Satwadhara News

ಚಿತ್ರಿಗಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ

ಕುಮಟಾ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಪ್ರಗತಿ ಬಂಧು ಸ್ವಸಹಾಯ ಸಂಘ ಕುಮಟಾ ವಲಯದ ಸಂಯುಕ್ತ ಆಶ್ರಯದಲ್ಲಿ ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಎಂಬ ಆರೋಗ್ಯ ಸಂಬಂಧೀ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಶಾಲಾ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ಸ್ಟಿಕರ್ ರೂಪದಲ್ಲಿ ಮಾದಕ ವಸ್ತುಗಳನ್ನು ಮಾರಾಟಮಾಡುವ ಆತಂಕಕಾರಿ ಸಂಗತಿಗಳು ಬೆಳಕಿಗೆ ಬರುತ್ತಿದ್ದು ಪಾಲಕರೆಲ್ಲ ಈ ಪರ್ವಕಾಲದಲ್ಲಿ ಜಾಗೃತರಾಗಿರಬೇಕಾದ ಸಂದರ್ಭ ಒದಗಿ ಬಂದಿದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಮುಖ್ಯಾಧ್ಯಾಪಕ ಎನ್.ಆರ್.ಗಜು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ನೆರೆಯ ಕಾಸರಗೋಡಿನಲ್ಲಿ ಪ್ರಚಲಿತ ವಿದ್ಯಮಾನವನ್ನು ಉದಾಹರಿಸಿ ಮಾತನಾಡಿದರು. ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ನ್ಯಾಯವಾದಿ ಮತ್ತು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯೆ ಮಮತಾ ನಾಯ್ಕ ಉತ್ತಮ ಸಮಾಜ ನಿರ್ಮಾಣಕ್ಕೆ ವ್ಯಸನಮುಕ್ತ ಪರಿಸರ ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು. ಆ ನಿಟ್ಟಿನಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ಕೈಗೊಂಡ ಚಟುವಟಿಕೆಗಳನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಪ್ರಾರಂಭದಲ್ಲಿ ಕುಮಾರಿ ಅಕ್ಷತಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ಅನಿಲ್ ರೊಡ್ರಗೀಸ್ ಸ್ವಾಗತಿಸಿದರು. ಸಂಘದ ಮೇಲ್ವಿಚಾರಕ ರಾಘವೇಂದ್ರ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ವಿ.ಎನ್..ಭಟ್ಟ ನಿರೂಪಿಸಿದರು. ಸಂಘದ ಸಂಚಾಲಕಿ ರೂಪಾ ನಾಯರ್ ವಂದಿಸಿದರು. ಒಕ್ಕೂಟದ ವಲಯ ಅಧ್ಯಕ್ಷೆ ಪುಷ್ಪಾ ಕೋಮಾರಪಂತ ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *