ಕುಮಟಾ : ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ ಪಟ್ಟಣದ ಕುಂಭೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಿಶ್ವೇಶ್ವರ ಭಟ್ಟ ಅವರ ಕೊಲೆ ಪ್ರಕರಣ ಬೇಧಿಸುವಲ್ಲಿ ಪೋಲೀಸ್ ಇಲಾಖೆ ಸಫಲವಾಗಿದ್ದು ಅವರ ಶವವನ್ನು ಇಂದು ಕುಮಟಾದ ಕೂಜಳ್ಳಿಯ ಸಮೀಪದ ಮೆಣಸಿನಕೆರೆ ಗುಡ್ಡದಲ್ಲಿ ಹೊರತೆಗೆದಿದ್ದಾರೆ.
ಪಟ್ಟಣದ ಹೆಡ್‌ಪೋಸ್ಟ್ ಆಫೀಸ್ ಸಮೀಪದ ನಿವಾಸಿ ವಿಶ್ವೇಶ್ವರ ಭಟ್ ಅವರು ಕಳೆದ ಮಂಗಳವಾರ ಸಂಜೆ ತಾಲೂಕಿನ ಮೂರೂರು ಸಮೀಪದಲ್ಲಿ ಹೊಸ ಜಾಗದ ಶುದ್ಧಿಕರಣ ಹೋಮಕ್ಕಾಗಿ ಅಪರಿಚಿತ ವ್ಯಕ್ತಿಯೊಂದಿಗೆ ತನ್ನದೆ ಬೈಕ್‌ನಲ್ಲಿ ತೆರಳಿದ್ದರು.
ರಾತ್ರಿಯಾದರೂ ಮನೆಗೆ ವಾಪಸ್ ಬಾರದ ಕಾರಣ ಗಾಬರಿಯಾದ ಅವರ ಪತ್ನಿ ಬುಧವಾರ ಕುಮಟಾ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಶ್ವೇಶ್ವರ ಭಟ್ ಬಳಸಿರುವ ಮೊಬೈಲ್‌ನ ಕರೆಗಳನ್ನು ಪರಿಶೀಲಿಸುವ ಜೊತೆಗೆ ಪಟ್ಟಣದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳಲ್ಲಿ ಸೆರೆಯಾದ ವಿಡಿಯೋಗಳ ಪರಿಶೀಲನೆ ನಡೆಸಿದ್ದರು.
ಭಟ್ಟರ ಮನೆಗೆ ಆಗಮಿಸಿದ ಜಾಕೆಟ್ ಧರಿಸಿದ ಅಪರಿಚಿತ ವ್ಯಕ್ತಿಯು ಹೊಸ ಬಸ್ ನಿಲ್ದಾಣದಿಂದ ಬೇರೆ ಬೈಕ್‌ನಲ್ಲಿ ಭಟ್ಟರ ಮನೆಗೆ ಬಂದಿರುವುದು ಮತ್ತು ಭಟ್ಟರ ಮನೆಯಿಂದ ಮೂರೂರು ರಸ್ತೆಗೆ ತೆರಳುತ್ತಿರುವ ದೃಶ್ಯಾವಳಿಯನ್ನು ಪೊಲೀಸರಿಗೆ ಲಭಿಸಿರುವುದು ತಿಳಿದುಬಂದಿತ್ತು.
ಭಟ್ಟರ ಮೊಬೈಲ್ ಟವರ್ ಲೋಕೇಶನ್ ಕೂಡ ಮೂರೂರು ಗುಡ್ಡದಲ್ಲೆ ತೋರಿಸುತ್ತಿರುವುದರಿಂದ ಪೊಲೀಸರು ರಾತ್ರಿ ಕೂಡ ಗಸ್ತು ತಿರುಗುವ ಮೂಲಕ ಶೋಧ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದರು.ಮೊಬೈಲ್ ಕರೆ ಆಧರಿಸಿ ದೊರೆತ ಸುಳಿವಿನ ಮೇರೆಗೆ ಶಿರಸಿಯಲ್ಲಿ ಇಬ್ಬರನ್ನು ಗುರುವಾರ ಸಂಜೆ ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ವಿಶ್ವೇಶ್ವರ ಭಟ್ಟರ ಹತ್ಯೆಯಾಗಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಆರೋಪಿತ ಮೂವರನ್ನು ತನಿಖೆ ನಡೆಸಿ ಪ್ರಕರ್ಣ ಬೇಧಿಸಿದ್ದಾರೆ. ಭಟ್ಟರ ಹತ್ತಿರದ ಸಂಬಂಧಿಯೇ ಈ ಕೊಲೆಯ ರುವಾರಿ ಎನ್ನಲಾಗಿದೆ. ಆರೋಪಿಯನ್ನು ಮಂಜುನಾಥ ಭಟ್ಟ ಎಂಬುದಾಗಿ ಗುರುತಿಸಲಾಗಿದ್ದು ಇವರ ಹಾಗೂ ವಿಶ್ವೇಶ್ವರ ಭಟ್ಟರ ನಡುವೆ ಆಸ್ತಿ ಕಲಹ ನಡೆಯುತ್ತಿದ್ದು ಹೈಕೋರ್ಟ ನಲ್ಲಿಯೂ ಈ ಕುರಿತು ಕೇಸ್ ನಡೆಯುತ್ತಿತ್ತು ಎಂದು ಮೃತರ ಸಂಬಂಧಿಕರು ಮಾಹಿತಿ ನೀಡಿದ್ದಾರೆ.
ಆರೋಪಿತರನ್ನು ಸ್ಥಳಕ್ಕೆ ಕರೆತಂದು ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ಪೋಲೀಸ್ ಇಲಾಖೆಯ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.