ಭಟ್ಕಳ: ಪ್ರತಿ ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಕೇಂದ್ರವಾಗಿಟ್ಟುಕೊಂಡು, ಜಿಲ್ಲೆಯ ಸುಗಮ ಸಂಗೀತ ಪರಿಚಾರಕ ರಾಜ್ಯ ಪ್ರಶಸ್ತಿ ಪುರಸ್ಕøತ ಗಾಯಕ ಉಮೇಶ ಮುಂಡಳ್ಳಿಯವರು ತಮ್ಮ ನಿನಾದ ಸಾಹಿತ್ಯ ಸಂಗೀತ ಸಂಚಯದ ಮೂಲಕ ‘ಭಾವ ಗಾನ ಯಾನ’ ಎನ್ನುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ನಿಜಕ್ಕೂ ಅಭಿನಂದನಿಯ. ಮತ್ತು ಕನ್ನಡ ಕಾವ್ಯದ ಉಳಿವು ಮತ್ತು ಮಹತ್ವ ಸಾರುವ ಅಭಿಮಾನದ ಕಲ್ಪನೆ ‘ಭಾವ ಗಾನ ಯಾನ ‘ ಎಂಬುದಾಗಿ ಶಿರಾಲಿ ಜನತಾ ವಿದ್ಯಾಲಯ ಜ್ಯೂನಿಯರ್ ಕಾಲೇಜು ಪ್ರಾಚಾರ್ಯ, ಜಿಲ್ಲಾ ಕಸಾಪ ಕಾರ್ಯಕಾರಿಣಿ ಮಂಡಳಿ ಸದಸ್ಯ ಅಮೃತ ರಾಮರಥ ನುಡಿದರು.
ಅವರು ಇಂದು ಬೆಳಿಗ್ಗೆ ಶಿರಾಲಿ ಜನತಾ ವಿದ್ಯಾಲಯ ಜ್ಯೂನಿಯರ್ ಕಾಲೇಜಿನ ಆಯೋಜಿಸಲಾದ ಅರವತ್ಮೂರನೆ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರದಲ್ಲಿ ಮುಂಡಳ್ಳಿಯವರ ಭಾವ ಗಾನ ಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಉಮೇಶ ಮುಂಡಳ್ಳಿಯವರು ನಮ್ಮ ಕಾಲೇಜಿನ ಹಳೆಯ ವಿದ್ಯಾರ್ಥಿ ಎನ್ನುವುದು ನಮಗೆ ಅಭಿಮಾನ ತರುವಂತದ್ದು, ಮುಂಡಳ್ಳಿವರು ನಮ್ಮ ಎಲ್ಲ ವಿದ್ಯಾರ್ಥಿಗಳಿಗೆ ಒಂದು ಮಾದರಿ ಎಂಬುದಾಗಿ ತಿಳಿಸಿದರು.
ಪ್ರಾಶ್ಚಾತೀಕರಣ ಪ್ರಭಾವ, ಸಿನೇಮಾ ಹಾಡುಗಳ ಅಬ್ಬರದ ನಡುವೆ ಸುಗಮ ಸಂಗೀತ ಜನಪದ ಸಂಗೀತ ರಂಗಗೀತೆ ದೇಶಭಕ್ತಿ ಗೀತೆಗಳು ಎಲ್ಲಿ ತಮ್ಮ ಛಾಪನ್ನು ಕಳೆದುಕೊಳ್ಳುವುದೋ, ವಿದ್ಯಾರ್ಥಿಗಳು ಇದರಿಂದ ವಿಮುಕ್ತರಾಗಬಲ್ಲರೋ ಎಂಬ ಆತಂಕ ತೋರುತಿದ್ದು, ಅವುಗಳನ್ನು ನಮ್ಮ ಸಂಗೀತದ ಭಾಗವಾಗಿ ಉಳಿಸಿಕೊಳ್ಳುವ ತನ್ಮೂಲಕ ಅವುಗಳನ್ನು ವಿದ್ಯಾರ್ಥಿಗಳು ಮತ್ತು ಪಾಲಕರ ಮನದಲ್ಲಿ ಸದಾ ಹಸಿರಾಗಿರುವಂತೆ ಕಾಯ್ದುಕೊಳ್ಳುವ ಪುಟ್ಟ ಪ್ರಯತ್ನ ನಮ್ಮ ಭಾವ ಗಾನ ಯಾನ ಎಂಬುದಾಗಿ ಜಿಲ್ಲೆಯ ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿ ತಮ್ಮ ಪ್ರಾಸ್ಥಾವಿಕ ನುಡಿಗಳಲ್ಲಿ ತಿಳಿಸಿದರು. ಜೊತೆಗೆ ಜಿಲ್ಲೆಯ ಪ್ರತಿಭಾನ್ವಿತ ಆಸಕ್ತ ಗಾಯಕರು ಈ ಭಾವ ಗಾನ ಯಾನದಲ್ಲಿ ಪಾಲ್ಗೊಳ್ಳಬಹುದು ಎನ್ನುವ ಮಾತನ್ನು ಈ ಸಂದರ್ಭದಲ್ಲಿ ತಿಳಿಸಿದರು.
ಜನತಾ ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಡಿ.ಜೆ.ಕಾಮತ್ ಈ ಸಂದರ್ಭದಲ್ಲಿ ಭಾವ ಗಾನ ಯಾನ ದಲ್ಲಿ ಉಪಸ್ಥಿತರಿದ್ದು ಭಾವ ಗಾನ ಯಾನಕ್ಕೆ ಶುಭ ಹಾರೈಸಿದರು.
ಸುಮಾರು ಒಂದುವರೆ ಗಂಟೆಗಳ ಕಾಲ ಉಮೇಶ ಮುಂಡಳ್ಳಿಯವರ ಸಾರಥ್ಯದಲ್ಲಿ ಭಾವ ಗಾನ ಯಾನ ಕಾರ್ಯಕ್ರಮ ನಡೆದು ವಿದ್ಯಾರ್ಥಿ ಮತ್ತು ಶಿಕ್ಷಕ ವೃಂಧವನ್ನು ಗಾನಲೋಕದಲ್ಲಿ ವಿಹರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮುಂಡಳ್ಳಿಯವರು ತಮ್ಮ ಅಮೋಘ ಕಂಠಸಿರಿಯಲ್ಲಿ ನಿಸಾರ್ ಅಹಮ್ಮದರ ‘ನಿತ್ಯೋತ್ಸವ’, ಬಿ.ಆರ್. ಲಕ್ಷ್ಮಣರಾವ್ ಅವರ ‘ಕರ್ನಾಟಕ ಬರಿ ನಾಡಲ್ಲ’ ಧರೆಗವತರಿಸಿದೆ ಸ್ವರ್ಗದ ಸ್ವರ್ಧಿಯು ಎನ್ನುವ ಕನ್ನಡದ ಅಭಿಮಾನ ಗೀತೆಗಳ ಜೊತೆಗೆ ಎಲ್ಲರ ಮನೆ ಮಾತಾದ ತಮ್ಮ ಸ್ವರಚಿತ ಗೀತೆ ‘ನಾವು ಕನ್ನಡಿಗರು ಕರುನಾಡ ಕುಡಿಗಳು’ ಎನ್ನುವ ಗೀತೆಗನ್ನ ಹಾಡಿದರು. ನಂತರ ನಾಡಿನ ಹೆಸರಾಂತ ಕವಿಗಳ ಭಾವಗೀತೆಗಳನ್ನು ಮತ್ತು ಜಿಲ್ಲೆಯ ಕವಿಗಳ ಗೀತೆಗಳನ್ನು ಹಾಡಿದರು.
ಈ ಸಂದರ್ಭದಲ್ಲಿ ಗಾನ ಯಾನದಲ್ಲಿ ವಿನಾಯಕ ಭಂಡಾರಿ ಕೊಳಲು, ಹರೀಶ್ ಧಾರೆಶ್ವರ ತಬಲ ಮತ್ತು ವಿನೋದ ಗೌಡ ಹಾರ್ಮೋನಿಯಂ ನಲ್ಲಿ ಮುಂಡಳ್ಳಿಯವರಿಗೆ ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ಸುಮಾರು ಮುನ್ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.