ಕುಮಟಾ: ಇಲ್ಲಿಯ ಭಾರತೀಯ ಕುಟುಂಬ ಯೋಜನಾ ಸಂಘ ಮತ್ತು ಶಾಲೆಯ ವಿಜ್ಞಾನ ಸಂಘದಡಿ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಹದಿಹರಯದ ಲೈಂಗಿಕ ತಿಳುವಳಿಕೆ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ‘ಹದಿವಯಸ್ಸು ಅತಿಹೆಚ್ಚು ದೈಹಿಕ ಬದಲಾವಣೆ, ಭಾವನಾತ್ಮಕ ವ್ಯತ್ಯಯಗಳು ಹಾಗೂ ಸಾಕಷ್ಟು ಒತ್ತಡಗಳನ್ನು ಒಳಗೊಂಡಿರುವ ಪರ್ವಕಾಲ. ಈ ಹಂತದಲ್ಲಿ ಭಾವನೆ, ಚಿತ್ತದಲ್ಲಿ ಏರುಪೇರುಗಳು ಸಾಮಾನ್ಯ. ಆದರೆ ಈ ಬದಲಾವಣೆ ಮಕ್ಕಳ ಖಿನ್ನತೆಗೆ ಕಾರಣವಾಗಬಾರದು. ಅದು ಮನಸ್ಸು ಅರಳಿ ಸುಂದರ ಬದುಕಿನ ಅಡಿಪಾಯಕ್ಕೆ ಮುನ್ನುಡಿಯಾಗಬೇಕು ಎಂದು ಮುಖ್ಯ ಉಪನ್ಯಾಸಕರಾಗಿ ಆಗಮಿಸಿದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಉಪಪ್ರಾಚಾರ್ಯೆ ಡಾ.ಪ್ರೀತಿ ಭಂಡಾರಕರ ಅಭಿಪ್ರಾಯಪಟ್ಟರು.
ಹರಯದಲ್ಲಿ ಮಕ್ಕಳಲ್ಲಾಗುವ ಋಣಾತ್ಮಕತೆಗೆ ಬಾಲ್ಯದಲ್ಲಾದ ಆಘಾತ, ದೈಹಿಕ ಮತ್ತು ಭಾವನಾತ್ಮಕ ಶೋಷಣೆ, ನ್ಯೂನತೆಯಿಂದಾದ ಕೀಳರಿಮೆ, ಪ್ರಕ್ಷುಬ್ದ ಕೌಟುಂಬಿಕ ಸಮಸ್ಯೆ-ಕಲಹ, ವಿಚ್ಛೇದನ-ಮದ್ಯವ್ಯಸನತ್ವ ಇವು ಮಕ್ಕಳ ಅಭ್ಯಾಸದ ಮೇಲೆ ವ್ಯತಿರಿಕ್ತ ಪರಿಣಾಮ ಬೀಳಲು ಕಾರಣವಾಗುತ್ತಿದೆ ಎಂದು ಅಧ್ಯಕ್ಷತೆಯನ್ನು ವಹಿಸಿದ ಭಾ.ಕು.ಯೋ.ಸಂಘದ ಕಾರ್ಯಕಾರಿ ಮಂಡಳಿ ಸದಸ್ಯ ಮತ್ತು ಮುಖ್ಯಾಧ್ಯಾಪಕ ಎನ್.ಆರ್.ಗಜು ವಿಶ್ಲೇಷಿಸಿದರು. ಹದಿವಯಸ್ಕರಾದವರು ಶಿಕ್ಷಕ ಮತ್ತು ಪಾಲಕರೊಂದಿಗೆ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಂಡಾಗ ಮಾತ್ರ ಅವುಗಳ ಪರಿಹಾರೋಪಾಯಕ್ಕೆ ತಕ್ಕುದಾದ ವಾತಾವರಣವನ್ನು ನಿರ್ಮಾಣಗೊಳ್ಳಲು ಸಾಧ್ಯವೆಂದು ಅವರು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಮಾಧ್ಯಮಿಕ ಶಾಲಾ ನೌಕರರ ಸಂಘದ ಘಟಕಾಧ್ಯಕ್ಷ ಅನಿಲ್ ರೊಡ್ರಗೀಸ್, ಭಾಕುಯೋಸಂಘದ ಲ್ಯಾಬ್ ಟೆಕ್ನೀಶಿಯನ್ ಸಿಲ್ವಿಯಾ ನೊರ್ಹೋನಾ ಉಪಸ್ಥಿತರಿದ್ದರು. ಶಿಕ್ಷಕ ವಿ.ಎನ್.ಭಟ್ಟ ಸ್ವಾಗತಿಸಿದರು. ಭಾಕುಯೋಸಂಘದ ಯೋಜನಾಧಿಕಾರಿ ಮಂಜುಳಾ ಗೌಡ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಜ್ಞಾನ ಸಂಘದ ಸಂಚಾಲಕ ಶಿಕ್ಷಕ ಕಿರಣ ಪ್ರಭು ನಿರೂಪಿಸದರು. ಶಿಕ್ಷಕ ಪ್ರದೀಪ ನಾಯ್ಕ ವಂದಿಸಿದರು.