ಭಟ್ಕಳ : ಶಿರಾಲಿಯ ಸಾಲೆಮನೆಯ ಮಠದ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನಡೆಯುತ್ತಿರುವ ದಸರಾ ಉತ್ಸವ ಅತ್ಯಂತ ವಿಶಿಷ್ಟವಾದುದು. ಶಾಲಾ ಮಕ್ಕಳಿಗೆ ವಿವಿಧ ಸ್ಪರ್ದೆ, ಪ್ರತಿಭಾ ಪುರಸ್ಕಾರ, ಕಲಾವಿದರಿಗೆ, ನಿವೃತ್ತರಿಗೆ ಸನ್ಮಾನಿಸುವಂತಹಾ ಉಪಯುಕ್ತ ಕಾರ್ಯಕ್ರಮವನ್ನು ಸಂಘಟಿಸುವು ಯುವ ಸಂಘಟಕರ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಆರ್ ನರಸಿಂಹ ಮೂರ್ತಿ ನುಡಿದರು.
ಅವರು ದಸರಾ ಉತ್ಸವದ ಅಂಗವಾಗಿ ಶಿರಾಲಿಯ ಸಾಲೆಮನೆಯ ಮಠದ ಶ್ರೀ ಸಿದ್ಧಿವಿನಾಯಕ ದೇವಾಲಯ ಹಾಗು ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ನಡೆದ ವಿವಿದ ಸ್ಪರ್ದಾ ವಿಜೇತರುಗಳ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿರಾಲಿ ಗ್ರಾಮ ಪಂಚಾಯತ್ ಅಧ್ಯಕ್ಷ ವೆಂಕಟೇಶ ನಾಯ್ಕ ಮಾತನಾಡಿ ಮಕ್ಕಳ ಪ್ರತಿಭೆಗಳನ್ನು ಪೋಷಿಸುವ, ಪುರಸ್ಕರಿಸುವ ಕಾರ್ಯವನ್ನು ಮಾಡುತ್ತಿರುವ ಮಠದ ಸಿದ್ಧಿವಿನಾಯಕ ದೇವಸ್ಥಾನದ ಯುವ ಸಂಘಟಕರ ಉತ್ಸಾಹ ನಿಜಕ್ಕೂ ಪ್ರಶಂಸನಾರ್ಹ. ಇಂತಹ ಉತ್ಸಾಹಿಗಳ ಪ್ರತಿಭೆಗಳ ಪೋಷಿಸುವ ಕಾರ್ಯಕ್ಕೆ ಸಾಹಿತ್ಯ ಪರಿಷತ್ತು ಕೈ ಜೋಡಿಸುತ್ತಿರುವುದು ನಿಜಕ್ಕೂ ಸಂತಸದ ಸಂಗತಿ ಎಂದು ನುಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ, ತಾಲೂಕಾ ಪಂಚಾಯತ ಸದಸ್ಯೆ ಮಾಲತಿ ದೇವಾಡಿಗ, ಸ್ಥಳೀಯ ಉದ್ಯಮಿ ಅಶೋಕ ಕಾಮತ್ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಮೋಹನ ದೇವಾಡಿಗ ಮಾತನಾಡಿದರು. ಕಾರ್ಯಕ್ರಮದಲ್ಲಿ ದಸರಾ ಹಬ್ಬದ ಪ್ರಯುಕ್ತ ನಡೆದ ವಿವಿಧ ಸ್ಪರ್ದೆಗಳ ವಿಜೇತರಿಗೆ ಬಹುಮಾನವನ್ನು ಹಾಗೂ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ.ಯಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕತಿಸಲಾಯಿತು. ಇದೇ ಸಂದರ್ಭದಲ್ಲಿ ಮಠದ ಶ್ರೀ ಸಿದ್ಧಿವಿನಾಯಕ ದೇವಾಲಯದ ವತಿಯಿಂದ ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಇವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಕೇಶವ ದೇವಡಿಗ ವರದಿಯನ್ನು ವಾಚಿಸಿದರೆ ದೇವಿದಾಸ ನಾಯ್ಕ ನಿರ್ವಹಿಸಿದರು. ಕುಮಾರಿ ಸಾರಿಕಾ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.