ಕುಮಟಾ: ಅಂಬಿಗ ಸಮಾಜ ಶಿಕ್ಷಣ ಅಭ್ಯಾಸದಲ್ಲಿ ಹಿಂದುಳಿದಿರುವುದರಿಂದಲೇ ಸಮಾಜ ಅಭಿವೃದ್ಧಿಯಲ್ಲಿ ಹಿನ್ನಡೆಯನ್ನು ಕಂಡಿದೆ. ಹಾಗಾಗಿ ಶಿಕ್ಷಣಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು ಅಂದಾಗ ಮಾತ್ರ ಸಮಾಜ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ ಎಂದು ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಸಲಹೆ ನೀಡಿದರು. ಅವರು ಗೋಕರ್ಣ ಬೇಲೆಹಿತ್ತಲಿನ ಗಂಗಾಮಾತಾ ಅಂಬಿಗ ಸಮಾಜ ಅಭಿವೃದ್ಧಿ ಸಂಘದ ಆಶ್ರಯದಲ್ಲಿ ನಡೆದ ಕೃಷ್ಣಮೂರ್ತಿ ಉತ್ಸವದ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋಕರ್ಣ ಅಂಬಿಗ ಸಮಾಜದ ಯಜಮಾನ ಮಂಕಾಳಿ ಓಮು ಅಂಬಿಗ ವಹಿಸಿದ್ದರು. ದೀವಗಿಯ ಚೇತನ ಸೇವಾ ಸಂಸ್ಥೆಯ ಎ ಆರ್ ಭಾರತಿ ಶ್ರೀಕೃಷ್ಣ ಸಂದೇಶವನ್ನು ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿಜೆಪಿ ಕುಮಟಾ ತಾಲೂಕಾಧ್ಯಕ್ಷ ಕುಮಾರ ಮಾರ್ಕಾಂಡೇಯ, ತಾ ಪಂ ಸದಸ್ಯ ಮಹೇಶ ಶೆಟ್ಟಿ, ಗೋಕರ್ಣ ಪ್ರಾ ಆ ಕೇಂದ್ರದ ಡಾ.ಜಗದೀಶ ಮಾತನಾಡಿದರು. ಗೋಕರ್ಣ ಗ್ರಾ ಪಂ ಸದಸ್ಯೆ ಸುವರ್ಣಾ ಅಡಪೇಕರ್, ಗೋಕರ್ಣ ಅರ್ಬನ್ ಬ್ಯಾಂಕ್ ನಿರ್ದೇಶಕ ಶ್ರೀನಿವಾಸ ನಾಯಕ, ಗೋಕರ್ಣ ಗ್ರಾ ಪಂ ಸದಸ್ಯ ಗಣಪತಿ ಗೌಡ, ಬೇಲೇಹಿತ್ತಲ ಸ ಕಿ ಪ್ರಾ ಶಾಲಾ ಶಿಕ್ಷಕ ಜಿ ಆರ್ ನಾಯ್ಕ, ಮೀನುಗಾರ ಮುಖಂಡ ಶ್ರೀನಿವಾಸ ಖುರ್ಲೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿ ಶಿವರಾಜ ಅಂಬಿಗರನ್ನು ಶಾಲು ಹೊದಿಸಿ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿದರು. ಸಂಘದ ವತಿಯಿಂದ ಕಾರ್ಯಕ್ರಮದ ಅಂಗವಾಗಿ ಯುವಕ-ಯುವತಿ, ಮಹಿಳೆಯರಿಗೆ ಹಾಗೂ ಮಕ್ಕಳಿಗೆ ನಡೆಸಿದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಂಘದ ಅಧ್ಯಕ್ಷ ಜನಾರ್ಧನ ಅಂಬಿಗ, ಆರ್ ಕೆ ಅಂಬಿಗ ದೀವಗಿ ಉಪಸ್ಥಿತರಿದ್ದು ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ಮನರಂಜನೆಗಾಗಿ ಯಕ್ಷಗಾನ ಪ್ರದರ್ಶನಗೊಂಡಿತು.