ಭಟ್ಕಳ: ಕೂದಲು ಬೆಳೆಸೋದು ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ. ಹುಡುಗಿರಿಗಂತೂ ಕೂದಲಿನ ಆರೈಕೆಯೇ ಬಹು ಪ್ರೀತಿಯ ಕಾಯಕವೂ ಹೌದು.
ಆದರೆ ಇಲ್ಲೊಬ್ಬಳು ಕ್ಯಾನ್ಸರ್ ರೋಗದಿಂದ ಕೂದಲು ಕಳೆದುಕೊಂಡವರಿಗೆ ಕೂದಲು ನೀಡಿ ಈಗ ಎಲ್ಲರ ಗಮನ ಸೆಳೆದಿದ್ದಾಳೆ.
ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚುತ್ತಿರುವ ತಾಲೂಕಿನ ಮುರ್ಡೇಶ್ವರದ ಬೆಡಗಿ, ಮುರುಡೇಶ್ವರದ ತಿಲಕ್ ರಾವ್ ಮತ್ತು ನಮ್ರತಾ ರಾವ್ ದಂಪತಿಯ 21ರ ಹರೆಯದ ಪುತ್ರಿ ವಸುಧಾ ರಾವ್, ಕ್ಯಾನ್ಸರ್ ಪೀಡಿತರಿಗೆ ತನ್ನ ಕೂದಲು ದಾನ ಮಾಡಿ ಎಲ್ಲರಿಗಿಂತ ಭಿನ್ನ ಎನಿಸಿಕೊಂಡಿದ್ದಾರೆ.
‘ಕೀಮೋಥೆರಪಿ ಚಿಕಿತ್ಸೆ ಬಳಿಕ ಕೂದಲು ಉದುರಿಕೊಂಡು ಕೀಳರಿಮೆ ಅನುಭವಿಸುತ್ತಿರುವ ಕ್ಯಾನ್ಸರ್ ರೋಗಿಗಳನ್ನು ಕಂಡು ವೈಯುಕ್ತಿಕವಾಗಿ ನಾನು ತುಂಬಾ ನೊಂದು ಈ ಯೋಚನೆ ಮಾಡಿದೆ ಅನ್ನುತ್ತಾರೆ ಇವರು.
ಈಕೆ ಮಂಗಳೂರಿನ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಬೇಕೆಂಬ ಕನಸು ಬಾಲ್ಯದಲ್ಲಿಯೇ ಹೊಂದಿದ್ದ ಇವರು, ಗ್ಲಾಮರ್ ಲೋಕಕ್ಕೆ ಕೂಡ ಕಾಲಿಟ್ಟರು. 2018ರಲ್ಲಿ ನಡೆದ ಮಿಸ್ ಮಂಗಳೂರು ಸ್ಪರ್ಧೆಯಲ್ಲಿ ವಸುಧಾ ಮಿಸ್ ಫೋಟೊ ಜೆನಿಕ್ ಮತ್ತು ಫಸ್ಟ್ ರನ್ನರ್‌ಆಪ್ ಎನಿಸಿಕೊಂಡರು.
ಎಲ್ಲ ಚೆಲುವೆಯರಿಗಿಂತ ಕೊಂಚ ಭಿನ್ನವಾಗಿ ಕಾಣಿಸಿಕೊಳ್ಳುವ ವಸುಧಾ, 2017ರಲ್ಲಿ ಬ್ಲಿಸ್ ಹೇರ್ ಸೆಲೂನ್ ಆಯೋಜಿಸಿದ ಲ್ಯಾಕ್ಸ್ ಆಫ್ ಲವ್ ಅಭಿಯಾನದಡಿ ಕ್ಯಾನ್ಸರ್ ರೋಗಿಗಳಿಗೆ ಹೆಚ್ಚಿನ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಕೇಶ ಮುಂಡನ ಮಾಡಿಸಿಕೊಂಡು ಸ್ವಯಂ ಪ್ರೇರಿತರಾಗಿ ತಮ್ಮ ಕೂದಲನ್ನು ದಾನ ಮಾಡಿದ್ದಾರೆ.