ಒಂದು ಮಗುವಿಗೆ ಜನ್ಮನೀಡುವುದೆಂದರೆ ಅದು ಮಹಿಳೆಗೆ ಪುನರ್ಜನ್ಮ. ಹಿಂದಿನ ಕಾಲದಲ್ಲಿ ಆಧುನಿಕ ಸೌಲಭ್ಯಗಳೇ ಇಲ್ಲದ ಕಾಲದಲ್ಲಿ ಹೆರಿಗೆಯಾಗುವುದೆಂದರೆ ಅದು ಅವಳು ಸತ್ತು ಹುಟ್ಟಿದಂತೆ ಆಗಿತ್ತು. ಆದರೆ ಈಗ ಆಧುನಿಕತೆ ಬೆಳೆದಂತೆಲ್ಲ ಎಲ್ಲವೂ ಸುಸೂತ್ರವಾಗಿ ಆಗುತ್ತಿದೆ. ಆದರೂ ಗರ್ಭಿಣಿಯರು ತಮ್ಮ ಆರೋಗ್ಯದತ್ತ ಸದಾ ಕಾಳಜಿವಹಿಸುವುದು ಅಗತ್ಯವಾಗಿದೆ.
ಏಕೆಂದರೆ ಗರ್ಭದಲ್ಲಿ ಮತ್ತೊಂದು ಜೀವವಿದ್ದು ಅದರ ಬೆಳವಣಿಗೆಗೂ ಕಾಳಜಿ ವಹಿಸಬೇಕಾಗಿರುವುದರಿಂದ ಅದರ ಬೆಳವಣಿಗೆಗೂ ಮಹತ್ವ ನೀಡಬೇಕಾಗಿರುವುದರಿಂದ ಆಹಾರ ಸೇವನೆಯಲ್ಲಿ ತುಂಬಾ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ಈ ಅವಧಿಯಲ್ಲಿ ಆಕೆಗೆ ಪೌಷ್ಠಿಕ ಆಹಾರದ ಅಗತ್ಯತೆ ಇರುತ್ತದೆ. ಅದು ಕೇವಲ ಹೊಟ್ಟೆ ತುಂಬಿ ಹಸಿವು ನೀಗಿಸುವ ಆಹಾರವಷ್ಟೆ ಆಗಿರದೆ ಶರೀರಕ್ಕೆ ಅಗತ್ಯವಾದ ಪೋಷಕಾಂಶಯುಕ್ತ ಆಹಾರವಾಗಿರಬೇಕು ಎಂಬುದು ಅಷ್ಟೇ ಮುಖ್ಯವಾಗಿರುತ್ತದೆ.
ಉತ್ತಮ ಪೌಷ್ಠಿಕಾಂಶವುಳ್ಳ ಆಹಾರವನ್ನು ಸೇವಿಸಿದರೆ ಮಾತ್ರ ತಾನು ಆರೋಗ್ಯವಾಗಿದ್ದು, ಆರೋಗ್ಯವಂತ ಶಿಶುವಿಗೆ ಜನ್ಮ ನೀಡಲು ಮತ್ತು ಹಾಲುಣಿಸಲು ಸಾಧ್ಯವಾಗುತ್ತದೆ. ಗರ್ಭಿಣಿ ಹೆಚ್ಚಿನ ಪೋಷಕಾಂಶವುಳ್ಳ ಆಹಾರ ಪದಾರ್ಥಗಳನ್ನು ಸೇವಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಅವರ ಸಲಹೆಯಂತೆ ತರಕಾರಿ, ಹಾಲು, ಮೊಟ್ಟೆ, ಹಣ್ಣು ಇನ್ನಿತರ ದೇಹಕ್ಕೆ ಪೋಷಕಾಂಶ ಒದಗಿಸುವ ಪದಾರ್ಥಗಳನ್ನು ಸೇವಿಸಬೇಕಾಗುತ್ತದೆ.
ಆಹಾರ ಸೇವನೆಯಲ್ಲಿ ಉದಾಸೀನತೆ ತೋರುವುದು, ಸಮಯಕ್ಕೆ ಸರಿಯಾಗಿ ಊಟ ಮಾಡದಿರುವುದು. ಇದೆಲ್ಲವೂ ತನ್ನ ಮತ್ತು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಸಾಮಾನ್ಯವಾಗಿ ಗರ್ಭಧಾರಣೆಯ ಸಮಯ ಮತ್ತು ಅದಕ್ಕೂ ಮೊದಲು, ನಂತರ ತೆಗೆದುಕೊಳ್ಳುವ ಸೂಕ್ತ ಪೌಷ್ಠಿಕ ಆಹಾರವು ದೀರ್ಘಾವಧಿವರೆಗೆ ಅನುಕೂಲ ಮಾಡಿಕೊಡುತ್ತದೆ ಎಂದರೆ ಅಚ್ಚರಿಯಾಗಬಹುದು. ಆದರೆ ಇದು ನಿಜ. ಏಕೆಂದರೆ ಗರ್ಭಿಣಿಯರುಆರೋಗ್ಯದ ಮೇಲೆ ಹಲವು ಬಗೆಯ ಅನುವಂಶೀಯ, ಸಾಮಾಜಿಕ, ಆರ್ಥಿಕ ಸಂಗತಿಗಳು, ಸೋಂಕು, ವಾತಾವರಣದ ಸ್ಥಿತಿಗತಿಗಳು ಎಲ್ಲವೂ ಪರಿಣಾಮ ಬೀರುತ್ತದೆ. ಅದು ಆಕೆಯ ಮೇಲೆ ಮಾತ್ರವಲ್ಲದೆ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಮೇಲೆಯೂ ಅಷ್ಟೇ ಪರಿಣಾಮವನ್ನು ಬೀರುತ್ತದೆ ಎಂಬುವುದನ್ನು ಮರೆಯಬಾರದು.
ಗರ್ಭದಲ್ಲಿ ಬೆಳೆಯುವ ಮಗು ತನ್ನ ಬೆಳವಣಿಗೆಗೆ ಬೇಕಾದ ಆಹಾರವನ್ನು ತಾಯಿಯ ದೇಹದಿಂದ ಹೇಗೋ ಪಡೆದುಕೊಳ್ಳುತ್ತದೆ. ಆದರೆ ಪೌಷ್ಠಿಕ ಆಹಾರದ ಕೊರತೆ ಗರ್ಭಿಣಿಯನ್ನು ಹಲವು ಸಂಕಷ್ಠಗಳಿಗೆ ಸಿಲುಕಿಸುತ್ತದೆ ಎಂಬುದನ್ನು ತಳ್ಳಿಹಾಕುವಂತಿಲ್ಲ.
ಗರ್ಭಧಾರಣೆಯ ಒಂಬತ್ತು ತಿಂಗಳ ಅವಧಿಯಲ್ಲಿ ಗಳಿಸುವ ತೂಕ 10 ರಿಂದ 14 ಕೆಜಿ ಇರಬೇಕು. ಅದರಲ್ಲೂ ಸರಾಸರಿ 12 ಕೆಜಿ ಇರಲೇ ಬೇಕಂತೆ. ಇನ್ನು ಗರ್ಭಧಾರಣೆಯ ಅವಧಿಯಲ್ಲಿ ತಾಯಿ ಪಡೆಯುವ ತೂಕಕ್ಕೆ ಮತ್ತು ಜನ್ಮ ಕಾಲದಲ್ಲಿ ಮಗುವಿನ ತೂಕ ಸರಿಯಾಗಿರುವುದಕ್ಕೆ ಅಧಿಕ ಪೋಷಕಾಂಶಗಳ ಆಹಾರ ಸೇವನೆಯನ್ನು ಗರ್ಭಿಣಿ ಮಹಿಳೆಯರು ಮಾಡಬೇಕಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಗರ್ಭಿಣಿ ಮಹಿಳೆಯರು ದಿನನಿತ್ಯ ಪೋಷಕಾಂಶಯುಕ್ತ ಆಹಾರಗಳನ್ನು ಸೇವಿಸುವುದರಿಂದ ತಮ್ಮ ಆರೋಗ್ಯದೊಂದಿಗೆ ಗರ್ಭದಲ್ಲಿರುವ ಮಗುವು ಆರೋಗ್ಯಯುತವಾಗಿ ಜನಿಸಲು ಸಾಧ್ಯವಾಗುತ್ತದೆ.
ಗರ್ಭಾವಧಿಯ ದಿನಗಳಲ್ಲಿ ಮಹಿಳೆಯರು ಕ್ಯಾಲೋರಿ, ಪ್ರೊಟೀನ್, ಕೊಬ್ಬಿನಾಂಶ, ಕ್ಯಾಲ್ಸಿಯಂ, ಕಬ್ಬಿಣಾಂಶ, ವಿಟಮಿನ್ ಡಿ, ವಿಟಮಿನ್ ಬಿ9 ಇರುವ ಆಹಾರ ಪದಾರ್ಥಗಳನ್ನು ಸೇವಿಸುವುದು ಅಗತ್ಯವಾಗಿದೆ. ಗರ್ಭಿಣಿಯರ ಆಹಾರ ಸೇವನೆಯು ಸಾಮಾನ್ಯರಾಗಿದ್ದಾಗ ಸೇವಿಸುತ್ತಿದ್ದ ಆಹಾರಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿರಬೇಕು. ಹೇಗೆಂದರೆ, ಮೊದಲ ತ್ರೈಮಾಸಿಕದಲ್ಲಿ 150 ಕ್ಯಾಲೋರಿ, ಎರಡನೇ ಮತ್ತು ಮೂರನೇ ತ್ರೈಮಾಸಿಕ ಅವಧಿಯಲ್ಲಿ ದಿನವಹಿ 350 ಕ್ಯಾಲೋರಿ ಇರುವಂತೆ ನೋಡಿಕೊಳ್ಳಬೇಕು. ಈ ಅಧಿಕ ಪ್ರಮಾಣವು ಗರ್ಭಕೋಶ ಮತ್ತು ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗೂ, ಹಾಲುಣಿಸುವ ಅವಧಿಯಲ್ಲಿ ಬೇಕಾಗುವ ಕ್ಯಾಲೋರಿ ಮೀಸಲು ಸಂಗ್ರಹಣೆಗೂ ಹಾಗೂ ಗರ್ಭಿಣಿಯರ ದೇಹ ತೂಕ ಹೆಚ್ಚಾಗುವುದರಿಂದ ಅದರ ನಿರ್ವಹಣೆಗೂ ಅಗತ್ಯವಾಗಿದೆ.
ಇನ್ನು ದಿನನಿತ್ಯ ಸೇವಿಸುವ ಆಹಾರ ಪದಾರ್ಥಗಳಲ್ಲಿ ಮೊಟ್ಟೆ, ಹಾಲು, ಮಾಂಸ, ಕಾಳು, ಬೇಳೆ ಮತ್ತು ಎಣ್ಣೆಕಾಳುಗಳಲ್ಲಿ ಪ್ರೊಟೀನ್ ಅಂಶವಿದ್ದು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು. ವೈದ್ಯರ ಪ್ರಕಾರ ಗರ್ಭಿಣಿ ಸೇವಿಸುವ ಆಹಾರ ಪದಾರ್ಥದಲ್ಲಿ ಕೊಬ್ಬಿನಾಂಶದ ಒಟ್ಟು ಪ್ರಮಾಣವು ಕ್ಯಾಲೋರಿಯ ಶೇಕಡ 20ಭಾಗವಾಗಿರಬೇಕು. ಅಲ್ಲದೆ ಸೇವಿಸುವ ಆಹಾರದಲ್ಲಿ ಕೊಬ್ಬಿನ ಪ್ರಮಾಣವು ನೇರವಾಗಿ 30 ಗ್ರಾಂನಲ್ಲಿರಬೇಕು. ಇದಕ್ಕಾಗಿ ತುಪ್ಪ, ಬೆಣ್ಣೆ ಮತ್ತು ಅಡುಗೆ ಎಣ್ಣೆಯನ್ನು ನಿಗದಿತ ಪ್ರಮಾಣದಲ್ಲಿ ಸೇವಿಸಬೇಕಾಗುತ್ತದೆ.
ಗರ್ಭದಲ್ಲಿರುವ ಮಗುವಿನ ಮೂಳೆ ಹಲ್ಲುಗಳು ಸದೃಢವಾಗಿ ಬೆಳೆಯಲು ಕ್ಯಾಲ್ಸಿಯಂ ಅಗತ್ಯ. ದಿನಕ್ಕೆ ಕನಿಷ್ಟ 1200 ಮಿ.ಗ್ರಾಂ ಕ್ಯಾಲ್ಸಿಯಂಯುಕ್ತ ಆಹಾರ ದೇಹವನ್ನು ಸೇರಬೇಕಾಗುತ್ತದೆ. ಕಬ್ಬಿಣಾಂಶ ದಿನಕ್ಕೆ 35 ಮಿ.ಗ್ರಾಂ ಪ್ರಮಾಣದಲ್ಲಿರಬೇಕು. ಇದು ಗರ್ಭದಲ್ಲಿರುವ ಮಗುವಿನ ಬೆಳವಣಿಗೆಯನ್ನು ಹೆಚ್ಚಿಸುವುದಲ್ಲದೆ, ರಕ್ತದಲ್ಲಿರುವ ಹಿಮೋಗ್ಲೋಬಿನ್ ಪ್ರಮಾಣವನ್ನು ಕೂಡ ಹೆಚ್ಚು ಮಾಡುತ್ತದೆ. ದೇಹದಲ್ಲಿ ಕಬ್ಬಿಣಾಂಶ ಹೆಚ್ಚಾಗಬೇಕಾದರೆ, ಲಿವರ್, ಒಣಹುರುಳಿ, ಒಣಹಣ್ಣುಗಳು, ಹಸಿರು ತರಕಾರಿಗಳು, ಮಾಂಸ, ಮೊಟ್ಟೆ, ಎಣ್ಣೆ, ಕಾಳುಗಳು, ಇಡ್ಲಿ, ದೋಸೆ, ಮೊಳಕೆ ಕಾಳುಗಳು, ಕಿತ್ತಳೆ ಹಣ್ಣುಗಳನ್ನು ತಪ್ಪದೆ ಸೇವಿಸುವುದು ಅಗತ್ಯ.
ಇದೆಲ್ಲದರ ನಡುವೆ ದಿನಕ್ಕೆ 400ಮಿ.ಗ್ರಾಂನಷ್ಟು ವಿಟಮಿನ್ಬಿ9(ಫೋಲಿಕ್ ಆ್ಯಸಿಡ್) ದೇಹಕ್ಕೆ ಆಹಾರದ ಮೂಲಕ ಸೇರುವಂತೆ ನೋಡಿಕೊಳ್ಳಬೇಕು. ವಿಟಮಿನ್ಬಿ9 ಪೋಷಕಾಂಶವನ್ನು ಸೊಪ್ಪು, ತರಕಾರಿ, ಲಿವರ್, ಕಾಳು, ಮೊಳಕೆ ಗೋಧಿ, ಬಾದಾಮಿ, ಸೋಯಾ, ಕಿತ್ತಳೆ ಹಣ್ಣಿನ ರಸ, ಕಡಲೆಕಾಯಿ ಮೊದಲಾದ ಪದಾರ್ಥಗಳಿಂದ ಪಡೆಯಬಹುದಾಗಿದೆ.