ಬೆಂಗಳೂರು: ಗೋವಧೆಜನ್ಯ ವಸ್ತುಗಳನ್ನು ತಿರಸ್ಕರಿಸುವ ಮೂಲಕ ಗೋಹತ್ಯೆಯ ದಂಧೆಯನ್ನು ಸೋಲಿಸುವ ಬೃಹತ್ ಆಂದೋಲನಕ್ಕೆ ದೇಶ ಸಜ್ಜಾಗಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀರಾಘವೇಶ್ವರಭಾರತೀಸ್ವಾಮೀಜಿ ನುಡಿದರು.

ಬಸವನಗುಡಿ ಬಳಿಯ ಕೆಂಪೇಗೌಡ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದ ಅಭಯಾಕ್ಷರ- ಹಾಲುಹಬ್ಬ ಉತ್ಸವದಲ್ಲಿ ಅವರು ಆಶೀರ್ವಚನ ನೀಡಿದರು. ಮನೆಯಲ್ಲಿ ಗೋಪಾಲನೆ, ಅದು ಸಾಧ್ಯವಾಗದಿದ್ದರೆ ಗೋಪಾಲನೆಗೆ ನೆರವು ನೀಡುವುದು ಅಥವಾ ಗೋಧನದ ಹುಂಡಿ ಇಡುವುದು, ಗವ್ಯೋತ್ಪನ್ನ ಬಳಕೆ, ಗೋವಧೆಯಿಂದ ಬರುವ ಉತ್ಪನ್ನಗಳನ್ನು ತಿರಸ್ಕರಿಸುವ, ಗೋಕಿಂಕರರಾಗಿ ಸೇವೆ ಸಲ್ಲಿಸುವ ಮೂಲಕ ಅಥವಾ ಅಭಯಾಕ್ಷರಕ್ಕೆ ಸಹಿ ಮಾಡುವ ಸಪ್ತಸೂತ್ರಗಳ ಮೂಲಕ ಗೋರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.

ಎಲ್ಲ ದಿವ್ಯಗಳು ಇರುವುದು ಗೋವಿನ ದೇಹದಲ್ಲಿ; ಶುಭ, ಒಳಿತು ಎಲ್ಲವೂ ಇರುವ ಜೀವ ಗೋಮಾತೆ. ಗೋಮಾತೆ ಇಂದು ಅಪಾಯದಲ್ಲಿದ್ದಾಳೆ. ಗೋವಿನ ಬಗ್ಗೆ, ಸಾತ್ವಿಕತೆ ಬಗ್ಗೆ, ಭಾರತೀಯತೆ ಬಗ್ಗೆ ಇಡೀ ಸಮಾಜಕ್ಕೆ ಚಿಂತೆ ಇದೆ. ಈ ಚಿಂತೆ ದೂರವಾಗಬೇಕು ಎಂದು ಅಭಿಪ್ರಾಯಪಟ್ಟರು.

ಗೋಜನ್ಯ ವಸ್ತುಗಳ ಬಳಕೆ ಮನುಷ್ಯನ ಮೈ, ಮನಕ್ಕೆ ಅಮೃತದ ಆಹ್ವಾನ. ಗವ್ಯೋತ್ಪನ್ನ ಬಳಕೆಯಿಂದ ಬರುವ ಆದಾಯದ ಪ್ರತಿ ರೂಪಾಯಿಯೂ ಗೋಸೇವೆಗೆ ಮೀಸಲು ಎಂದರು. ಗೋಪಾಲನೆಯ ಸಪ್ತಸೂತ್ರಗಳನ್ನು ಅನುಸರಿಸಿದಲ್ಲಿ ಭಾರತದ ಭವಿಷ್ಯ ಭವ್ಯವಾಗಲಿದೆ. ಗೋವಿನ ಜತೆಗೆ ಹಾಸುಹೊಕ್ಕಾದ ಬದುಕು ಶ್ರೇಷ್ಠ. ಗೋವಿನ ದಿವ್ಯತೆಯ ಪ್ರಭೆಯಲ್ಲಿ ಬದುಕುವುದು ಅದೃಷ್ಟ ಎಂದು ಬಣ್ಣಿಸಿದರು,

ಅಭಯಾಕ್ಷರ ಆಂದೋಲನದ ಮೂಲಕ ದೇಶದ ಪ್ರತಿಯೊಬ್ಬ ನಾಗರಿಕ ತನ್ನ ಹಕ್ಕೊತ್ತಾಯ ಮಂಡಿಸಬೇಕು. ಇದಕ್ಕೆ ರಾಜ್ಯದ ಉತ್ತಮ ರಾಜಕಾರಣಿಗಳು, ಅಧಿಕಾರಿಗಳು ಕೈಜೋಡಿಸಬೇಕು. ಏಳು ದಶಕಗಳ ಕಾಲ ಸರ್ಕಾರಗಳಿಂದ ಸಾಧ್ಯವಾಗದ್ದನ್ನು ಮಾಡಿತೋರಿಸೋಣ ಎಂದರು.

ಉಡುಪಿ ಫಲಿಮಾರು ಮಠದ ವಿದ್ಯಾಧೀಶ ಶ್ರೀಪಾದಂಗಳವರು ಆಶೀರ್ವಚನ ನೀಡಿ, “ಗೋವಿನ ಮೇಲೆ ಕ್ರೌರ್ಯ ಎಸಗುವವರು ಮುಂದಿನ ಜನ್ಮದಲ್ಲಿ ತಾವು ಹಸುವಾದರೆ ಏನಾಗಬಹುದು ಎಂಬ ಪ್ರಶ್ನೆ ಹಾಕಿಕೊಳ್ಳಲಿ. ಇದಕ್ಕೆ ರಾಜಕೀಯದಲ್ಲಿ ಉತ್ತರವಿಲ್ಲ” ಎಂದು ಹೇಳಿದರು, ತಾಯಿಗೆ ವಯಸ್ಸಾಯಿತು ಎಂದು ವಧಾಲಯಕ್ಕೆ ಕಳುಹಿಸುತ್ತೇವೆಯೇ? ಅಂತೆಯೇ ಗೋಮಾತೆಯನ್ನು ಕಳುಹಿಸುವುದೂ ಅಪರಾಧ ಎಂದು ವಿಶ್ಲೇಷಿಸಿದರು.

ಗೋವನ್ನು ವಧಾಲಯಕ್ಕೆ ಕಳುಹಿಸುವವರು ಖಂಡಿತಾ ಮನುಷ್ಯರಲ್ಲ ಎಂದರು. ಆದರೆ ಗೋಮೂತ್ರ, ಗೋಮಯದಲ್ಲಿರುವ ಔಷಧ ಗುಣಗಳನ್ನು ಪ್ರಚುರಪಡಿಸಿದವರಲ್ಲಿ ಶ್ರೀರಾಮಚಂದ್ರಾಪುರ ಮಠ ಮುಂಚೂಣಿಯಲ್ಲಿದೆ ಎಂದು ಬಣ್ಣಿಸಿದರು.

ದೊಡ್ಡರಂಗೇಗೌಡ ಮಾತನಾಡಿ, “ವಿಚಾರವಾದಿಗಳು, ಬುದ್ಧಿಜೀವಿಗಳು ಪ್ರಚಾರಕ್ಕಾಗಿ ಗೋಹತ್ಯೆ ಬೆಂಬಲಿಸುವ ಮೂಲಕ ದಾಷ್ಟ್ರ್ಯ ಮೆರೆದಿದಿದ್ದಾರೆ. ಇವರು ವಿಚಾರವಾದಿಗಳೋ ಬುದ್ಧಿಹೀನರೋ ಎಂದು ನೀವೇ ನಿರ್ಧರಿಸಿ. ಇಂಥವರು ಹೇಗೆ ತಮ್ಮ ಪ್ರಶಸ್ತಿಗಳನ್ನು ಪಡೆದರು ಎನ್ನುವುದು ಎಲ್ಲರಿಗೂ ಗೊತ್ತು” ಎಂದು ಚುಚ್ಚಿದರು. ಸಾಹಿತಿ, ಶಿಲ್ಪಿಗಳು, ಪ್ರಾಜ್ಞರಿಗೆ ಸಮಾಜ ಉತ್ತಮ ಸ್ಥಾನ ನೀಡುತ್ತಿದೆ. ಆದರೆ ಬುದ್ಧಿಜೀವಿಗಳ ಹೆಸರಿನಲ್ಲಿ ವಿಕೃತಿ ಮೆರೆಯುತ್ತಿದ್ದಾರೆ. ಸಮಾಜಕ್ಕೆ ಇತ್ಯಾತ್ಮಕ ಸಂದೇಶ ಸಾರುವ ಒಳ್ಳೆಯ ಬುದ್ಧಿ ಇನ್ನಾದರೂ ಇವರಿಗೆ ಬರಲಿ. ಗೋಹತ್ಯೆ ವಿಕೃತಿಯ ಕ್ರೌರ್ಯ. ಗೋಮಾಂಸ ಭಕ್ಷಣೆ ಅನಾಗರಿಕ ಲಕ್ಷಣ. ಸನಾತನ ಪರಂಪರೆ ಉಳಿಸುವ ನಿಟ್ಟಿನಲ್ಲಿ ಹಾಲುಹಬ್ಬದಂಥ ಕಾರ್ಯಕ್ರಮಗಳು ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಮುನ್ನಡೆಯಲಿ ಎನ್ನುವುದು ಎಲ್ಲ ಸಹೃದಯರ ಆಶಯ ಎಂದು ಬಣ್ಣಿಸಿದರು. ಗೋವಿನ ಕುರಿತ ಸ್ವ-ರಚಿತ ಕವನವನ್ನು ದೊಡ್ಡರಂಗೇಗೌಡ ವಾಚಿಸಿದರು.

“ಗೋರಕ್ಷಣೆ ಮತ್ತು ಗೋಭಕ್ಷಣೆ ನಡುವಿನ ಹೋರಾಟ ನಡೆಯುತ್ತಲೇ ಇದೆ. ಗೋಪ್ರೇಮ ಮನಸ್ಸಲ್ಲೇ ಹುಟ್ಟಿ ಬರುವಂತೆ ಮಾಡುವ ವಿಶಿಷ್ಟ ಕಾರ್ಯಕ್ರಮ ಹಾಲುಹಬ್ಬ, ಗೋಜನ್ಯ ಉತ್ಪನ್ನದಿಂದ ಜೀವನ ಮಾಡಬಹುದು. ಗೋಹತ್ಯೆ ಮಾಡಿದರೆ ಅದು ಚಿನ್ನದ ಮೊಟ್ಟೆ ಇಡುವ ಕೋಳಿಯ ಕಥೆಯಂತಾಗುತ್ತದೆ” ಎಂದು ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ್ ನುಡಿದರು.

ಗೋವಿನ ಮನಸ್ಸು ಅರ್ಥ ಮಾಡಿಕೊಳ್ಳುವ ಸಹೃದಯತೆ ನಮ್ಮಲ್ಲಿ ಬೆಳೆಯಬೇಕು. ಅಂಥ ಅಮಾಯಕ ಮನಸ್ಸನ್ನು ಕೊಲ್ಲುವ ಮನಸ್ಸು ವಿಕೃತ ಮನಸ್ಸು. ಅಂಥವರು ದೇಶಕ್ಕೆ ಬೇಕಿಲ್ಲ. ಗೋಪ್ರೇಮಿಗಳು ಹೆಚ್ಚಬೇಕು. ಮಕ್ಕಳಿಗೆ ಗೋವಿನ ಪ್ರೀತಿ, ಮಹತ್ವವನ್ನು ಹೇಳುವ ಪ್ರತಿಜ್ಞೆಯನ್ನು ಎಲ್ಲ ಪೋಷಕರು ಸ್ವೀಕರಿಸಿಬೇಕು. ಶ್ರೀಗಳ ಗೋಕೈಂಕರ್ಯಕ್ಕೆ ಇಡೀ ಸಮಾಜ ಬೆಂಬಲ ನೀಡಬೆಕು ಎಂದು ಮನವಿ ಮಾಡಿದರು.

RELATED ARTICLES  ಪರಿಸರ ಸ್ನೇಹಿ ತೆಂಗಿನಕಾಯಿ ಗಣಪತಿ ಬಿಡುಗಡೆ: ವಿನೂತನ ಗಣಪನನ್ನು ಪರಿಚಯಿಸಿದ ವೀರೇಂದ್ರ ಹೆಗ್ಗಡೆ

ಶಾಸಕ ರವಿ ಸುಬ್ರಹ್ಮಣ್ಯ ಮಾತನಾಡಿ, “ಗೋವಿನ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಕೆಲ ಸ್ವಯಂಘೋಷಿತ ಬುದ್ಧಿಜೀವಿಗಳು ನಮ್ಮ ಸನಾತನ ಸಂಸ್ಕøತಿಯನ್ನು ನಿಂದಿಸಿ ಪ್ರಚಾರ ಪಡೆಯುತ್ತಿದ್ದಾರೆ. ಗೋಸಂತತಿ ಉಳಿವಿಗೆ ನಡೆಯುವ ಅಭಿಯಾನದ ವಿರುದ್ಧವಾಗಿ ಮಾತನಾಡುವುದು ವಿಪರ್ಯಾಸ” ಎಂದರು.

ಗೋಮಾತೆಯ ರಕ್ಷಣೆಗೆ ಯಾವ ತ್ಯಾಗಕ್ಕೂ ಸಿದ್ಧ ಎಂಬ ಸಂದೇಶವನ್ನು ಆಳುವವರಿಗೆ ತಲುಪಿಸುವ ಬೃಹದಾಂದೋಲನ ಇದಾಗಿದೆ. ಇದು ದೇಶದ ಮೂಲೆಮೂಲೆಗೂ ಪಸರಿಸಬೇಕು ಎಂದು ಸಲಹೆ ಮಾಡಿದರು.

ಬಿಬಿಎಂಪಿಸದಸ್ಯ ವೆಂಕಟೇಶ್, ಶ್ಯಾಮಲಾ ಸಾಯಿಕುಮಾರ್, ಎ.ವಿ.ನಂದಿನಿ, ಜೆ.ಎಂ.ಸವಿತಾ ಮಾಯಣ್ಣ, ಕೆಂಪೇಗೌಡ, ಸಮಾಜಸೇವಕರಾದ ಇ..ಮಂಜುನಾಥ ರಾವ್, ಸಾಯಿಕುಮಾರ್, ಪಿಳ್ಳಪ್ಪ, ಉದ್ಯಮಿ ರುಕ್ಮಾಂಗದ ನಾಯ್ಡು ಮತ್ತಿತರರು ಉಪಸ್ಥಿತರಿದ್ದರು. ಕರ್ನಾಟಕ ರಕ್ಷಣಾ ವೇದಿಕೆಯ ಬೆಂಗಳೂರು ಘಟಕದ ಅಧ್ಯಕ್ಷ ಟಿ,ಎನ್.ಶಿವಾನಂದ ಶೆಟ್ಟಿ ಸಭಾಪೂಜೆ ನೆರವೇರಿಸಿದರು. ಅಭಯಾಕ್ಷರದಿಂದ ಪ್ರೇರಣೆ ಪಡೆದ ಮಹಿಳೆ ಝಾನ್ಸಿರಾಣಿ ಹಾಗೂ ಮಗ ರಾಣಾ ಪ್ರತಾಪ್ 200 ಹಸುಗಳನ್ನು ಸಾಕುವ ಕೈಂಕರ್ಯಕ್ಕೆ ಮುಂದಾದರು.