ಸಿದ್ದಾಪುರ:ಮೊನ್ನೆ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಶಿರಸಿಯ ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆಯ ಕುರಿತು ಉಲ್ಲೇಖಿಸಿದ್ದಾರೆ. ಇದು ನಮ್ಮ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಇದಕ್ಕೋಸ್ಕರ ಮುಖ್ಯಮಂತ್ರಿಗಳನ್ನ ಅಭಿನಂದಿಸುತ್ತೇನೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಅಟಲ್ ಥಿಂಕರಿಂಗ್ ಲ್ಯಾಬ್ ಹಾಗೂ ಆಂಗ್ಲ ಮಾಧ್ಯಮ ವಿಭಾಗವನ್ನು ಸಿದ್ದಾಪುರದ ಹಾಳದಕಟ್ಟ ಸರ್ಕಾರಿ ಪ್ರೌಢಶಾಲೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಅಟಲ್ ಥಿಂಕರಿಂಗ್ ಲ್ಯಾಬ್ ಗೋಸ್ಕರ ಕೇಂದ್ರ ಸರ್ಕಾರದಿಂದ 12 ಲಕ್ಷ ಮಂಜೂರಾಗಿದೆ. ಇದರಲ್ಲಿ ಸಾಮಗ್ರಿಗಳಿಗೋಸ್ಕರವೇ 8 ಲಕ್ಷ ವೆಚ್ಚವಾಗುತ್ತಿದೆ. ಇವೊಬಿ ಆಟೊಮೇಷನ್ ಎನ್ನುವ ಸಂಸ್ಥೆ ಇದನ್ನ ಜಾರಿಗೊಳಿಸಿದೆ. ಅವರ ಪ್ರತಿನಿಧಿಯಿಂದ ಶಿಕ್ಷಕರಿಗೂ ತರಬೇತಿ ನೀಡಲಾಗುತ್ತಿದೆ. ವಿಶೇಷವಾಗಿ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಮನೋಭಾವನೆಯಲ್ಲಿ ಇನ್ನಷ್ಟು ಆಸಕ್ತಿ ಮೂಡಿಸಲು ಈ ಕಾರ್ಯಕ್ರಮ ಜಾರಿಗೆ ತರಲಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾಗೇರಿ, ಇದೊಂದು ಮಹತ್ವದ ದಿನ. ನಮ್ಮ ಶಾಲೆಗಳ ಬೆಳವಣಿಗೆಗೆ ಇದೊಂದು ದೊಡ್ಡ ಕೊಡುಗೆಯಾಗಿದೆ. ಈಗಾಗಲೇ ಶೈಕ್ಷಣಿಕ ವರ್ಷದ ಫಲಿತಾಂಶದಲ್ಲಿ 202 ಬ್ಲಾಕ್ಗಳಲ್ಲಿ ತಾಲೂಕು ರಾಜ್ಯದಲ್ಲೇ 4ನೇ ಸ್ಥಾನದಲ್ಲಿದೆ. ಇದೊಂದು ಹೆಮ್ಮೆಯ ವಿಷಯವಾಗಿದೆ. ಈ ರೀತಿಯ ಲ್ಯಾಬ್ ಗಳಿಂದ ವಿದ್ಯಾರ್ಥಿಗಳ ಚಿಂತನಾ ಶಕ್ತಿ ಹೆಚ್ಚುತ್ತದೆ. ಇದು ಶೈಕ್ಷಣಿಕ ಗುಣಮಟ್ಟವನ್ನು ಇನ್ನೂ ಉತ್ತಮಗೊಳಿಸಲು ಸಹಕಾರಿಯಾಗುತ್ತದೆ. ಈ ಲ್ಯಾಬ್ಗಳನ್ನು ವರ್ಷಕ್ಕೆ 1500 ಲ್ಯಾಬ್ ಗಳಂತೆ ಇಡೀ ದೇಶಕ್ಕೆ ನೀಡಲಾಗುತ್ತಿದೆ. ತಾಲೂಕಿಗೆ ಇದು ಪ್ರಥಮ ಲ್ಯಾಬ್ ಆಗಿದ್ದು ಮಕ್ಕಳು ಇದರ ಸದುಪಯೋಗ ಪಡೆಯಬೇಕು.