅವರ ನ್ಯಾಯಪೀಠದ ಮುಂದೆ ಹಾಜರಾಗಿ ಶ್ಯಾಂ ಭಟ್ ವಿರುದ್ಧ ಅಫಿಡವಿಟ್ ಸಲ್ಲಿಸಿದರು.
ಇಲ್ಲಿ ನಡೆದಿದ್ದೇನು?
ಈಗಾಗಲೇ ಕಟ್ಟಡದ ನಕ್ಷೆಯನ್ನು ಹಿಂಪಡೆದಿರುವ ತನ್ನ ಆದೇಶವನ್ನು ಬಿಬಿಎಂಪಿ ಹಿಂದಕ್ಕೆ ಪಡೆದುಕೊಂಡಿರುವುದರಿಂದ, ಪ್ರಸ್ತುತ ಅರ್ಜಿಯ ವಿಚಾರಣೆಯನ್ನು ಮುಂದುವರಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಪ್ರಕರಣವನ್ನು ವಿಲೇವಾರಿ ಮಾಡಿ ಆದೇಶಿಸಿತು. ರಾಮಚಂದ್ರಾಪುರ ಮಠದ ಗಿರಿನಗರದ ಜಾಗದ ಕುರಿತು ಹೊಸದಾಗಿ ತನಿಖೆ ಮಾಡುತ್ತೇವೆ ಎಂದು ಬಿಬಿಎಂಪಿ ಪರ ವಕೀಲರು ನ್ಯಾಯಾಲಯವನ್ನು ಕೇಳಿದ್ದಕ್ಕೆ, 1978ರಲ್ಲಿ ಕ್ರಯಪತ್ರದ ಮೂಲಕ ನೋಂದಾಯಿತವಾದ ಹಾಗೂ ಕಂದಾಯ ಕಟ್ಟಿ, ಖಾತೆಯಾಗಿ, ಅನುಭೋಗದಲ್ಲಿರುವ ಜಾಗದ ಕುರಿತು ಯಾವ ನೆಲೆಯಲ್ಲಿ ತನಿಖೆ ಮಾಡುತ್ತೀರಿ ಎಂದು ನ್ಯಾಯಾಲಯ ಬಿಬಿಎಂಪಿ ಪರ ವಕೀಲರನ್ನು ತರಾಟೆಗೆ ತೆಗೆದುಕೊಂಡಿತು. ಹಿನ್ನೆಲೆ: ಪ್ರಸ್ತುತ ಜಾಗವು 1978ನೇ ಇಸವಿಯಲ್ಲಿ ರಾಮಚಂದ್ರಾಪುರ ಮಠಕ್ಕೆ ಕ್ರಯಪತ್ರದ ಮೂಲಕ ನೋಂದಾಯಿತವಾಗಿದ್ದು, ಮಠದ ಹೆಸರಿನಲ್ಲಿ ಖಾತಾ ಆಗಿ, ಕಂದಾಯವನ್ನೂ ಕಟ್ಟಿಕೊಂಡು ಬರಲಾಗುತ್ತಿದೆ. ಜಾಗವು ಮಠದ ಸ್ವಾಧೀನದಲ್ಲೇ ಇದ್ದು, ಎರಡು ಮಹಡಿಯ ಕಟ್ಟಡವು ಇತ್ತು. ಆ ಜಾಗದಲ್ಲಿ ನೂತನ ಧರ್ಮಶಾಲಾ ಕಟ್ಟಡವನ್ನು ನಿರ್ಮಿಸಲು ಬಿಬಿಎಂಪಿಯಿಂದ ಅಧಿಕೃತ ಕಟ್ಟಡ ನಕಾಶೆಗೆ ಪರವಾನಗಿಯನ್ನು ಪಡೆದು, ಕಾಮಗಾರಿಯನ್ನು ಆರಂಭಿಸಲು ಮುಂದಾಗಿತ್ತು. ಆದರೆ 2015 ರಲ್ಲಿ ಬಿಡಿಎಯಿಂದ ಬಂದ ಪತ್ರದ ಆಧಾರದ ಮೇಲೆ, ಪರವಾನಗಿ ಅನುಮತಿಯನ್ನು ಹಿಂಪಡೆದು ಬಿಬಿಎಂಪಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ, ಮಠ ಉಚ್ಚನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿತ್ತು. ವಿಚಾರಣಾ ಸಂದರ್ಭದಲ್ಲಿ ಬಿಬಿಎಂಪಿಯ ಕ್ರಮದ ಕುರಿತು ಕಟುವಾಗಿ ಟೀಕಿಸಿದ್ದ ಉಚ್ಚ ನ್ಯಾಯಾಲಯ, ಸಂಬಂಧಿತ ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳಿಗೆ ತಲಾ 50,000 ರೂ ದಂಡ ಸ್ವರೂಪವಾಗಿ ಉಚ್ಚನ್ಯಾಯಾಲಯದಲ್ಲಿ ಠೇವಣಿ ಮಾಡಲು, ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಸಂಬಂಧಿಸಿದ ಅಧಿಕಾರಿಗಳು ಹಾಜರಿರಲು ಹಾಗೂ ಬಿಬಿಎಂಪಿಯ ಪರವಾನಗಿ ರದ್ಧತಿ ಆದೇಶಕ್ಕೆ ತಡೆ ನೀಡಿ ಆದೇಶಿಸಿತ್ತು. ಕಳೆದ ವಾರ(14/07/2017) ಠೇವಣಿ ಹಣ ಕಟ್ಟದೇ ಹಾಜರಾದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದ ನ್ಯಾಯಾಲಯ, ಠೇವಣಿ ಹಣವನ್ನು ಕಟ್ಟಿ ವಿಚಾರಣೆ ಎದುರಿಸುವಂತೆ ಸೂಚಿಸಿತ್ತು.