ಇದ್ದದ್ದನ್ನು ಇದ್ದ ಹಾಗೇ ನೋಡುವುದು ವಾಸ್ತವ, ಅದು ಹೇಗೆ? ಯಾಕೆ? ಏನು? ಅದರ ಕಾರ್ಯ ಚಟುವಟಿಕೆಗಳ ಅಧ್ಯಯನ ಮಾಡುವುದು. ಇದೇ ವೈಜ್ಞಾನಿಕ ಮನೋಭಾವನೆ. ನಾನೇನಾದರೂ ಹೊಸದನ್ನು ಕಲಿಯಬೇಕು. ತಿಳಿದುಕೊಳ್ಳಬೇಕು. ಒಳ್ಳೇಯದೋ, ಕೆಟ್ಟದ್ದೋ? ಇತ್ಯಾದಿ ರಹಸ್ಯ ತಿಳಿದುಕೊಳ್ಳುವುದೇ ವೈಜ್ಞಾನಿಕ ಮನೋಭಾವನೆ ಎಂದು ಕಡಲ ಜೀವ ವಿಜ್ಞಾನ ಸ್ನಾತಕೋತ್ತರ ಅಧ್ಯಯನ ಕೇಂದ್ರ ಕಾರವಾರದ ವಿಶ್ರಾಂತ ಮುಖ್ಯಸ್ಥರಾದ ಡಾ|| ವಿ. ಎನ್. ನಾಯ್ಕ ಹೇಳಿದರು.
ಅವರು ಕುಮಟಾ ಹಳಕಾರ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನೆಲ್ಲಿಕೇರಿ ಹನುಮಂತ ಬೆಣ್ಣೆ ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರದ ಮೂರನೇ ದಿನದ ಶೈಕ್ಷಣಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಕುರಿತು ಮಾತನಾಡುತ್ತಾ ಪಂಚಭೂತಗಳಿಂದ ಈ ಜಗತ್ತು ನಿರ್ಮಾಣವಾಗಿದ್ದು, ಸೂರ್ಯನ ಶಕ್ತಿಯಿಂದ ಮಾತ್ರ ಈ ಭೂಮಿಯಲ್ಲಿ ಜೀವಿಗಳು ಇರಲು ಸಾಧ್ಯ. ನೀರು-ಮಣ್ಣು-ಗಾಳಿ ಸೇರಿ ಜಗತ್ತಿನಲ್ಲಿ ಒಂದು ಜೀವಿ ಉತ್ಪತ್ತಿಯಾಗುತ್ತದೆ. ಭೂಮಿಯ ಎಲ್ಲಾ ಸಂಪನ್ಮೂಲಗಳನ್ನು ಸರಿಯಾಗಿ ಕಂಡುಕೊಂಡು ನಮಗೆ ಯೋಗ್ಯವಾಗುವಂತೆ ಬಳಸಿಕೊಳ್ಳುವತ್ತ ಚಿಂತಿಸಬೇಕು. ನಮ್ಮ ದೇಶಕ್ಕೆ, ಸಮಾಜಕ್ಕೆ, ಮನೆಗೆ ಉಪಕಾರಿಯಾಗುವಂತೆ ಚಿಂತನೆ ಬೆಳೆಸಿಕೊಳ್ಳುವುದೇ ವೈಜ್ಞಾನಿಕ ಮನೋಭಾವನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕ ಶ್ರೀ ಜಾರ್ಜ ಫರ್ನಾಂಡೀಸ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪನ್ಯಾಸಕ ಆನಂದ ವೈ. ನಾಯ್ಕ, ಗ್ರಾಮ ಪಂಚಾಯತ ಸದಸ್ಯರಾದ ಶ್ರೀಮತಿ ಸುಶೀಲಾ ಹರಿಕಂತ್ರ, ಶ್ರೀಮತಿ ಮಾದೇವಿ ರಮೇಶ ಮುಕ್ರಿ, ಶ್ರೀ ರಾಘವೇಂದ್ರ ಪಟಗಾರ ಮುಂತಾದವರು ಉಪಸ್ಥಿತರಿದ್ದರು.
ಕು. ಅಮೃತಾ ಮಡಿವಾಳ ಸ್ವಾಗತಿಸಿದರೆ, ಕು. ಶ್ವೇತಾ ಪಟಗಾರ ವಂದಿಸಿದಳು. ಕು. ಉದಯ ಪಟಗಾರ ಕಾರ್ಯಕ್ರಮ ನಿರ್ವಹಿಸಿದನು.