ಹಳದಿಪುರ- ಇಲ್ಲಿನ ವೈಶ್ಯಗುರುಮಠದಲ್ಲಿ
ಶ್ರೀ ಶಾಂತಾಶ್ರಮ ಟ್ರಸ್ಟ್ ನ ವತಿಯಿಂದ ದಿನಾಂಕ 14 ಆಕ್ಟೊಬರ 2018ರಂದು ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವು ಬಹಳ ಯಶಸ್ವಿಯಾಗಿ ನೆರವೇರಿತು.
ಪರಮ ಪೂಜ್ಯ ಶ್ರೀ ಶ್ರೀ ವಾಮನಾಶ್ರಮ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗ್ರಾಮದ
ಕೆರೆಗದ್ದೆ, ಸಂಕೊಳ್ಳಿ, ಸಾಲಿಕೇರಿ ಅಗ್ರಹಾರ ಸೇರಿದಂತೆ ಎಲ್ಲಾ ಭಾಗಗಳಿಂದ ಆಗಮಿಸಿದ ಸುಮಾರು 350ಕ್ಕೂ ಹೆಚ್ಚು ಜನರು ತಮ್ಮ ಆರೋಗ್ಯವನ್ನು ತಪಾಸಿಸಿಕೊಂಡರು. ಟ್ರಸ್ಟ್ ನ ಗೌರವ ಅಧ್ಯಕ್ಷರಾದ ಡಾ. ಸೂರಜ್ ಕಾಣೆಕರ ಇವರು ಮನೆಯ ಹಾಗೂ ಶರೀರದ ಸ್ವಚ್ಛತೆ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ಸುಲಭವಾಗಿ ಮಾಡಬಹುದಾದಂತಹ ವಿಧಾನಗಳನ್ನು ಜನರಿಗೆ ತಿಳಿಸಿದರು.
ಮುಂಬೈ, ಗೋವಾ, ಕನಕವಲ್ಲಿ, ಕುಮಟಾ, ಬೆಂಗಳೂರು ನಗರಗಳಿಂದ ಶ್ರೀ ಗುರುಮಠದ ಭಕ್ತರಾದ 15 ಜನರ ಪ್ರಸಿದ್ಧ ಅನುಭವಿ ವೈದ್ಯರ ತಂಡವು ಗ್ರಾಮಸ್ಥರ ಆರೋಗ್ಯವನ್ನು ಉಚಿತವಾಗಿ ತಪಾಸಣೆ ಮಾಡಿ, ಪ್ರಾಥಮಿಕ ಚಿಕಿತ್ಸೆ ಹಾಗೂ ಔಷಧಗಳನ್ನು ನೀಡಿದರು. ಗಂಟಲು, ಮೂಗು, ಕಣ್ಣು, ಕಿವಿ, ರಕ್ತದೊತ್ತಡ, ಸಕ್ಕರೆ ಖಾಯಿಲೆ, ಹೃದ್ರೋಗ, ಮೂಳೆ ಸಮಸ್ಯೆ, ಮೂತ್ರಸಂಬಂಧ ಹಾಗೂ ಸಾಮಾನ್ಯ ರೋಗಗಳ ಬಗ್ಗೆ ವಿಶೇಷವಾಗಿ ಉಪಚಾರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ದೂರದಿಂದ ಬರುವ ಜನರನ್ನು ಕರೆದೊಯ್ಯಲು ವಾಹನ ಸೌಲಭ್ಯವನ್ನು ಮಾಡಲಾಗಿತ್ತು.
ಶ್ರೀ ದಾಮೋದರ ನಾಯ್ಕ್, ಸೀತಾರಾಮ್ ನಾಯ್ಕ್, ವಿನಾಯಕ ನಾಯ್ಕ್, ಗಣೇಶ್ ಜೋಶಿ, ವಿನಾಯಕ ಮಡಿವಾಳ ಸೇರಿದಂತೆ ಅನೇಕ ಸಮಾಜ ಸೇವಕರು ಈ ಕಾರ್ಯಕ್ರಮವನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾದರು.
ವರದಿ- ರವಿ ರೋಖಡೆ, ಕರ್ಕಿ.