ಕುಮಟಾ: ಕನ್ನಡ ಕಲಿಕಾ ಪ್ರಕ್ರಿಯೆಯಲ್ಲಿ ಗರಿಷ್ಠ ಶ್ರೇಯಾಂಕ, ಸ್ಪಷ್ಟ ಓದು, ಶುದ್ಧ ಸುಂದರ ಬರಹ ಹಾಗೂ ಸನ್ನಡತೆ-ಸಚ್ಚಾರಿತ್ಯದ ಆಧಾರದ ಮೇಲೆ ಕನ್ನಡ ಶಿಕ್ಷಕ ಸುರೇಶ ಪೈ ನೇತೃತ್ವದ ಆಯ್ಕೆ ಸಮಿತಿ ಹತ್ತನೆಯ ತರಗತಿ ಓದುತ್ತಿರುವ ಕುಮಾರ ಪ್ರಣ ೀತ್ ರವಿರಾಜ ಕಡ್ಲೆ ಮತ್ತು ಕುಮಾರ ವಿಶ್ವಾಸ್ ವೆಂಕಟೇಶ ಪೈ ಅವರನ್ನು ಕನ್ನಡ ಕುಸುಮ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಮಾಡಿತು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಇಲ್ಲಿಯ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಕೊಡಮಾಡುವ ಪ್ರಶಸ್ತಿ ಘೋಷಿಸಿ ಅವರಿಗೆ ಶಾಲು, ಕನ್ನಡ ಸಾಹಿತ್ಯ ಪುಸ್ತಕ, ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವಿಶ್ವಾಸ್ ಪೈ, ತನ್ನ ಮಾತೃಭಾಷೆ ಕೊಂಕಣ ಯಾದರೂ ತಾನು ಕನ್ನಡದಲ್ಲಿ ಗುರುತಿಸಬಲ್ಲ ಸಾಧನೆಗೈಯಲು ಇಲ್ಲಿನ ಕನ್ನಡ ವಾತಾವರಣ ಸಹಕಾರಿಯಾಗಿದೆ ಎಂದರು. ಪ್ರಣ ೀತ್ ಮಾತನಾಡಿ ಇಂದಿನ ಇಂಗ್ಲೀಷ್ ವ್ಯಾಮೋಹದ ದಿನಗಳಲ್ಲೂ ತನಗೆ ಕನ್ನಡ ಮಾಧ್ಯಮ ಶಾಲೆಗೆ ಸೇರುವಂತೆ ತಂದೆ-ತಾಯಿಯವರ ಒತ್ತಾಸೆ ಪ್ರೇರೇಪಿಸಿತು ಎಂದರು.
ಕನ್ನಡ ಮಾಧ್ಯಮ ಪ್ರೌಢಶಾಲೆಗಳಲ್ಲಿ ಜಿಲ್ಲೆಯಲ್ಲಿಯೇ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ವಿಶಿಷ್ಠ ಸಾಧನೆಗೈಯುತ್ತಿರುವ ಈ ಶಾಲೆ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಾವಿನ್ಯ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಕನ್ನಡ ನಾಡು ನುಡಿಯ ಬಗ್ಗೆ ಕುಮಾರಿ ಮುಕ್ತಾ ಭಟ್ಟ ಮತ್ತು ರಕ್ಷಿತಾ ಪಟಗಾರ ಮಾತನಾಡಿದರೆ, ನಿವೇದಿತಾ ಪಟಗಾರ, ಪ್ರಜ್ಞಾ ಆಚಾರಿ, ಹರ್ಷಿತಾ ನಾಯ್ಕ, ಸ್ನೇಹಾ ಪಟಗಾರ, ಸೌಂದರ್ಯಾ ನಾಯ್ಕ, ಅನುಷಾ ಪಟಗಾರ, ದರ್ಶನ ಪುರಾಣ ಕ ಹಾಗೂ ಪ್ರಶಾಂತ ಗಾವಡಿ ಹಾಡುಗಳಿಂದ ರಂಜಿಸಿದರು. ಕುಮಾರ ವಿಶ್ವಾಸ್ ಪೈ ಸ್ವಾಗತಿಸಿದರು. ಶಿಕ್ಷಕ ಸುರೇಶ ಪೈ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯಾಧ್ಯಾಪಕ ಎನ್.ಆರ್.ಗಜು ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕೀಳರಿಮೆ ಹೊಂದುವ ಅಗತ್ಯವಿಲ್ಲ. ದೊಡ್ಡ ದೊಡ್ಡ ಸಾಧಕರೆಲ್ಲಾ ಕನ್ನಡ ಮಾಧ್ಯಮದಲ್ಲಿ ಓದಿದವರೇ ಆಗಿದ್ದಾರೆ. ಅಲ್ಲದೇ ಮುಂದೆ ಸರಕಾರಿ ಮತ್ತು ಖಾಸಗೀ ಸಂಸ್ಥೆಗಳಲ್ಲಿ ಉದ್ಯೋಗಕ್ಕೂ ಕೂಡ ಕನ್ನಡ ಮಾಧ್ಯಮ ಓದಿದವರಿಗೆ ಮೀಸಲು ಇರುವುದರಿಂದ ಖುಷಿ ಪಡಬಹುದಾಗಿದೆ ಎಂದು ಅಭಿಪ್ರಾಯಪಟ್ಟರು. ಶಾಲಾ ಮುಖ್ಯ ಮಂತ್ರಿ ಪ್ರಣೀತ ಕಡ್ಲೆ ನಿರೂಪಿಸಿದರೆ ತನುಜಾ ಗೌಡ ವಂದಿಸಿದರು.