ಶಿರಸಿ: ಲೋಕ ಸಭೆಯ ಚುನಾವಣೆ ಸಮೀಪಿಸುತ್ತಿದ್ದಂತೆ ಎಲ್ಲಾ ಪಕ್ಷದ ಚಟುವಟಿಕೆಗಳು ಚುರುಕುಗೊಂಡಿದ್ದು ಶಿರಸಿಯಲ್ಲಿರುವ ಕಾಂಗ್ರೆಸ್ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಕಾಂಗ್ರೆಸ್ ಸದಸ್ಯತ್ವ ಅಭಿಯಾನದ ಬಗ್ಗೆ ಮಾಹಿತಿನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಪಕ್ಷ ಸಂಘಟನೆ ನಿರಂತರ ಕಾರ್ಯವಾಗಿದೆ. ಹಾಗಾಗಿ ಸದಸ್ಯತ್ವ ನೊಂದಣಿ ಆರಂಭಿಸಲಾಗಿದ್ದು, ಜಿಲ್ಲೆಯ 1445 ಬೂತ್ ಗಳಲ್ಲಿಯೂ ಸದಸ್ಯತ್ವ ನೊಂದಣಿ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲೆಯ 1445ಕ್ಕೂ ಹೆಚ್ಚಿನ ಬೂತ್ ವ್ಯಾಪ್ತಿಯಲ್ಲಿ ಸದಸ್ಯತ್ವ ನೊಂದಣಿ ಆರಂಭಿಸಲಾಗಿದೆ. ಮುಂದಿನ 15 ದಿನಗಳೊಳಗೆ ಪ್ರತೀ ಬೂತ್ ನಲ್ಲಿ ಕನಿಷ್ಠ 40ರಿಂದ 50 ಸದಸ್ಯತ್ವ ಮಾಡಲು ಬೂತ್ ಅಧ್ಯಕ್ಷರು ಶ್ರಮಿಸಬೇಕಿದೆ.
ಶಿರಸಿ- ಸಿದ್ದಾಪುರ ಕ್ಷೇತ್ರದ ಸುಮಾರು 245 ಬೂತ್ ಗಳಿದ್ದು ಬೂತ್ ಅಧ್ಯಕ್ಷರ ಸಭೆ ನಡೆಸಿ ಈಗಾಗಲೇ ಸೂಕ್ತ ಮಾಹಿತಿ, ಮಾರ್ಗದರ್ಶನ ನೀಡಲಾಗಿದೆ, ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ಸದಸ್ಯರ ಪೋನ್ ನಂಬರ್ ದಾಖಲೆ ಪಡೆದು ಪಕ್ಷದ ಸದಸ್ಯತ್ವ ನೀಡಲಾಗುತ್ತದೆ. ಇದರಿಂದ ಪಕ್ಷದ ನಿಜವಾದ ಕಾರ್ಯಕರ್ತರು ಹುಟ್ಟಿಕೊಳ್ಳುತ್ತಾರೆ ಎಂದರು.
ಪ್ರತೀ ವಿಧಾನಸಭಾ ಕ್ಷೇತ್ರ 250 ಬೂತ್ ಗಳಿದ್ದು ಎಲ್ಲ ಬೂತ್ ಗಳಲ್ಲಿಯೂ ಪಕ್ಷದ ಸದಸ್ಯತ್ವ ನೀಡಲಾಗುವುದು. ಅತೀ ಹೆಚ್ಚು ಸದಸ್ಯರನ್ನು ಮಾಡಿದ ಬೂತ್ ಪ್ರಮುಖರನ್ನು ಭವಿಷ್ಯದಲ್ಲಿ ಪಕ್ಷ ಗುರುತಿಸಲಿದೆ ಎಂದ ಅವರು, ಪ್ರತೀ 10 ಬೂತ್ ಗೆ ಓರ್ವ ಮೇಲ್ವಿಚಾರಕನನ್ನು ನೇಮಿಸಲಾಗಿದೆ. 15 ದಿನಕ್ಕೆ ಬ್ಲಾಕ್ ಮಟ್ಟದಲ್ಲಿ ಪ್ರಗತಿ ಪರಿಶೀಲಿಸಲಾಗುವುದು ಎಂದರು.