ಕುಮಟಾ : ತಾಲೂಕಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಕುಂಭೇಶ್ವರ ದೇವಾಲಯದ ಅರ್ಚಕರು ಹಾಗೂ ಯೋಗಪಟುಗಳು ಹಾಗೂ ಯೋಗ ಕಾರ್ಯಾಗಾರಗಳನ್ನು ನಡೆಸುತ್ತಿದ್ದ ವಿಶ್ವೇಶ್ವರ ಭಟ್ ನಾಪತ್ತೆಯಾಗಿದ್ದು ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಆದರೆ ಇದೀಗ ಅವರ ಬಗ್ಗೆ ಮಾಹಿತಿ ಸಿಕ್ಕಿದ್ದು ಅವರು ಶವ ವಾಗಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ.
ವಿಶ್ವೇಶ್ವರ ಭಟ್ ಅವರು ಕಳೆದ ಮೂರು ದಿನಗಳಿಂದ ಕಣ್ಮರೆಯಾಗಿದ್ದು ಅವರ ಸಂಬಂಧಿ ಹಾಗೂ ಸ್ನೇಹಿತರು ಯಾರಿಗಾದರೂ ಸುಳಿವು ಸಿಕ್ಕಲ್ಲಿ ತಮ್ಮನ್ನು ಸಂಪರ್ಕಿಸಲು ಮನವಿ ಕೂಡಾ ಮಾಡಿದ್ದರು.
ಕುಮಟಾ ಮೂರೂರಿನಲ್ಲಿ ಯಾರದೋ ಹೊಸ ಜಮೀನಿನ ಸ್ಥಳ ಸುದ್ದಿ ಕಾರ್ಯಕ್ಕಾಗಿ ಅಪರಿಚಿತರೊಂದಿಗೆ ತೆರಳಿದ್ದರು ಎನ್ನಲಾಗಿದ್ದು ,ಅಪರಿಚಿತರ ವಾಹನದಲ್ಲಿಯೇ ಇವರು ತೆರಳಿದ್ದರು ಎನ್ನಲಾಗಿದೆ . ಈ ಬಗ್ಗೆ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸಿದ್ದರು.
ಭಟ್ಟರ ಮೊಬೈಲ್ ಟವರ್ ಲೋಕೇಶನ್ ಕೂಡ ಮೂರೂರು ಗುಡ್ಡದಲ್ಲೆ ತೋರಿಸುತ್ತಿರುವುದರಿಂದ ಪೊಲೀಸರು ರಾತ್ರಿ ಕೂಡ ಗಸ್ತು ತಿರುಗುವ ಮೂಲಕ ಶೋಧ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದರು. ಮೊಬೈಲ್ ಕರೆ ಆಧರಿಸಿ ದೊರೆತ ಸುಳಿವಿನ ಮೇರೆಗೆ ಶಿರಸಿಯಲ್ಲಿ ಇಬ್ಬರನ್ನು ಗುರುವಾರ ಸಂಜೆ ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ವಿಶ್ವೇಶ್ವರ ಭಟ್ಟರ ಹತ್ಯೆಯಾಗಿರುವುದು ಬೆಳಕಿಗೆ ಬಂದಿದೆ.ಈ ಬಗ್ಗೆ ಇಲಾಖೆಯ ದೃಢೀಕರಣಕ್ಕೆ ಕಾಯಲಾಗುತ್ತಿದೆ.
ತಕ್ಷಣ ಕಾರ್ಯಪ್ರವೃತರಾದ ಪೊಲೀಸರು ಕೂಜಳ್ಳಿ ಭಾಗದ ತೋಟವೊಂದರಲ್ಲಿ ಹೂತು ಹಾಕಿದ್ದ ಶವವನ್ನು ಮೇಲಕ್ಕೆತ್ತುವ ಪ್ರಕ್ರಿಯೆ ನಡೆಸಿದ್ದಾರೆ ಎನ್ನಲಾಗಿದೆ.
ಸುಫಾರಿ ಕೊಟ್ಟು ಕೊಲೆಮಾಡಿಸಿದ ಬಗ್ಗೆ ಶಂಕೆ ಮೂಡಿದೆ ಎನ್ನಲಾಗಿದೆ. ಆಸ್ತಿಯ ಕಲಹವೇ ಈ ಕೊಲೆಗೆ ಕಾರಣ ಎನ್ನುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಇಲಾಖೆಯಿಂದ ಪರಿಪೂರ್ಣ ಮಾಹಿತಿ ನಿರೀಕ್ಷಿಸಲಾಗಿದೆ.ಈ ಎಲ್ಲಾ ವಿವರ ಪೋಲೀಸರಿಂದ ಪರಿಪೂರ್ಣ ಮಾಹಿತಿಯ ನಂತರ ದೃಢಗೊಳ್ಳಬಹುದಾಗಿದೆ.ತನಿಖೆ ಹಾಗೂ ವಿಚಾರಣೆಯ ನಂತರದಲ್ಲಿ ಈ ವಿಚಾರಗಳ ಪೂರ್ಣ ಮಾಹಿತಿ ಬರಬೇಕಿದೆ. ಜನತೆಯಿಂದ ಸಿಕ್ಕ ಮಾಹಿತಿ ನಮೂದಿಸಿದೆ.