ಕುಮಟಾ: ಉತ್ತರ ಕನ್ನಡ ಜಿಲ್ಲಾ 21ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಲ್ಲಾಪುರದಲ್ಲಿ ನಡೆಸಲು ಜಿಲ್ಲಾ ಕಾರ್ಯಕಾರಿ ಸಮಿತಿ ತೀರ್ಮಾನಿಸಿದೆ. ಇದರಿಂದಾಗಿ 44 ವರ್ಷಗಳ ನಂತರ ಯಲ್ಲಾಪುರಕ್ಕೆ ಜಿಲ್ಲಾ ಸಮ್ಮೇಳನದ ಸಾರಥ್ಯ ವಹಿಸಲು ಅವಕಾಶ ಸಿಕ್ಕಂತಾಗಿದೆ.

ಭಾನುವಾರ ಇಲ್ಲಿಯ ಜಿಲ್ಲಾ ಕ.ಸಾ.ಪ. ಕಾರ್ಯಾಲಯದ ಸಭಾಭವನದಲ್ಲಿ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಕೊಂಡಿದ್ದು ಸದ್ಯದಲ್ಲಿಯೇ ಯಲ್ಲಾಪುರದಲ್ಲಿ ಸಭೆ ಕರೆದು ಸಮ್ಮೇಳನದ ಸ್ವಾಗತ ಸಮಿತಿ ರಚಿಸಲು ನಿರ್ಣಯ ತೆಗೆದುಕೊಳ್ಳಲಾಯಿತು.

ಸಮ್ಮೇಳನ ನಡೆಸಲು ಕುಮಟಾ ತಾಲೂಕು ಕಸಾಪ ಅಧ್ಯಕ್ಷ ಡಾ. ಶ್ರೀಧರ ಉಪ್ಪಿನಗಣಪತಿ ಅವರು ಕುಮಟಾ ತಾಲೂಕಿಗೇ ಮುಂದಿನ ಸಮ್ಮೇಳನ ನಡೆಸುವ ಅವಕಾಶ ಕೊಡಲು ಪಟ್ಟು ಹಿಡಿದರೆ, ಯಲ್ಲಾಪುರ ತಾಲೂಕು ಕಸಾಪ ಘಟಕದ ಅಧ್ಯಕ್ಷ ವೇಣುಗೋಪಾಲ ಮದ್ಗುಣ ಅವರು ತಮ್ಮ ತಾಲೂಕಿಗೆ 44 ವರ್ಷಗಳಿಂದ ಜಿಲ್ಲಾ ಸಮ್ಮೇಳನ ನಡೆಸಲು ಅವಕಾಶ ಸಿಗಲಿಲ್ಲ. ಹಿಂದಿನ ಅವಧಿಯಲ್ಲೂ ಸಮ್ಮೇಳನ ನಡೆಸಲು ಅವಕಾಶ ಸಿಗಲಿಲ್ಲ. ಆದ್ದರಿಂದ ಪ್ರಸ್ತುತ ಸಮ್ಮೇಳನವನ್ನು ಯಲ್ಲಾಪುರದಲ್ಲಿ ನಡೆಸಲು ಅವಕಾಶ ನೀಡಬೇಕು ಎಂದು ಜಿಲ್ಲಾಧ್ಯಕ್ಷರಿಗೆ ಲಿಖಿತ ಮನವಿ ಅರ್ಪಿಸಿದರು. ನಂತರ ಸಭೆಯಲ್ಲಿ ಈರ್ವರ ಮನವಿಯ ಕುರಿತಂತೆ ಚರ್ಚಿಸಿ ಯಲ್ಲಾಪುರದಲ್ಲಿ ಮುಂದಿನ ಜಿಲ್ಲಾ ಸಮ್ಮೇಳನ ನಡೆಸಲು ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ಘೋಷಿಸಿದರು.
ಸಭೆಯಲ್ಲಿ ಈ ಹಿಂದೆ ಹಳಿಯಾಳದ ತೇರಗಾಂವ್‍ನಲ್ಲಿ ನಡೆದ 20ನೇ ಜಿಲ್ಲಾ ಸಮ್ಮೇಳನದ ಜಮಾಖರ್ಚು ಕುರಿತಂತೆ ಅವಲೋಕಿಸಿ ಸುಮಾರು 3 ಲಕ್ಷ ರೂ. ಕೊರತೆ ಇರುವುದನ್ನು ಚರ್ಚಿಸಲಾಯಿತು. ಸಮ್ಮೇಳನಕ್ಕೆ ದಾಂಡೇಲಿಯ ಕಾಗದ ಕಾರ್ಖಾನೆ, ಕೈಗಾ ಮತ್ತು ಕದ್ರಾ ವಿದ್ಯುಸ್ಥಾವರ ಮತ್ತಿತರ ನಿರೀಕ್ಷತ ಮೂಲದಿಂದ ದೇಣ ಗೆ ಬಂದಿಲ್ಲವಾದ್ದರಿಂದ ಈ ಕೊರತೆ ಉಂಟಾಗಿದೆ. ಮತ್ತೊಮ್ಮೆ ಭರವಸೆ ನೀಡಿದ ದಾನಿಗಳನ್ನು ಸಂಪರ್ಕಿಸಿ ಕೊರತೆ ಬಜೆಟ್ ಸರಿಪಡಿಸಿಕೊಳ್ಳಲು ನಿರ್ಣಯಿಸಲಾಯಿತು.

RELATED ARTICLES  ದೇವಾಲಯಗಳಿಗೆ ಆಡಳಿತ ಸಮಿತಿ ರಚನೆ ಕೈ ಬಿಡಲು ಮನವಿ.

ನ.4 11 ರಂದು ಕ್ರಮವಾಗಿ ನಡೆಯಲಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸಮಾರಂಭ ಮತ್ತು ಸಾಹಿತ್ಯ ಸಾರಥ್ಯ ಪ್ರಶಸ್ತಿ ಪ್ರದಾನ ಸಮಾರಂಭ ಪರಿಣಾಮಕಾರಿಯಾಗಿ ನಡೆಸುವುದರೊಟ್ಟಿಗೆ ಕಾರವಾರದಲ್ಲಿ ಕನಕ ಅಧ್ಯಯನ ಪೀಠದ ಸಹಯೋಗದಲ್ಲಿ ಜಿಲ್ಲಾ ಕಸಾಪ ಕಾಲೇಜು ವಿದ್ಯಾರ್ಥಿಗಳಿಗೆ ಕನಕದಾಸರ ಸಾಹಿತ್ಯ ಕುರಿತಂತೆ ಶಿಬಿರ ನಡೆಸಲು ತೀರ್ಮಾನಿಸಲಾಯಿತು.

RELATED ARTICLES  ಅಕ್ರಮ ಜಾನುವಾರು ಸಾಗಾಟ : ಆರೋಪಿಗಳು ಅರೆಸ್ಟ್.

1 ಮತ್ತು 2 ರಂದು ಸಿದ್ದಾಪುರದಲ್ಲಿ ಹಿರಿಯ ಮಿಮರ್ಶಕ ಟಿ.ಪಿ.ಅಶೋಕ್ ಅವರ ಮಾರ್ಗದರ್ಶನದಲ್ಲಿ ನಡೆಯಲಿರುವ ನಡೆಯಲಿರುವ ಕಥಾ ಕಮ್ಮಟಕ್ಕೆ ಜಿಲ್ಲೆಯ ಎಲ್ಲ ಭಾಗದ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ ಕೊಡುವ ಉದ್ದೇಶದಿಂದ ಪ್ರತಿ ತಾಲೂಕಿನಿಂದ 2 ಆಸಕ್ತ ಉದಯೋನ್ಮುಖ ಕಥೆಗಾರರನ್ನು ಆಯ್ಕೆ ಮಾಡಿ ಕಮ್ಮಟಕ್ಕೆ ಕಳುಹಿಸಲು ಎಲ್ಲ ತಾಲೂಕು ಅಧ್ಯಕ್ಷರಿಗೆ ಸೂಚಿಸಲಾಯಿತು.

ಇತ್ತೀಚೆಗೆ ನಿಧನರಾದ ಸ್ವಾತಂತ್ರ್ಯ ಹೋರಾಟಗಾರ್ತಿ ಅಕ್ಕಮ್ಮ ಭಟ್ಟ ಅವರಿಗೆ ಸಭೆ ಶೃದ್ಧಾಂಜಲಿ ಸಲ್ಲಿಸಿ ಗೌರವ ಅರ್ಪಿಸಿತು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಗಂಗಾಧರ ಕೊಳಗಿ ಸ್ವಾಗತಿಸಿದರು. ಕೋಶಾಧ್ಯಕ್ಷ ಉಮೇಶ ಮುಂಡಳ್ಳಿ ವಂದಿಸಿದರು.

ಸಭೆಯಲ್ಲಿ ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಅಮೃತ್ ರಾಮರಥ, ತಾಲೂಕು ಅಧ್ಯಕ್ಷರಾದ ನಾಗೇಶ ಪಾಲನಕರ ಮುಂಡಗೋಡ, ಡಾ. ಪ್ರಕಾಶ ನಾಯಕ ಅಂಕೋಲಾ, ನಾಗರಾಜ ಹರಪನಹಳ್ಳಿ ಕಾರವಾರ, ಸುಭಾಸ ಗಾವಡಾ ಜೋಯಿಡಾ, ಗಂಗಾಧರ ನಾಯ್ಕ ಭಟ್ಕಳ, ಪ್ರಕಾಶ ಭಾಗವತ ಶಿರಸಿ, ಡಾ.ಶ್ರೀಧರ ಉಪ್ಪಿನಗಣಪತಿ ಕುಮಟಾ, ವೇಣುಗೋಪಾಲ ಮದ್ಗುಣ ಯಲ್ಲಾಪುರ ಮುಂತಾದವರು ಫಾಲ್ಗೊಂಡಿದ್ದರು.