ಹೊನ್ನಾವರ : ಪ್ರಾಶ್ಚಾತೀಕರಣ ಪ್ರಭಾವ, ಸಿನೇಮಾ ಹಾಡುಗಳ ಅಬ್ಬರದ ನಡುವೆ ಸುಗಮ ಸಂಗೀತ ಜನಪದ ಸಂಗೀತ ರಂಗಗೀತೆ ದೇಶಭಕ್ತಿ ಗೀತೆಗಳು ಎಲ್ಲಿ ತಮ್ಮ ಛಾಪನ್ನು ಕಳೆದುಕೊಳ್ಳುವುದೋ, ವಿದ್ಯಾರ್ಥಿಗಳು ಇದರಿಂದ ವಿಮುಕ್ತರಾಗಬಲ್ಲರೋ ಎಂಬ ಆತಂಕ ತೋರುತಿದ್ದು, ಅವುಗಳನ್ನು ನಮ್ಮ ಸಂಗೀತದ ಭಾಗವಾಗಿ ಉಳಿಸಿಕೊಳ್ಳುವ ತನ್ಮೂಲಕ ಅವುಗಳನ್ನು ವಿದ್ಯಾರ್ಥಿಗಳು ಮತ್ತು ಪಾಲಕರ ಮನದಲ್ಲಿ ಸದಾ ಹಸಿರಾಗಿರುವಂತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿ ಅವರು ತಮ್ಮ ನಿನಾದ ಸಾಹಿತ್ಯ ಸಂಗೀತ ಸಂಚಯದ ಮುಖೇನ ಜಿಲ್ಲೆ ಮತ್ತು ರಾಜ್ಯಾಧ್ಯಂತ ಸಮಚರಿಸಿ ಅರಿವು ಮೂಡಿಸುವ ಪ್ರಯತ್ನಕ್ಕೆ ಕಯ ಹಾಕಿದ್ದು, ನಿನಾದದ ಈ ಭಾವ ಗಾನ ಯಾನ ಮೂರನೇ ಕಾರ್ಯಕ್ರಮ ನಿನ್ನೆ ಶುಕ್ರವಾರ ಹೊನ್ನಾವರದಲ್ಲಿ ನಡೆಯಿತು.
ಹೊನ್ನಾವರದ ಕನ್ನಡ ಅಭಿಮಾನಿ ಸಂಘದ ಅದ್ದೂರಿ ರಾಜ್ಯೋತ್ಸವ ಕಾರ್ಯಕ್ರಮದ ಎರಡನೆ ದಿನ ರಾತ್ರಿ ಉಮೇಶ ಮುಂಡಳ್ಳಿಯವರ ಸಾರಥ್ಯದಲ್ಲಿ “ಭಾವ ಗಾನ ಯಾನ’ ವಿನೂತನ ಸಂಗೀತ ಕಾರ್ಯಕ್ರಮ ನಡೆಯಿತು. ಮುಂಡಳ್ಳಿಯವರು ತಮ್ಮ ಅಮೋಘ ಕಂಠಸಿರಿಯಲ್ಲಿ ನಿಸಾರ್ ಅಹಮ್ಮದರ ‘ನಿತ್ಯೋತ್ಸವ’, ಬಿ.ಆರ್. ಲಕ್ಷ್ಮಣರಾವ್ ಅವರ ‘ಕರ್ನಾಟಕ ಬರಿ ನಾಡಲ್ಲ’ ಧರೆಗವತರಿಸಿದೆ ಸ್ವರ್ಗದ ಸ್ವರ್ಧಿಯು ಎನ್ನುವ ಕನ್ನಡದ ಅಭಿಮಾನ ಗೀತೆಗಳ ಜೊತೆಗೆ ಎಲ್ಲರ ಮನೆ ಮಾತಾದ ತಮ್ಮ ಸ್ವರಚಿತ ಗೀತೆ ‘ನಾವು ಕನ್ನಡಿಗರು ಕರುನಾಡ ಕುಡಿಗಳು’ ಎನ್ನುವ ಗೀತೆಗನ್ನ ಹಾಡಿದರು. ನಂತರ ನಾಡಿನ ಹೆಸರಾಂತ ಕವಿಗಳ ಭಾವಗೀತೆಗಳನ್ನು ಮತ್ತು ಜಿಲ್ಲೆಯ ಕವಿಗಳ ಗೀತೆಗಳನ್ನು ಜಾನಪದ ಗೀತೆಗಳನ್ನು ಹಾಡಿ ಎಲ್ಲರನ್ನು ಭಾವಲೊಕದಲ್ಲಿ ರಂಜಿಸಿದರು.
ಈ ಸಂದರ್ಭದಲ್ಲಿ ಗಾನ ಯಾನದಲ್ಲಿ ವಿನಾಯಕ ಭಂಡಾರಿ ಕೊಳಲು, ಕೀಬೊರ್ಡನಲ್ಲಿ ನವೀನ್ ಶೇಟ್ ಮತ್ತು ತಬಲಾದಲ್ಲಿ ಗುರುರಾಜ ಹೆಗಡೆ ಸಹಕರಿಸಿದರು.