ನವದೆಹಲಿ: 2010 ರಲ್ಲಿ ಅಯೋಧ್ಯೆ ಜಮೀನನ್ನು ಮೂರು ಭಾಗಗಳಾಗಿ ವಿಂಗಡಿಸಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜನವರಿಗೆ ಮುಂದೂಡಿದೆ. ಲೋಕಸಭಾ ಚುನಾವಣೆಗೂ ಮುನ್ನವೇ ಆಯೋಧ್ಯೆ ಭೂ ವಿವಾದ ತೀರ್ಪು ಪ್ರಕಟವಾಗುವುದು ಅನುಮಾನವಾಗಿದೆ ಎಂದು ತಿಳಿದುಬಂದಿದೆ.
ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್ ಗೊಗಾಯ್, ನ್ಯಾ. ಎಸ್ಕೆ ಕೌಲ್, ಕೆಎಂ ಜೋಸೆಫ್ ನೇತೃತ್ವದ ತ್ರಿಸದಸ್ಯ ಪೀಠ ಇಂದು ಅರ್ಜಿಯ ವಿಚಾರಣೆ ನಡೆಸಿದ್ದು, ಸುಪ್ರೀಂ ಕೋರ್ಟ್ ಕಲಾಪ ಕೇವಲ ಎರಡೇ ನಿಮಿಷಗಳಲ್ಲಿ ಮುಗಿದು ಹೋದದ್ದು ವಿಶೇಷ. 2019ರ ಜನವರಿಯಲ್ಲಿ ಅಯೋಧ್ಯೆ ಭೂ ವಿವಾದದ ವಿಚಾರಣೆಯನ್ನು ದಿನವಹಿ ನೆಲೆಯಲ್ಲಿ ನಡೆಸಲಾಗುವುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಲು ಸುಪ್ರೀಂ ಪೀಠ ನಿರಾಕರಿಸಿತು ಎನ್ನಲಾಗಿದೆ.
ದೀಪಾವಳಿ, ಕಿಸ್ಮಸ್, ಹೊಸ ವರ್ಷದ ದೀರ್ಘ ಕಾಲದ ರಜೆ ಕಾರಣ ಇಂದಿನಿಂದ ಆರಂಭಗೊಂಡು 2019ರ ಜನವರಿ 1ರ ವರೆಗೆ ಒಟ್ಟು 27 ದಿನ ಮಾತ್ರ ಕೋರ್ಟ್ ಕಲಾಪ ನಡೆಯಲಿದೆ ಎಂದು ವರದಿಯಾಗಿದೆ.