•ರವಿ ಮುಕ್ರಿ ಕರ್ಕಿ
ಹೊನ್ನಾವರ: ನೀರಿಗಾಗಿ ಈ ಗ್ರಾಮದ ಜನರು ಹಲವು ವರ್ಷಗಳಿಂದ ಒಡೆದ ಪೈಪ್ ಅನ್ನೇ ಅವಲಂಬಿಸಿದ್ದಾರೆ. ಇದೇ ನೀರನ್ನು ದಿನನಿತ್ಯದ ಕಾಯಕಕ್ಕಾಗಿ ಇಲ್ಲಿನ ಜನರು ಬಳಕೆ ಮಾಡುತ್ತಿದ್ದಾರೆ.
ಮರಾಕಲ್ ಯೋಜನೆಯಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಅಳವಡಿಸಿದ ಪೈಪ್ ಒಡೆದು ವರ್ಷಗಳೇ ಕಳೆದಿವೆ. ಆದರೆ, ಈ ಪೈಪ್‌ನಲ್ಲಿ ಸೋರಿಕೆಯಾಗುವ ನೀರು ಕರ್ಕಿ ಗ್ರಾಮ ವ್ಯಾಪ್ತಿಯ ಕೋಣೆಕಾರ ಮಜರೆಯ ಜನರ ದಾಹ ತೀರಿಸುತ್ತಿದೆ.
ಕುಮಟಾ ಹಾಗೂ ಹೊನ್ನಾವರಕ್ಕೆ ಜಂಟಿಯಾಗಿ ಮರಾಕಲ್ ಯೋಜನೆಯಲ್ಲಿ ನೀರು ಪೂರೈಕೆ ಮಾಡಲಾಗುತ್ತದೆ. ಎರಡೂ ತಾಲ್ಲೂಕುಗಳಿಗೆ ನೀರು ಸರಬರಾಜು ಮಾಡಲು ಬೃಹತ್ ಪೈಪ್‌ಗಳನ್ನು ಹೆದ್ದಾರಿ ಬದಿಯಲ್ಲಿ ಅಳವಡಿಸಲಾಗಿದೆ. ಆದರೆ, ಕರ್ಕಿ ಗ್ರಾಮ ವ್ಯಾಪ್ತಿಯಲ್ಲಿ ಹಾದುಹೋಗಿರುವ ಪೈಪ್ ಒಂದು ಭಾಗದಲ್ಲಿ ಒಡೆದಿದೆ. ಇದರಿಂದಾಗಿ ಸೋರಿಕೆ ಉಂಟಾಗುತ್ತಿದೆ.
ಕುಡಿಯಲು ಬೇರೆ ಎಲ್ಲಿಯೂ ನೀರು ಸಿಗದ ಕಾರಣ ಇಲ್ಲಿನ ಜನರು ಒಡೆದ ಪೈಪ್ ಅನ್ನೇ ಆಶ್ರಯಿಸಿದ್ದಾರೆ. ಸೋರಿಕೆಯಾಗುವ ನೀರನ್ನು ಕೊಡದಲ್ಲಿ ಹಿಡಿದು ಹೆದ್ದಾರಿಯುದ್ದಕ್ಕೂ ಹೊತ್ತೊಯ್ಯುವುದೇ ನಿತ್ಯದ ದೃಶ್ಯವಾಗಿದೆ. ಪೈಪ್ ಸೋರುವ ಜಾಗದಲ್ಲೇ ಜನರು ನೀರಿಗೆ ಸಂಬಂಧಿಸಿದ ತಮ್ಮ ಇತರ ಅಗತ್ಯಗಳನ್ನೂ ಪೂರೈಸಿಕೊಳ್ಳುತ್ತಿದ್ದಾರೆ.