ಶಿರಸಿ: ದೇಶವನ್ನು ಈವರೆಗೆ ದುರ್ಬಲ ಮಾರ್ಗದಲ್ಲಿ ಸಾಗಿಸಿದ ಕಾಂಗ್ರೆಸ್ನೆ ನೆಹರೂ ಕುಟುಂಬದವರಿಗೆ ಮಾರ್ಷಲ್ ಭಾಷೆಯಲ್ಲಿ ಉತ್ತರ ನೀಡಬೇಕಾದ ಅನಿವಾರ್ಯತೆಯಿದೆ . ಕಾಂಗ್ರೆಸ್ ದೇಶವನ್ನು ದುರ್ಬಲಗೊಳಿಸುವ ಮಾರ್ಗದಲ್ಲಿಯೇ ಬಂದಿದೆ. ಕೆಲವು ಒಳ್ಳೆಯ ಮುಖಗಳಿಂದ ಉತ್ತಮ ಕಾರ್ಯವಾಗಿದೆ ವಿನಾ ನೆಹರೂ ಕುಟುಂಬ ಬಂದ ಕಡೆ ದೇಶ ಅವಮಾನದ ಹಾದಿಯಲ್ಲಿಯೇ ಸಾಗಿದೆ. ಗೊತ್ತಿಲ್ಲದ ವಿವಾದ ಹುಟ್ಟುಹಾಕಿ, ಮೇಲಿಂದ ಮೇಲೆ ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸಲು ಹೊರಟ ಕಾಂಗ್ರೆಸ್ನ್ ಹಾಗೂ ನೆಹರೂ ಕುಟುಂಬದ ವರ್ತನೆ ಖಂಡನೀಯ. ಇವತ್ತಿನವರೆಗೆ ಕಾಶ್ಮೀರ ತಲೆನೋವಿನ ವಿಚಾರವಾಗಲು ನೆಹರೂ ಕುಟುಂಬವೇ ನೇರ ಕಾರಣ. ಬಾಂಗ್ಲಾ ವಲಸಿಗರಿಂದ ಇಂದು ದೇಶಕ್ಕೆ ಹಾನಿಯಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಅಂದು ವಲಸಿಗರ ರಕ್ಷಣೆಗೆ ಮುಂದಾದ ಕಾಂಗ್ರೆಸ್ ಸರ್ಕಾರ, ಈ ಹಿಂದೆ ದೇಶದ ಗಡಿ ವಿಚಾರದಲ್ಲಿ ರಾಜಕೀಯ ಮಾಡಲು ಮುಂದಾದ ನೆಹರೂರವರಿಗೆ ಮಾರ್ಷಲ್ ಭಾಷೆಯಲ್ಲಿ ಉತ್ತರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದ ಫೀಲ್ಡ್ ಮಾರ್ಷಲ್ ಮಣಿಕ್ ಶಾ ಮಾದರಿಯಲ್ಲಿಯೇ ಇಂದು ಕೂಡ ನೆಹರೂ ಕುಟುಂಬದವರಿಗೆ ಮಾರ್ಷಲ್ ಭಾಷೆಯಲ್ಲಿ ಉತ್ತರ ನೀಡಬೇಕಾದ ಅನಿವಾರ್ಯತೆಯಿದೆ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.
ಶಿರಸಿಯ ರೋಟರಿ ಸಮುದಾಯ ಭವನದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಆಯೋಜಿಸಿದ್ದ ಚಿಂತಕರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮೇಲೆ ನೋಡಲು ಚಂದ ಒಳಗಡೆ ಏನಿಲ್ಲ ಎನ್ನುವಂತಾಗಿತ್ತು. ನಮಗೆ ಗೊತ್ತಿಲ್ಲದ ಹಾಗೆ ನಮ್ಮ ಸೈನಿಕ ಶಕ್ತಿ ಕಡಿಮೆ ಆಗುತ್ತಿತ್ತು. ಅದರಲ್ಲೂ ವಾಯು ಪಡೆಯ ಶಕ್ತಿ ಕುಂಟಿತಗೊಳ್ಳುತ್ತಿತ್ತು. ಅದರ ಶಕ್ತಿವರ್ಧನೆಗೆ ರಾಫೆಲ್ ಯುದ್ಧ ವಿಮಾನ ಒಪ್ಪಂದ ಮಾಡಲಾಗಿದೆ. ಅದನ್ನು ತಿಳಿಯದ ಕೆಲವರು ಬಾಯಿ ಬಡಿದುಕೊಳ್ಳುವ ಕೆಲಸ ಮಾಡುತ್ತಾರೆ ಎಂದರು.
2019ರಲ್ಲಿ ಪ್ರಜಾಪ್ರಭುತ್ವದ 2 ರಾಜಕೀಯ ಪಕ್ಷಗಳ ನಡುವೆ ಚುನಾವಣೆಯಲ್ಲ. ದೇಶಭಕ್ತಿ ಹಾಗೂ ದೇಶದ್ರೋಹಿಗಳ ನಡುವಿನ ಹೋರಾಟವಾಗಿದೆ ಎಂದ ಅವರು, ಕೆಲವು ವ್ಯಕ್ತಿಗಳನ್ನು ಆರಿಸಿಕೊಂಡು ದೇಶದಲ್ಲಿ ದರಬಾರ ಮಾಡಲು ಬಿಜೆಪಿ ಮುಂದಾಗಿಲ್ಲ. ಕೆಲವು ಯೋಜನೆಗಳ ಅನುಷ್ಠಾನಕ್ಕೆ ಬಿಜೆಪಿ ಸೀಮಿತವಾಗದೆ ದೇಶ ಕಟ್ಟುವ ಮಹದುದ್ದೇಶ ಹೊಂದಿದೆ. ಕ್ರಿಯಾಶೀಲ ಯೋಚನೆ ಹರಿವು ಸಮಾಜವ್ಯಾಪಿ ಹಾಗೂ ಕ್ಷೇತ್ರ ವ್ಯಾಪಿಯಾಗಬೇಕು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಪರಾಮರ್ಶೆ, ವಿಶ್ಲೇಷಣೆಗಳಾಗಲು ಈ ಕಾರ್ಯಕ್ರಮ ಸಂಘಟಿಸಲಾಗಿದೆ. ರಾಜಕಾರಣದ ಧ್ಯೇಯೋದ್ದೇಶ, ನೀತಿಗಳನ್ನು ದೇಶದ ಸಂಸ್ಕೃತಿ, ಪರಂಪರೆಗೆ ಪೂರಕವಾಗಿ ಇಡಬೇಕು. ಭಾರತ ವಿಶ್ವಗುರು ಆಗಬೇಕು. ಈ ಹಿನ್ನೆಲೆಯಲ್ಲಿ ಪ್ರಧಾನಿ ಜೊತೆ ಸಮುದಾಯ ಕೂಡ ಹೆಜ್ಜೆ ಇಡಬೇಕು. ಚಿಂತಕರು ಇದರ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದರು.
ಈ ವೇಳೆ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಜಿ.ನಾಯ್ಕ, ಭಟ್ಕಳ ಶಾಸಕ ಸುನೀಲ ನಾಯ್ಕ, ಕರ್ನಾಟಕ ರಾಜ್ಯ ಬಿಜೆಪಿ ಆರ್ಥಿಕ ಪ್ರಕೋಷ್ಠದ ಸಂಚಾಲಕ ವಿಶ್ವನಾಥ ಭಟ್ಟ, ಜಿಲ್ಲಾ ಪ್ರಕೋಷ್ಠದ ಬಸವರಾಜ ಓಶಿಮಠ, ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಂ.ಜಿ.ನಾಯ್ಕ ಇದ್ದರು.