ಚಳಿಗಾಲದಲ್ಲಿ ಪಾದದ ರಕ್ಷಣೆ ಬಹಳ ಮುಖ್ಯ. ಬಿರುಕು ಬಿಟ್ಟ ಪಾದಗಳು ಯಮ ಹಿಂಸೆ ನೀಡುತ್ವೆ. ಚಳಿಗಾಲ ಮುಗಿದ್ರೆ ಸಾಕು ಎನ್ನುವ ಪರಿಸ್ಥಿತಿ ಕೆಲವರಿಗಿರುತ್ತದೆ. ಹಾಗಾಗಿ ಚಳಿಗಾಲದಲ್ಲಿ ಪಾದಗಳ ಬಗ್ಗೆ ವಿಶೇಷ ಗಮನ ನೀಡಬೇಕಾಗುತ್ತದೆ. ಕೆಲಸದ ಒತ್ತಡದ ಮಧ್ಯೆಯೂ ಪಾದಗಳ ಆರೈಕೆ ಮಾಡಿಕೊಳ್ಳಬೇಕು.
ನಾನು ಎಲ್ಲಾ ರೀತಿಯ ಕ್ರೀಮ್ ಹಾಕಿದೆ ಆದರೂ ಏನು ಪ್ರಯೋಜನವಾಗಿಲ್ಲ. ಪಾದದ ಬಿರುಕು ಮಾತ್ರ ಹೋಗುತ್ತಿಲ್ಲ ಹೀಗೆಂದು ಮಾತನಾಡುವವರನ್ನು ನಾವು ಆಗಾಗ್ಗೆ ಕಾಣುತ್ತಿರುತ್ತೇವೆ. ಎಲ್ಲಾ ಸುಂದರವಾಗಿದ್ದು ಪಾದದಲ್ಲಿ ಬಿರುಕಿದ್ದರೆ ಹೇಗೆ? ಅದು ನಮ್ಮ ಸೌಂದರ್ಯಕ್ಕೊಂದು ಕಪ್ಪು ಚುಕ್ಕೆಯಿದ್ದಂತೆ. ಜೊತೆಗೆ ಮುಜುಗರವೂ ಹೌದು.
ಚರ್ಮ, ಕೈಕಾಲು, ಬೆರಳು, ಮುಖ ಎಲ್ಲಾ ಚೆನ್ನಾಗಿದ್ದು ಪಾದದಲ್ಲಿ ತಾನೆ ಬಿರುಕು? ಪರ್ವಾಗಿಲ್ಲ ಹಾಗೆಂದು ಸುಮ್ಮನಿರಲು ಸಾಧ್ಯವೆ? ಖಂಡಿತಾ ಸಾಧ್ಯವಿಲ್ಲ. ಹಾಗಾಗಿ ಹೆಚ್ಚಿನ ಮಂದಿ ಬಿರುಕು ಮುಚ್ಚುವ ಪ್ರಯತ್ನವನ್ನು ಮಾಡುತ್ತಲೇ ಇರುತ್ತಾರೆ.
ಹಾಗೆ ನೋಡಿದರೆ ಇದು ಕೇವಲ ಒಬ್ಬರದೋ, ಇಬ್ಬರದೋ ಸಮಸ್ಯೆ ಅಲ್ಲ.
ಬಹುತೇಕ ಮಂದಿ ಈ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಕೆಲವೊಮ್ಮೆ ಈ ಸಮಸ್ಯೆಗೆ ಪರಿಹರಿಸಲು ಮಾಡಿದ ಪ್ರಯತ್ನವೂ ಫಲ ಕೊಟ್ಟಿರುವುದಿಲ್ಲ. ಹೀಗಾಗಿ ಯಾವುದಾದರು ಕಾರ್ಯಕ್ರಮಕ್ಕೆ ಹೋದಾಗ ಅಯ್ಯೋ ನನ್ನ ಕಾಲನ್ನು ನೋಡಿ ಬಿಟ್ಟರೆ ಎಂಬ ಕೀಳರಿಮೆ ಕಾಡುವುದುಂಟು. ಹಳ್ಳಿಗಳ ಗದ್ದೆ, ಹೊಲ, ದನದ ಕೊಟ್ಟಿಗೆಗಳಲ್ಲಿ, ತೋಟಗಳಲ್ಲಿ ಕೆಲಸ ಮಾಡುವವರಲ್ಲಿ ಈ ಸಮಸ್ಯೆ ಅಧಿಕ ಪ್ರಮಾಣದಲ್ಲಿರುತ್ತದೆ. ಆದರೆ ಪಾದಗಳಲ್ಲಿನ ಬಿರುಕು ತಲೆಕೆಡಿಸಿಕೊಳ್ಳುವಷ್ಟು ಸಮಸ್ಯೆ ಅಲ್ಲ.
ಸಮಯ- ಸಮಯಕ್ಕೆ ಪೆಡಿಕ್ಯೂರ್ ಮಾಡಿಕೊಳ್ಳಬೇಕು. ಅದಕ್ಕಾಗಿ ನೀವು ಬ್ಯೂಟಿ ಪಾರ್ಲರ್ ಗೆ ಹೋಗಬೇಕೆಂದೇನಿಲ್ಲ. ಮನೆಯಲ್ಲಿ ಸುಲಭವಾಗಿ ಮಾಡಿಕೊಳ್ಳಬಹುದು.
*ಬಿಸಿ ನೀರಿಗೆ ಸ್ವಲ್ಪ ಶಾಂಪೂ ಬೆರೆಸಿ ಅದರಲ್ಲಿ ಪಾದವನ್ನಿಡಿ. ಇದರಿಂದ ಡೆಡ್ ಸ್ಕಿನ್ ದೂರವಾಗುವ ಜೊತೆಗೆ ಬಿರುಕಿನಲ್ಲಿ ಸಿಲುಕಿರುವ ಕೆಸರು ಹೋಗುತ್ತದೆ.
*ಅರಿಶಿನ ಹಾಗೂ ಆಲಿವ್ ಆಯಿಲ್ ಒಡಕು ನಿವಾರಣೆಗೆ ಮನೆ ಮದ್ದು. ಅರಿಶಿನ ಪುಡಿಗೆ ಆಲಿವ್ ಆಯಿಲ್ ಸೇರಿಸಿ ಪೇಸ್ಟ್ ಸಿದ್ಧಪಡಿಸಿಕೊಳ್ಳಿ. ನಂತ್ರ ಅದನ್ನು ಒಡೆದ ಪಾದಗಳಿಗೆ ಹಚ್ಚಿಕೊಳ್ಳಿ. ಕೆಲವು ದಿನ ಹೀಗೆ ಮಾಡುತ್ತ ಬಂದಲ್ಲಿ ನಿಮ್ಮ ಪಾದ ಕೋಮಲ ಹಾಗೂ ಮೃದುವಾಗುತ್ತದೆ.
*ವ್ಯಾಕ್ಸ್ ಮತ್ತು ತೆಂಗಿನೆಣ್ಣೆ ಸೇರಿಸಿ ಮಾಡಿದ ಮಿಶ್ರಣವನ್ನೂ ನೀವು ಪಾದಗಳಿಗೆ ಹಚ್ಚಬಹುದು. ಇದು ಪಾದಗಳ ಉರಿಯನ್ನು ಕಡಿಮೆ ಮಾಡುತ್ತದೆ. ವ್ಯಾಕ್ಸ್ ಹಾಗೂ ತೆಂಗಿನೆಣ್ಣೆಯನ್ನು ಸ್ವಲ್ಪ ಕುದಿಸಿ. ತಣ್ಣಗಾದ ನಂತ್ರ ರಾತ್ರಿ ಹಚ್ಚಿ ಮಲಗುವುದು ಬಹಳ ಒಳ್ಳೆಯದು.
*ಗ್ಲಿಸರಿನ್ ಹಾಗೂ ರೋಸ್ ವಾಟರ್ ಮಿಶ್ರಣವನ್ನು ಸಿದ್ಧಮಾಡಿಕೊಳ್ಳಿ. ಒಂದು ಚಮಚ ಗ್ಲಿಸರಿನ್ ಗೆ 2 ಚಮಚ ರೋಸ್ ವಾಟರ್ ಅಳತೆಯಂತೆ ನಿಮಗೆ ಎಷ್ಟು ಬೇಕು ಅಷ್ಟು ಮಿಶ್ರಣವನ್ನು ಸಿದ್ಧಪಡಿಸಿ ಒಂದು ಬಾಟಲಿಯಲ್ಲಿ ಹಾಕಿಟ್ಟುಕೊಳ್ಳಿ. ಪ್ರತಿದಿನ ರಾತ್ರಿ ಪಾದಗಳಿಗೆ ಹಚ್ಚಿ. ನಾಲ್ಕೈದು ದಿನದಲ್ಲಿ ಪರಿಣಾಮ ಕಾಣುತ್ತದೆ.
ಪಾದಗಳನ್ನು ಹೆಚ್ಚಾಗಿ ನೀರಿನಲ್ಲಿ ನೆನೆಯಲು ಬಿಡಬಾರದು. ಸಾಧ್ಯವಾದಷ್ಟು ನೀರಿನಿಂದ ದೂರವಿರಬೇಕು. ರಾತ್ರಿ ಮಲಗುವ ಮುನ್ನ ಪಾದಗಳನ್ನು ಚೆನ್ನಾಗಿ ತೊಳೆದು ಯಾವುದಾದರು ತೈಲ ಅಥವಾ ಕ್ರೀಮ್ ಅನ್ನು ಬಳಸಬೇಕು. ಸಾಮಾನ್ಯವಾಗಿ ಪಾದದಲ್ಲಿ ಕೊಳೆಯಿದ್ದರೆ ಮೊದಲು ಪಾದಗಳಿಗೆ ನಿಂಬೆಹಣ್ಣು ರಸ ಹಚ್ಚಿ ಸುಮಾರು ಹದಿನೈದು ನಿಮಿಷ ಹಾಗೆಯೇ ಬಿಟ್ಟು ಆ ನಂತರ ತೊಳೆಯಬೇಕು. ಹೀಗೆ ಮಾಡುವುದರಿಂದ ಪಾದಗಳಿಗೆ ಅಂಟಿದ ಕೊಳೆ ಹೋಗುತ್ತದೆ.
ಪಾದಗಳಲ್ಲಿ ಬಿರುಕು ಕಂಡು ಬಂದರೆ ವೆಜಲೈನ್, ಪೆಟ್ರೋಲಿಯಂ ಜೆಲ್ಲಿಯಂತಹ ಮುಲಾಮು ಹಚ್ಚಬೇಕು. ರೋಸ್ ಲಾಟರ್ ಅಲ್ಮಾಂಡ್ ಆಯಿಲ್ ಅನ್ನು ಬೆರೆಸಿ ಪಾದಗಳಿಗೆ ಲೇಪಿಸುವುದರಿಂದ ಪಾದಗಳು ಮೃದುವಾಗುತ್ತವೆ. ಪಾದಗಳಲ್ಲಿ ಬಿರುಕಿನಿಂದಾಗಿ ನೋವುಗಳು ಕಾಣಿಸಿಕೊಂಡಾಗ ಬಿಸಿ ನೀರಿಗೆ ಉಪ್ಪು, ನಿಂಬೆರಸವನ್ನು ಬೆರೆಸಿ ಅದರಲ್ಲಿ ಸುಮಾರು ಹತ್ತು ನಿಮಿಷಗಳ ಕಾಲ ಪಾದಗಳನ್ನಿಟ್ಟರೆ ನೋವು ಕಡಿಮೆಯಾಗುತ್ತದೆ. ಪಾದಗಳಿಗೆ ದಿನವೂ ಅರಿಶಿನ ಲೇಪಿಸುವುದರಿಂದ ಫಂಗಸ್ ಕಡಿಮೆಯಾಗಿ ಹೊಳಪು ಬರುತ್ತದೆ.
ಒರಟಾದ ಚಪ್ಪಲಿ, ಶೂ ಬಳಸುವುದರಿಂದಲೂ ಪಾದಗಳು ಬಿರುಕು ಬಿಡುವ ಸಾಧ್ಯತೆಯಿದ್ದು, ಯಾವಾಗಲೂ ಮೃದುವಾದ ಚಪ್ಪಲಿಗಳನ್ನೇ ಬಳಸುವುದು ಒಳ್ಳೆಯದು. ಸ್ನಾನಕ್ಕೆ ಮುನ್ನ ಪಾದಗಳಿಗೆ ಕಡಲೆಹಿಟ್ಟು ಹಚ್ಚಿಕೊಂಡು ನಂತರ ಸ್ನಾನ ಮಾಡಿದರೆ ಪಾದಗಳ ಮೃದುತ್ವ ಉಳಿಸಿಕೊಳ್ಳಬಹುದು. ಮೆಂಥಾಲಿನಿಂದ ಕೂಡಿದ ಕ್ರೀಮ್ ಪಾದಗಳಿಗೆ ಹಚ್ಚಿದಲ್ಲಿ ಪಾದಗಳು ಮೃದುವಾಗಿಯೂ ದುರ್ಗಂಧ ರಹಿತವಾಗಿರುತ್ತವೆ.
ಉಗುರು ಬೆಚ್ಚಗಿನ ನೀರಿನಲ್ಲಿ ಶಾಂಪೂ ಬೆರೆಸಿ ಅದರಲ್ಲಿ 10 ನಿಮಿಷಗಳ ಕಾಲ ಕಾಲನ್ನಿರಿಸಿ ನಂತರ ಮೆತ್ತನೆಯ ಬ್ರಷ್ ನಿಂದ ಉಜ್ಜಿದಲ್ಲಿ ಪಾದಗಳಲ್ಲಿ ಹಿಡಿದುಕೊಂಡಂತಹ ಅಂಟು ಕೊಳೆಗಳು ಹೋಗಿ ಶುಭ್ರವಾಗುತ್ತವೆ. ಪಾದಗಳಿಗೆ ಫಂಗಸ್ ಇನ್ಪೆಕ್ಷನ್ ಇದ್ದ ಸಂದರ್ಭ ಸ್ನಾನದ ನಂತರ ಪಾದಗಳನ್ನು ಶುಭ್ರವಾದ ಬಟ್ಟೆಯಿಂದ ಒರೆಸಿ ಆ್ಯಂಟಿ ಫಂಗಸ್ ಕ್ರೀಮ್ ಹಚ್ಚಬೇಕು. ಹೀಗೆ ಮೇಲಿನ ಕೆಲವೊಂದು ವಿಧಾನಗಳನ್ನು ಅನುಸರಿಸುವುದರಿಂದ ಪಾದಗಳನ್ನು ಕಾಡುವ ಬಿರುಕಿನ ಸಮಸ್ಯೆಗಳಿಂದ ರಕ್ಷಿಸಿಕೊಳ್ಳಬಹುದಾಗಿದೆ. ಮುಖ್ಯವಾಗಿ ಪಾದಗಳನ್ನು ಸ್ವಚ್ಛವಾಗಿರಿಸಿಕೊಳ್ಳುವುದರಿಂದ ಪಾದದ ರಕ್ಷಣೆ ಸಾಧ್ಯ ಎಂಬುವುದನ್ನು ಮಾತ್ರ ಮರೆಯಬಾರದು.