ಮಂಗಳೂರು:ಆರ್ ಎಸ್ ಎಸ್ ಬೈಠಕ್ ನಲ್ಲಿ ಭಾಗವಹಿಸಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಮಂಗಳೂರಿಗೆ ಆಗಮಿಸಿದ್ದು, ನಿನ್ನೆ ನಗರದ ಖಾಸಗಿ ಹೊಟೇಲ್ ನಲ್ಲಿ ತಂಗಿದ್ದು, ಇಂದು ಇಂದೋರ್ ನತ್ತ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದುಬಂದಿದೆ.
ಅವರು ನಗರದಲ್ಲಿ ‘ಮೋದಿ ಹಾದಿಯಲ್ಲಿ ನಾಲ್ಕು ವರ್ಷ’ ಎಂಬ ಪುಸ್ತಕ ಬಿಡುಗಡೆಗೊಳಿಸಿದರು. ಬಳಿಕ ಇಂದು ನಿಗದಿಯಂತೆ ವಿಮಾನ ನಿಲ್ದಾಣಕ್ಕೆ ಹೋಗಬೇಕಾದವರು ಮತ್ತೆ ದಿಢೀರ್ ಸಂಘನಿಕೇತನಕ್ಕೆ ತೆರಳಿ ಮಾತುಕತೆ ನಡೆಸಿದ್ದು ಕುತೂಹಲಕ್ಕೆ ಕಾರಣವಾಯ್ತು.
ಅಮಿತ್ ಷಾ ವಿಮಾನ ನಿಲ್ದಾಣಕ್ಕೆ ತೆರಳಬೇಕಾಗಿದ್ದರಿಂದ ಪೊಲೀಸರು ವಿಮಾನ ನಿಲ್ದಾಣದ ದಾರಿಯಲ್ಲಿ ಭದ್ರತೆ ಏರ್ಪಡಿಸಿದ್ದರು. ಆದರೆ, ಆರ್ಎಸ್ಎಸ್ ನ ಸುರೇಶ್ ಜೋಶಿ ( ಭಯ್ಯಾಜಿ) ಬುಲಾವ್ ಮೇರೆಗೆ ಮತ್ತೆ ಸಂಘನಿಕೇತನಕ್ಕೆ ಬಂದ ಅಮಿತ್ ಶಾ ಸಂಘನಿಕೇತನದಲ್ಲಿ ಸುಮಾರು ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದರು. ಮಾತುಕತೆಯ ಬಳಿಕ ಅಮಿತ್ ಶಾ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಚುನಾವಣಾ ಪ್ರಚಾರಕ್ಕಾಗಿ ಇಂದೋರ್ ಗೆ ತೆರಳಿದರು ಎಂದು ವರದಿಯಾಗಿದೆ.