ಶಿರಸಿ: ಸದಾ ವಾಹನ ದಟ್ಟಣೆಯಿಂದ ಕೂಡಿರುವ ಶಿರಸಿ- ಕುಮಟಾ ರಾಜ್ಯ ಹೆದ್ದಾರಿ 69 ರಾಷ್ಟ್ರೀಯ ಹೆದ್ದಾರಿಯಾಗಿ ಬದಲಾಗಲಿದೆ. ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿ ಕಾರ್ಯ ಡಿಸೆಂಬರ್ನಲ್ಲಿ ಆರಂಭಗೊಳ್ಳುವ ನಿರೀಕ್ಷೆ ಇದೆ. ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಈ ಕುರಿತಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದು, 18 ತಿಂಗಳ ಕಾಲ ಈ ಮಾರ್ಗದಲ್ಲಿ ಸಂಚರಿಸುವ ಬೃಹತ್ ವಾಹನಗಳಿಗೆ ಬದಲಿ ಮಾರ್ಗ ಸೂಚಿಸುವಂತೆ ವಿನಂತಿಸಿದೆ ಎಂಬ ವಿಷಯ ಬಹು ಚರ್ಚಿತವಾಗಿತ್ತು.
ಕರಾವಳಿ ಮತ್ತು ಮಲೆನಾಡಿಗೆ ಈ ರಸ್ತೆ ಪ್ರಮುಖ ಕೊಂಡಿಯಾಗಿದೆ. ಹುಬ್ಬಳ್ಳಿ, ಬೆಳಗಾವಿ, ಬಾಗಲಕೋಟೆ ಇನ್ನಿತರ ಜಿಲ್ಲೆಗಳಲ್ಲದೇ ಹೊರ ರಾಜ್ಯದಿಂದಲೂ ಮಂಗಳೂರು ಮತ್ತು ಕೇರಳಕ್ಕೆ ಸಂಪರ್ಕ ಹೊಂದಲು ಈ ರಸ್ತೆಯನ್ನು ಬಳಸುತ್ತಾರೆ.
ಮಲೆನಾಡಿನ ಜಡಿ ಮಳೆಯ ಅಬ್ಬರಕ್ಕೆ ಸಿಲುಕಿ ಈ ರಸ್ತೆಯಲ್ಲಿ ಡಾಂಬರು ಕಿತ್ತು ಹೋಗುವುದು, ಹೊಂಡಗಳ ಮಧ್ಯೆಯೇ ವಾಹನ ಸವಾರರು ಕಸರತ್ತು ನಡೆಸುವುದು ಪ್ರತಿ ವರ್ಷದ ಕಾಯಕ. ಮೂರು ಕಡೆಗಳಲ್ಲಿ ಹೇರ್ಪಿನ್ ಮಾದರಿಯ ತಿರುವು, ಉಳಿದೆಡೆ ಬೃಹತ್ ತಿರುವು ಹೊಂದಿರುವ ದೇವಿಮನೆ ಘಟ್ನಲ್ಲಿ ಮಳೆಗಾಲದಲ್ಲಿ ಬೃಹತ್ ಹೊಂಡಗಳು ಬೀಳುತ್ತಿದ್ದವು. ಆವರಿಸಿಕೊಳ್ಳುವ ದಟ್ಟ ಮಂಜಿನಿಂದಾಗಿ ಅಪಘಾತಗಳ ಸಂಖ್ಯೆ ಹೆಚ್ಚಾದಾಗ ಕಳೆದ ನಾಲ್ಕು ವರ್ಷಗಳ ಹಿಂದೆ 6 ಕಿ. ಮೀ.ಗಳಷ್ಟು ಸಿಮೆಂಟ್ ರಸ್ತೆ ನಿರ್ವಿುಸಲಾಗಿತ್ತು. ಈ ಎಲ್ಲದರ ನಡುವೆ ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸುವ ಸಲುವಾಗಿ ಹೆದ್ದಾರಿ ಪ್ರಾಧಿಕಾರಕ್ಕೆ ಈ ರಸ್ತೆಯನ್ನು ವರ್ಗಾಯಿಸಲಾಗಿದೆ ಎಂಬ ವರದಿಯಾಗಿತ್ತು.
ಇದೀಗ ಪಶ್ಚಿಮ ಘಟ್ಟದ ಅತಿ ಸೂಕ್ಷ್ಮ ಪರಿಸರ ಪ್ರದೇಶವಾದ ದೇವಿಮನೆ- ಬಂಡಲ್ ಘಟ್ಟ, ಅಘನಾಶಿನಿ ನದಿ ಕಣಿವೆ ಪ್ರದೇಶ ಪರ್ವತಗಳನ್ನು ಕಡಿದು ಶಿರಸಿ- ಕುಮಟಾ ರಸ್ತೆ ಅಗಲೀಕರಣ ಯೋಜನೆ ಜಾರಿ ಮಾಡುವುದರಿಂದ ಭಾರೀ ಭೂಕುಸಿತ, ಪರಿಸರ ಅವಘಡಗಳಿಗೆ ಕಾರಣವಾಗಲಿದೆ ಎಂದು ವೃಕ್ಷ ಲಕ್ಷ ನಿಯೋಗ ಶಾಸಕ ವಿಶ್ವೇಶ್ವರ ಹೆಗಡೆ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಮನವಿಯು ಹಾಳಾಗಿರುವ ಶಿರಸಿ-ಕುಮಟಾ ರಸ್ತೆ ಪುನರ್ ನಿರ್ಮಾಣ ಯೋಜನೆ ಜಾರಿ ಮಾಡಬೇಕು ಮತ್ತು ರಸ್ತೆ ಅಗಲೀಕರಣ ಯೋಜನೆಯ ಬಗ್ಗೆ ಪುನರ್ ಪರಿಶೀಲನೆ ಮಾಡಬೇಕು ಎಂಬ ಅಂಶಗಳನ್ನ ಒಳಗೊಂಡಿದೆ.
ನಿಯೋಗದಲ್ಲಿ ಅನಂತ ಹೆಗಡೆ ಅಶೀಸರ, ವಾಸಂತಿ ಹೆಗಡೆ, ಡಾ. ಕೇಶವ ಕೊರ್ಸೆ, ಮಧುಮತಿ, ವಿ.ಪಿ.ಹೆಗಡೆ, ಬಿ.ಜಿ.ಹೆಗಡೆ ಗೇರಾಳ, ಗಣೇಶ ಯಡಳ್ಳಿ, ವಿಶ್ವನಾಥ ಬುಗಡಿಮನೆ, ರಮೇಶ ಕಾನಗೋಡ, ಈಶಣ್ಣ ನೀರ್ನಳ್ಳಿ, ನರಸಿಂಹ ವಾನಳ್ಳಿ, ರತ್ನಾಕರ ಬಾಡಲಕೊಪ್ಪ, ಶ್ರೀಪಾದ, ಗಣಪತಿ ಕೆ, ರಾಘವ, ಶ್ರೀಪಾದ ದೊಡ್ನಳ್ಳಿ ಮುಂತಾದವರಿದ್ದರು.