ಕುಮಟಾ : ಸಾರ್ವಜನಿಕ ಶಿಕ್ಷಣ ಇಲಾಖೆಯವರು ಹಮ್ಮಿಕೊಂಡಿದ್ದ ಕುಮಟಾ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಅವ್ಯವಸ್ಥೆಯ ತಾಣವಾಗಿ ಗೋಚರಿಸಿತು . ಶುಕ್ರವಾರ ಪ್ರೌಢಶಾಲಾ ವಿಭಾಗದ ಸ್ಪರ್ಧೆಗಳು ಸಂಪನ್ನವಾಗಿ ಉದ್ಘಾಟನಾ ಸಮಾರಂಭವು ಶುಕ್ರವಾರವೇ ನಡೆದಿತ್ತು .

ಶನಿವಾರ ಪ್ರಾಥಮಿಕ ಶಾಲಾ ವಿಭಾಗದ ಹಿರಿಯ ಹಾಗೂ ಕಿರಿಯ ವಿದ್ಯಾರ್ಥಿಗಳ ಸ್ಪರ್ಧಾ ಕಾರ್ಯಕ್ರಮ ಉದ್ಘಾಟನಾ ಸಮಾರಂಭ ಹಾಗೂ ಇನ್ನಾವುದೇ ರೀತಿಯ ಕಾರ್ಯಕ್ರಮಗಳು ಇರದೇ ಇದ್ದರೂ ಹನ್ನೊಂದು ಮೂವತ್ತು ರವರೆಗೆ ಪ್ರಾರಂಭವೇ ಆಗಲಿಲ್ಲ .

ತಾಲ್ಲೂಕುಮಟ್ಟದ ಸ್ಪರ್ಧೆಯಾದ್ದರಿಂದ ಇದಕ್ಕೆ ಸೂಕ್ತವಾದ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ಹಾಗೂ ಬಿಇಒ ಮಾಡಿಕೊಂಡಿರಬೇಕು ಆದರೆ .ಎರಡನೇ ದಿನದ ಕಾರ್ಯಕ್ರಮಕ್ಕೆ ಸೂಕ್ತವಾದ ವ್ಯವಸ್ಥೆಗಳು ಕಂಡು ಬಂದಿಲ್ಲ .ವಿದ್ಯುತ್ ವ್ಯವಸ್ಥೆ ಸರಿಯಿಲ್ಲದ ಕಾರಣ ಯಾವುದೇ ಸ್ಪರ್ಧೆಗಳನ್ನು ಹನ್ನೊಂದು ಮೂವತ್ತು ರವರೆಗೆ ಪ್ರಾರಂಭವೇ ಮಾಡಿರಲಿಲ್ಲ . ಅದಕ್ಕೆ ಸೂಕ್ತ ವ್ಯವಸ್ಥೆಯನ್ನು ಮೊದಲೇ ಮಾಡಿಕೊಳ್ಳದ ಕಾರಣ ಈ ಗೊಂದಲ ಉಂಟಾಯಿತು. ಎಲ್ಲ ವಿದ್ಯಾರ್ಥಿಗಳು ಒಂಬತ್ತು ಗಂಟೆಗೆ ಸ್ಥಳದಲ್ಲಿ ಹಾಜರಿದ್ದು ತಮ್ಮ ತಮ್ಮ ಸ್ಪರ್ಧೆಯ ಭಾಗವಹಿಸಲು ಉತ್ಸುಕರಾಗಿದ್ದರು . ಆದರೆ ಸ್ಪರ್ಧೆ ಪ್ರಾರಂಭಿಸಲು ತಡವಾದ ಕಾರಣ ಮಕ್ಕಳು ಕಾದು ಕಾದು ಸುಸ್ತಾಗಿದ್ದರು .

ಕಾರ್ಯಕ್ರಮ ಪ್ರಾರಂಭಿಸಲು ತಡವಾದ ಕಾರಣ ಸಾಯಂಕಾಲವಾದರೂ ಸ್ಪರ್ಧೆಗಳು ಸಂಪನ್ನವಾಗಿಲ್ಲ ಅದರಲ್ಲಿಯೂ ಕೋಲಾಟ ಹಾಗೂ ಜನಪದ ನೃತ್ಯದಂತಹ ಸ್ಪರ್ಧೆಗಳನ್ನು ಕತ್ತಲೆಯಲ್ಲಿ ಮಾಡುವ ದುಸ್ಥಿತಿ ಶಿಕ್ಷಣ ಇಲಾಖೆಗೆ ಬಂದಿತ್ತು. ಈ ಸಮಯದಲ್ಲಿ ಮಕ್ಕಳೊಂದಿಗಿದ್ದ ಕೆಲ‌ಪಾಲಕರು ಇಲಾಖೆಯ ಈ ವ್ಯವಸ್ಥೆಗೆ ಹಿಡಿ ಶಾಪ ಹಾಕುತ್ತಿದ್ದರು.
[youtube https://www.youtube.com/watch?v=22SfrhYhMVI&w=302&h=341]

RELATED ARTICLES  ಕಾಳಿನದಿ ಪ್ರವಾಹ ಮೊದಲ ಮುನ್ನೆಚ್ಚರಿಕೆ ಸೂಚನೆ

ಆದರೆ ಈ ಎಲ್ಲ ವ್ಯವಸ್ಥೆಗಳು ಅಸ್ತವ್ಯಸ್ತವಾಗಿದ್ದರೆ ಇದಕ್ಕೆ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಾಯಂಕಾಲ ಸ್ಥಳದಲ್ಲಿ ಹಾಜರಿ ಇರಲಿಲ್ಲ ಎನ್ನುವುದು ಪಾಲಕರ ಹಾಗೂ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಯಿತು .

ತಾಲ್ಲೂಕು ಮಟ್ಟದ ಸ್ಪರ್ಧೆಗಳೆಂದರೆ ಬಿಇಒ ಆ ಕುರಿತು ಗಮನ ವಹಿಸಿ ತಾವು ಸ್ಥಳದಲ್ಲಿ ನಿಂತು ಸಮಸ್ಯೆಗಳನ್ನು ಪರಿಹರಿಸುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎನ್ನುವುದು ಪಾಲಕರ ಮಾತಾಗಿತ್ತು . ಕೆಲ ಹಿರಿಯ ಅಧಿಕಾರಿಗಳು ಇದೆಲ್ಲವನ್ನೂ ನೋಡಿಕೊಳ್ಳುತ್ತಾ ತಮಗೆ ವಹಿಸಿದ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಸುಸ್ತಾಗಿಹೋಗಿದ್ದು ಬಿಟ್ಟರೆ ಯಾವುದೇ ನಿರ್ಣಯ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ.

ಛದ್ಮವೇಷ ಸ್ಪರ್ಧೆಯ ಬಗ್ಗೆ ಆತಂಕ

ಪ್ರತಿಭಾ ಕಾರಂಜಿಯ ಒಂದು ವಿಷಯವಾದ ಛದ್ಮವೇಷ ಸ್ಪರ್ಧೆಯ ಬಗ್ಗೆ ಪಾಲಕರು ಹಾಗೂ ಕೆಲವು ಶಿಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ .ಪ್ರತಿಭಾ ಕಾರಂಜಿ ಸ್ಪರ್ಧೆಗಳು ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರಲು ಮಾಡುವ ಕಾರ್ಯಕ್ರಮವಾಗಿದೆ ಆದ್ರೆ ಈ ಛದ್ಮವೇಷದಲ್ಲಿ ಮಕ್ಕಳ ಪ್ರತಿಭೆಯ ಅನಾವರಣ ಆಗುತ್ತಿಲ್ಲ .ಮಕ್ಕಳ ಪ್ರತಿಭೆಯ ಅನಾವರಣದ ಬದಲು ಕೇವಲ ಮೂರು ನಿಮಿಷಕ್ಕಾಗಿ ಬೇರೆ ಬೇರೆ ಕಲಾವಿದರು ಬೇರೆ ಬೇರೆ ವೈವಿಧ್ಯದ ಸ್ತಬ್ಧ ಚಿತ್ರಗಳನ್ನು , ಬೇರೆ ಬೇರೆ ಅಲಂಕಾರಗಳನ್ನು ಮಾಡುವುದರ ಮೂಲಕ ಈ ಸ್ಪರ್ಧೆ ಹಣ ಸುಲಿಗೆಯ ಕಾರ್ಯವಾಗಿ ನಡೆಯುತ್ತಿದೆ ಎಂದು ಪಾಲಕರು ಆತಂಕ ವ್ಯಕ್ತಪಡಿಸಿದರು .

ಛದ್ಮವೇಷಗಳು ಒಂದು ಜೀವನದ ಕಲೆಯಾಗಿ ಹೊರಹೊಮ್ಮಬೇಕು ಹೊರತು ಬೇರೆ ಕಲಾವಿದರಿಂದ ಹಣ ಕೊಟ್ಟು ವಸ್ತುಗಳನ್ನು ಖರೀದಿಸಿ ಅದನ್ನು ವೇದಿಕೆಯ ಮೇಲೆ ಪ್ರದರ್ಶಿಸುವಂತೆ ಆಗಬಾರದು ಎಂದು ಅಲ್ಲಲ್ಲಿ ಕೆಲ ಹಿರಿಯರು ಮಾತನಾಡಿಕೊಳ್ಳುತ್ತಿರುವುದು ಕೇಳಿ ಬಂತು .

RELATED ARTICLES  ಸದಸ್ಯರ ಬಹಿಷ್ಕಾರದ ನಡುವೆ ಕಾರವಾರ ನಗರಸಭೆ ಬಜೆಟ್ ಮಂಡನೆ

ಈ ಎಲ್ಲ ವಿಷಯಗಳ ಬಗ್ಗೆ ಗಮನಹರಿಸಬೇಕಿದ್ದ ಶಿಕ್ಷಣ ಇಲಾಖೆಯ ಪ್ರಮುಖ ಅಧಿಕಾರಿಗಳು ಇನ್ನು ಮುಂದಾದರೂ ಇದನ್ನು ಯೋಚಿಸಬೇಕು ಎಂಬುದು ಪಾಲಕರ ಮಾತಾಗಿತ್ತು.

ದೂರದ ಊರುಗಳಿಗೆ ಹೋಗುವವರಿಗೆ ಸಮಸ್ಯೆಯಾಯಿತು ಪ್ರತಿಭಾ ಕಾರಂಜಿ

ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವುದಕ್ಕೋಸ್ಕರ ಬೇರೆ ಬೇರೆ ಸ್ಥಳದಿಂದ ತಾಲ್ಲೂಕಿನ ಕೇಂದ್ರ ಸ್ಥಾನಕ್ಕೆ ಹಾಜರಾಗಿದ್ದರು .ಆದರೆ ಇಲ್ಲಿ ನಡೆದ ಸ್ಪರ್ಧೆಯ ವಿಳಂಬದ ಕಾರಣ ನಡುರಾತ್ರಿಗೆ ಮನೆ ಸೇರುವಂತೆ ಆಯಿತು. ಗೋಕರ್ಣ, ಬರ್ಗಿ,ಹನೇಹಳ್ಳಿ ಹಾಗೂ ಇನ್ನಿತರ ಸ್ಥಳದ ದೂರದ ಊರುಗಳಿಂದ ಆಗಮಿಸಿದ ವಿದ್ಯಾರ್ಥಿಗಳು ಮನೆ ಸೇರುವ ತವಕದಲ್ಲಿದ್ದರೆ ಶಿಕ್ಷಕರು ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವ ಚಿಂತೆಯಲ್ಲಿದ್ದರು .

ಹಣ ಬಂದರೂ ಆಗುತ್ತಿಲ್ಲ ವ್ಯವಸ್ಥೆ
ತಾಲೂಕಾ ಮಾಟ್ಟದ ಪ್ರತಿಭಾ ಕಾರಂಜಿಗೆ ಸರಕಾರದಿಂದ ಲಕ್ಷಾಂತರ ರೂಪಾಯಿ ಹಣ ಬಂದರೂ ವ್ಯವಸ್ಥೆ ಮಾತ್ರ ಸರಿಯಾಗಿ ಆಗುತ್ತಿಲ್ಲ. ಹಣ ಬರದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಶಾಲೆಯವರು ನಡೆಸಿದರೆ ಅದರ ಬಗ್ಗೆ ತಪ್ಪು ಹುಡುಕುವ ಹಿರಿಯ ಅಧಿಕಾರಿಗಳು ತಾಲೂಕಾ ಮಟ್ಟದ್ದನ್ನು ಈ ರೀತಿ ನಡೆಸುತ್ತಿರುವುದಕ್ಕೆ ಕಾರಣ ಮಾತ್ರ ತಿಳಿಯದಾಗಿದೆ.

ಆದರೆ ಇದಾವುದನ್ನೂ ಗಮನಿಸದ ಶಿಕ್ಷಣ ಇಲಾಖೆಯ ಪ್ರಮುಖ ಅಧಿಕಾರಿಗಳು ಮಾತ್ರ ಸ್ಥಳದಲ್ಲಿ ಏನೆಲ್ಲ ಗೊಂದಲಗಳಾದರೂ ಕಾಣಿಸಿಕೊಳ್ಳದೇ ಇರುವುದು ಮಾತ್ರ ವಿಪರ್ಯಾಸ.