ಆಯಾ ಭಾಷೆಗನುಗುಣವಾಗಿ ಇದರ ಹೆಸರೂ ಹಲವಾರು. ಕನ್ನಡದಲ್ಲಿ “ಒಂದೆಲಗ”, ಬ್ರಾಹ್ಮಿ, ಉರಗ, ಇಂಗ್ಲಿಷಿನಲ್ಲಿ Centella asiatica, ಇತ್ಯಾದಿ.ತೋಟ, ಗದ್ದೆ, ತಂಪಾದ ಗುಡ್ಡಗಳಲ್ಲಿ ಕಾಣಸಿಗುವ ಈ ಬಳ್ಳಿಗಳು ಆಹಾರ, ಔಷಧಿ ಹೀಗೆ ಬಹುಪಯೋಗಿ. ಅಲ್ಲದೆ ನೋಡಲೂ ಹಸಿಹಸಿರಾಗಿ ಸುಂದರವಾಗಿರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಮನೆಯ ಹಿತ್ತಲಲ್ಲಿ, ತೋಟದಲ್ಲಿ ಈ ಬಳ್ಳಿಗಳನ್ನು ನಾವು ಹೆಚ್ಚಾಗಿ ಕಾಣಬಹುದು.

ಹೆಚ್ಚಾಗಿ ನೀರಿನ ಅಂಶವಿರುವ ಪ್ರದೇಶದಲ್ಲಿ ನೆಲದ ಮೇಲೆ ಶೀಘ್ರ ಹಬ್ಬಿ ಬೆಳೆಯುವ ಒಂದೆಲಗದ ಬಳ್ಳಿ, ಎಲೆ, ಕಾಂಡ ಇವುಗಳನ್ನು ಚಟ್ನಿ, ತಂಬುಳಿ, ಹಾಗೂ ತಲೆಗೆ ಹಚ್ಚುವ ಎಣ್ಣೆಯ ತಯಾರಿಕೆಗಾಗಿ ಉಪಯೋಗವಾಗುವ ಗಿಡಮೂಲಿಕೆಯಾಗಿದೆ. ಇದೊಂದು ಉತ್ತಮ ಸ್ಮರಣಶಕ್ತಿ ವರ್ಧಕ ಔಷದೀಯ ಗುಣಗಳುಳ್ಳ ಬಳ್ಳಿ. ಒಂದೆಲಗ ಅಥವಾ ಉರಗದ ಸೊಪ್ಪಿನ ರಸವನ್ನು ಒಂದು ಚಮಚ ಶುದ್ಧ ಜೇನು ತುಪ್ಪ ಬೆರೆಸಿ ನಿತ್ಯವೂ ಮಕ್ಕಳಿಗೆ ನೀಡಿದರೆ ಮಕ್ಕಳ ಸ್ಮರಣಶಕ್ತಿ ಹೆಚ್ಚುತ್ತದೆ. ಜೀರ್ಣಕ್ರಿಯೆಯನ್ನೂ ಉತ್ತಮಗೊಳಿಸುತ್ತದೆ. ಅಲ್ಲದೆ ರಕ್ತಹೀನತೆಯನ್ನೂ ನಿವಾರಿಸುತ್ತದೆ.

ಮಕ್ಕಳಿಗೆ ವಯಸ್ಸಿಗೆ ತಕ್ಕಂತೆ ಅರ್ಧ ಚಮಚದಿಂದ ನಾಲ್ಕು ಚಮಚದವರೆಗೆ ಜೇನು ತುಪ್ಪ ಬೆರೆಸಿ ನೀಡುವುದರಿಂದ ದೇಹ ಮನಸ್ಸು ಎರಡರ ಆರೋಗ್ಯವೂ ವೃದ್ಧಿಸುತ್ತದೆ. ಅಲ್ಲದೆ ಮನಸ್ಸನ್ನು ಶಾಂತಗೊಳಿಸಲು, ಸ್ಥಿರಗೊಳಿಸಲು, ಏಕಾಗ್ರತೆ, ಹೆಚ್ಚಿಸಲು ಹಾಗೂ ಸಾತ್ವಿಕತೆ ವರ್ಧಿಸಲು ಒಂದೆಲಗ ಸಹಕಾರಿ ಹಾಗಾಗಿ ಆಧ್ಯಾತ್ಮ ಸಾಧಕರು ಪ್ರಾಚೀನದಿಂದಲೂ ಬಳಸುತ್ತಿರುವ ಈ ಗಿಡಮೂಲಿಕೆಗೆ ದಿವ್ಯಾ, ಸರಸ್ವತೀ ಎಂಬ ಹೆಸರುಗಳೂ ಇವೆಯಂತೆ.

ಉಪಯೋಗಗಳು:

1. ಬೇಸಿಗೆಯಲ್ಲಿ ದೇಹ ತಂಪಾಗಿಸಲು ಊಟದೊಂದಿಗೆ ಒಂದೆಲಗದ ಚಟ್ನಿ ಸೇವಿಸುವುದು ಆರೋಗ್ಯಕ್ಕೆ ಹಿತಕರ.

2. ನಿದ್ರಾಹೀನತೆಯಿಂದ ಬಳಲುತ್ತಿರುವವರು ಒಂದೆಲಗದಿಂದ ತಯಾರಿಸಿದ ಗುಳಿಗೆಗಳನ್ನು ಸೇವಿಸಿದರೆ ಸುಖ ನಿದ್ದೆಯನ್ನು ನಮ್ಮದಾಗಿಸಿಕೊಳ್ಳಬಹದು. (ಒಂದೆಲಗದ ಎಲೆಗಳನ್ನು ಒಣಗಿಸಿ ಪುಡಿಮಾಡಿ ಅದರೊಂದಿಗೆ ಹುರಿದ ಗಸೆಗಸೆಯನ್ನು ಬೆರೆಸಬೇಕು, ಬಳಿಕ ಕಲ್ಲುಸಕ್ಕರೆಯ ಎಳೆಪಾಕ ಮಾಡಿ ಅದರಲ್ಲಿ ಈ ಮಿಶ್ರಣವನ್ನು ಬೆರೆಸಿ ಚೆನ್ನಾಗಿ ಕಲಕಬೇಕು ನಂತರ ತುಪ್ಪವನ್ನು ಸೇರಿಸಿ ಗಟ್ಟಿಯಾಗುತ್ತಲೇ ಒಲೆಯಿಂದ ಕೆಳಗಿಳಿಸಬೇಕು. ಮಿಶ್ರಣವು ಆರಿದ ಬಳಿಕ ಅಂದಾಜು ಗಾತ್ರದ ಗುಳಿಗೆಯನ್ನು ತಯಾರಿಸಬೇಕು. ನಿತ್ಯವೂ ಮಲಗುವ ಮುನ್ನ ಇದನ್ನು ಸೇವಿಸಿ ಹಾಲು ಕುಡಿದು ಮಲಗಿದರೆ ನಿದ್ರಾಹೀನತೆ ನಿವಾರಣೆಯಾಗುತ್ತದೆ.)

RELATED ARTICLES  ಬೆಳ್ಳುಳ್ಳಿ ಮತ್ತು ಹಾಲು! ಏನು ಇವುಗಳ ವಿಶೇಷತೆ?

3. ಒಂದೆಲಗದ ತೈಲವೂ ನಿದ್ರಾಹೀನತೆಗೆ ಪರಿಣಾಮಕಾರಿ. ಒಂದೆಲಗದ ತೈಲದಿಂದ ನಿತ್ಯವೂ ಶಿರೋಭಾಗವನ್ನು ಮಾಲೀಶು ಮಾಡಿ ಮಲಗಿದರೆ ಹಿತಕರ.(ಒಂದೆಲಗದ ರಸ ಒಂದು ಕಪ್, ಅಷ್ಟೇ ಪ್ರಮಾಣದಲ್ಲಿ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆ ತೆಗೆದುಕೊಳ್ಳಬೇಕು. ಎರಡನ್ನೂ ಬೆರೆಸಿ ಸಣ್ಣ ಉರಿಯಲ್ಲಿ ಕುದಿಸಿ ನೀರಿನ ಅಂಶ ಇಂಗುವವರೆಗೆ ಕಾಯಿಸಬೇಕು. ಈ ತೈಲ ನಿತ್ಯ ಹಚ್ಚಿದರೆ “ಕೇಶ್ಯ’ವೂ ಹೌದು-ಅಂದರೆ ಕೂದಲು ಸೊಂಪಾಗಿ ಬೆಳೆಯುತ್ತದೆ, ಹೊಟ್ಟು ನಿವಾರಣೆಯಾಗುತ್ತದೆ.)

4. ನರದೌರ್ಬಲ್ಯ, ಆತಂಕ, ಒತ್ತಡ ನಿವಾರಣೆಗೆ ಹಾಗೂ ತಲೆನೋವು ನಿವಾರಣೆಯಾಗಲು ಒಂದೆಲಗದ ಕಷಾಯ ಹಿತಕರ. ಒಂದೆಲಗದ ಎಲೆಗಳನ್ನು ಒಂದು ಮುಷ್ಟಿಯಷ್ಟು ತೆಗೆದುಕೊಂಡು ಚೆನ್ನಾಗಿ ಅರೆದು ನೀರು ಸೇರಿಸಿ ಕುದಿಸಬೇಕು. ಆರಿದ ಬಳಿಕ ಜೇನು ಹಾಗೂ ಮೆಣಸಿನಕಾಳಿನ ಹುಡಿ ಬೆರೆಸಿ ದಿನಕ್ಕೆ 2-3 ಬಾರಿ ಸೇವಿಸಿದರೆ ಹಿತಕರ.

5. ಅಪೌಷ್ಟಿಕತೆ ಹಾಗೂ ಪಿತ್ತದೋಷದ ದೃಷ್ಟಿಯಿಂದ ಅಧಿಕ ಕೂದಲು ಉದುರುವವರು ಒಂದೆಲಗದ ಕಾಂಡ ಸಹಿತ ಇಡೀ ಬಳ್ಳಿಯನ್ನು ತೊಳೆದು ಅರೆದು ಅದರ ರಸವನ್ನು ಸ್ವಲ್ಪ ಜೇನು ಮತ್ತು ಹಸುವಿನ ತುಪ್ಪ ಬೆರೆಸಿ ನಿತ್ಯ ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಕೂದಲು ಉದುರುವುದು, ಕೂದಲು ಬೆಳ್ಳಗಾಗುವುದು ಕಡಿಮೆಯಾಗುತ್ತದೆ. ಇದೇ ಸಮಯದಲ್ಲಿ ಒಂದೆಲಗದ ತೈಲವನ್ನು ಕೂದಲಿಗೆ ಲೇಪಿಸುವುದೂ ಹಿತಕರ.

6.ಮಕ್ಕಳಿಗೆ ಉಪಯುಕ್ತ ಆರೋಗ್ಯವರ್ಧಕ ಪೇಯಗಳು. ಚಹಾ ಕಾಫಿಯ ಬದಲಾಗಿ, ಈ ರುಚಿಕರ ಪೇಯವನ್ನು ನೀಡಿದರೆ ಮಕ್ಕಳ ದೈಹಿಕ ಮಾನಸಿಕ ಬೆಳವಣಿಗೆಗೆ ಹಿತಕರ.
(ಒಂದು ಕಪ್ ಹಸುವಿನ ತುಪ್ಪಕ್ಕೆ ಅಷ್ಟೇ ಪ್ರಮಾಣದಲ್ಲಿ ಒಂದೆಲಗದ ಎಲೆಯ ರಸವನ್ನು ಬೆರೆಸಿ ಸಣ್ಣ ಉರಿಯಲ್ಲಿ ಕುದಿಸಬೇಕು. ನೀರಿನ ಅಂಶ ಆರಿಬರುತ್ತಲೇ “ಪಟಪಟ’ ಸದ್ದು ನಿಂತು, ತುಪ್ಪ ಮತ್ತು ಒಂದೆಲಗದ ರಸದ ಘೃತಪಾಕವು ಉಂಟಾಗುತ್ತದೆ. ಈ ತುಪ್ಪದ ನಿತ್ಯಸೇವನೆ ಮನಸ್ಸಿನ ದುಗುಡ, ಆತಂಕ, ಖನ್ನತೆಗಳನ್ನು ನಿವಾರಿಸಿ ಮನಸ್ಸನ್ನು ಶಾಂತಗೊಳಿಸುವುದು. ಸ್ಮರಣಶಕ್ತಿ, ಬುದ್ಧಿಶಕ್ತಿ ಪ್ರಚೋದಕ. 1-2 ಚಮಚದಷ್ಟು ಈ ತುಪ್ಪವನ್ನು (ಮಕ್ಕಳ ಅಥವಾ ವಯಸ್ಕರ ವಯಸ್ಸಿಗೆ ತಕ್ಕಂತೆ) ಬಿಸಿ ಹಾಲಲ್ಲಿ ಬೆರೆಸಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ಪರಿಣಾಮಕಾರಿ.)

RELATED ARTICLES  ಎಲ್ಲ ಋತುವಿಗೂ ಬೆಸ್ಟ್ ಎಳನೀರು!

7. ಒಂದೆಲಗದ ಎಲೆಗಳನ್ನು ತೊಳೆದು, ನೆರಳಲ್ಲಿ ಒಣಗಿಸ ಬೇಕು. ಅಷ್ಟೇ ಪ್ರಮಾಣದ ಬಾದಾಮಿಯನ್ನು ಹುರಿದು ಇಡಬೇಕು. ಬಳಿಕ ಎರಡನ್ನೂ ಮಿಕ್ಸರ್ನಲ್ಲಿ ಪುಡಿಮಾಡಿ, ಸ್ವಲ್ಪ ಯಾಲಕ್ಕಿ ಹುಡಿ, ಶುದ್ಧ ಕೇಸರಿ ದಳಗಳನ್ನು ಬೆರೆಸಬೇಕು. ಈ ಪುಡಿಯನ್ನು 2 ಚಮಚದಷ್ಟು 1 ಕಪ್ ಹಾಲಿಗೆ ಬೆರೆಸಿ ಸ್ವಲ್ಪ ಕಲ್ಲುಸಕ್ಕರೆ ಅಥವಾ ಬೆಲ್ಲ ಬೆರೆಸಿ ನೀಡಬೇಕು. ಕಾದಾರಿದ ಹಾಲು ಅಥವಾ ತಂಪಾದ ಹಾಲಿಗೆ ಈ ಪುಡಿಯನ್ನು ಬೆರೆಸುವುದಾದರೆ ಕಲ್ಲುಸಕ್ಕರೆ ಅಥವಾ ಬೆಲ್ಲದ ಬದಲು ತಾಜಾ ಜೇನುತುಪ್ಪ ಬೆರೆಸಬಹುದು. ನಿತ್ಯ ಬೆಳಿಗ್ಗೆ ಈ ಪೇಯ ಬೆಳೆಯುವ ಮಕ್ಕಳಿಗೆ ನೀಡಿದರೆ ಉತ್ತಮ ಆರೋಗ್ಯವರ್ಧಕ ಪೇಯ.

ಹೀಗೆ ಹಿತ್ತಲ ಬಳ್ಳಿಯ ಔಷಧೀಯ ಗುಣಗಳು ವೈದ್ಯಕೀಯ ಲೋಕದಲ್ಲೂ ಪ್ರಸಿದ್ಧಿಯನ್ನು ಪಡೆದಿವೆ. ನಮ್ಮಲ್ಲಿ ಇಂದಿಗೂ ಸಣ್ಣ ಮಕ್ಕಳಿಗೆ ಮುಂಜಾನೆ ಖಾಲಿ ಹೊಟ್ಟೆಗೆ ಒಂದು ಚಮಚ ಒಂದೆಲಗ ರಸ ಹಾಗೂ ಆಗಾಗ ತುಳಸಿ ರಸವನ್ನು ನೀಡುವ ಪದ್ದತಿ ಇದೆ. ಹಿಂದೆ ಎಲ್ಲಡೆ ಕಾಣ ಸಿಗುತ್ತಿದ್ದ ಈ ಬಳ್ಳಿಗಳು ಇಂದು ಅಲ್ಲಲ್ಲಿ ಮಾತ್ರ ಕಾಣ ಸಿಗುತ್ತವೆ.