ವಿಷ್ಣುವಿನ ನಕ್ಷತ್ರವಾದ ಶ್ರವಣನಕ್ಷತ್ರವು ಹುಣ್ಣಿಮೆಯಂದು ಬರುವುದರಿಂದ ಇದಕ್ಕೆ ಶ್ರಾವಣಮಾಸ ಎಂದು ಹೆಸರು. ಈ ಪವಿತ್ರಮಾಸದುದ್ದಕ್ಕೂ ವ್ರತಾಚರಣೆ ಮಾಡುತ್ತ ಕೇವಲಫಲಾಹಾರ, ಕಡಲೆ ಹಾಗೂ ಹಾಲುಗಳ ಸೇವನೆ ಹಾಗೂ ಮಾಂಸ-ಕುಡಿತಗಳ ತ್ಯಾಗ ಮಾಡುವ ಪದ್ಧತಿ ಎಲ್ಲ ಕುಲಗಳಲ್ಲೂ ಉಂಟು. ದೇವಾಸುರರು ಸಮುದ್ರಮಂಥನಮಾಡಿದ್ದು ಈ ಮಾಸದಲ್ಲೇ ಎನ್ನುವ ನಂಬಿಕೆ ಇದೆ. ಲಕ್ಷ್ಮಿಯೂ ಸೇರಿದಂತೆ ಚತುರ್ದಶರತ್ನಗಳು ಉದ್ಭವಿಸಿ  ಲೋಕಗಳನ್ನು ಸಮೃದ್ಧಗೊಳಿಸಿದರಿಂದ ಈ ಮಾಸದಲ್ಲಿ ಮಾಡುವ ಎಲ್ಲ ನೇಮಗಳೂ ಸಮೃದ್ಧಿಕಾರಕ ಎನ್ನಲಾಗುತ್ತದೆ.

ಶ್ರಾವಣಸೋಮವಾರಗಳು ಶಿವನಿಗೂ, ಶ್ರಾವಣಮಂಗಳವಾರಗಳು ಗೌರೀಗೂ ಹಾಗೂ ಶ್ರಾವಣಶನಿವಾರಗಳು ವಿಷ್ಣುವಿಗೂ ವಿಶೇಷವೆನಿಸುತ್ತವೆ. ನಾಗಪಂಚಮಿ, ಕೃಷ್ಣಾಷ್ಟಮೀ, ವರಮಹಾಲಕ್ಷ್ಮೀ, ಉಪಾಕರ್ಮ/ರಕ್ಷಾಬಂಧನ, ಕಲ್ಕಿಜಯಂತಿ, ಕಜ್ಜಲೀತೃತೀಯ, ಪುತ್ರೈಕಾದಶೀ, ಬುಡೀತೇಜ್,ಋಷಿಪಂಚಮೀ, ಹಿಂಡೋಲೋತ್ಸವ, ಪಿಠೋರಿ, ಫೋಲಾ, ಗೋವತ್ಸಪೂಜೆ ಮುಂತಾದವು ಶ್ರಾವಣದ ಜನಪ್ರಿಯ ಹಬ್ಬಗಳು.

ಸನಾತನ ಧರ್ಮದಲ್ಲಿನ ವ್ರತ ಹಾಗೂ ಉತ್ಸವಗಳು ಋತು, ಪ್ರಕೃತಿ, ಕುಲ, ವೃತ್ತಿ ಹಾಗೂ ಪ್ರಾದೇಶಿಕ ಪ್ರಭಾವಗಳನ್ನು ಮೈದಾಳಿ ಬರುವಂತಹವು. ವರ್ಷಾಋತುವಿನಲ್ಲಿ ಬರುವುದರಿಂದ ಶ್ರಾವಣದ ಹಬ್ಬಗಳಲ್ಲಿ ಉಪವಾಸ, ಪೂಜೆ, ಜಪ, ದಾನ, ಧ್ಯಾನ ಮುಂತಾದ ವ್ರತಾಂಶಗಳೇ ಹೆಚ್ಚು. ಬಯಲಾಟ, ಬೇಟೆ, ಕೋಲಾಟ, ಕ್ರೀಡೆಗಳು, ಉದ್ಯಾನಗಮನ ಮುಂತಾದ ಕಲಾಪಗಳು ಶರದೃತು ಹಾಗೂ ವಸಂತರ್ತುಗಳಷ್ಟು ಹೆಚ್ಚಾಗಿ ಇಲ್ಲ. ಆದರೆ ಹಾಡು, ಹಸೆ, ಭೋಜನಾದಿ ಉತ್ಸವಾಂಶಗಳು ಹೇರಳವಾಗಿ ಕಾಣುತ್ತವೆ.

RELATED ARTICLES  ಪ್ರಪಾತಕ್ಕೆ ಉರುಳಿದ ಲಾರಿ

ಮಳೆಯ ಕಾರಣದಿಂದಾಗಿ ಪ್ರವಾಸ ಕಡಿಮೆಯಿದ್ದು ಮನೆಮಂದಿಯೆಲ್ಲ ಒಂದೆಡೆ ಇರಲು ಅನುಕೂಲಿಸುವುದರಿಂದ ಈ ಮಾಸದಲ್ಲಿ ಕೂಡಿ ಮಾಡುವ ವ್ರತೋತ್ಸವಗಳು ಹೆಚ್ಚು. ಸಂನ್ಯಾಸಿಗಳೂ ಚಾತುರ್ಮಾಸ್ಯ ವ್ರತವನ್ನು ಹಿಡಿದು ಒಂದೆಡೆ ವಾಸಿಸುವುದರಿಂದ ಜನರಿಗೆ ಗುರುಗಳಿಂದ ಧಾರ್ಮಿಕ ಪ್ರವಚನ, ಚರ್ಚೆ ಉಪದೇಶಾದಿಗಳು ಲಭ್ಯವಾಗುತ್ತವೆ.

RELATED ARTICLES  ಫೋಟೋ ಸ್ಟುಡಿಯೋಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ

ಬ್ರಾಹ್ಮೀಮುಹೂರ್ತದಲ್ಲಿ ಎದ್ದು ಸ್ನಾನಾದಿಗಳನ್ನು ಮುಗಿಸಿ, ಮನೆಯನ್ನು ತಳಿರು-ತೋರಣ-ರಂಗವಲ್ಲಿಗಳಿಂದ ಸಿಂಗರಿಸಿ, ಪೂಜಾಮಂಟಪವನ್ನು ಅಲಂಕರಿಸಿ, ಉಪವಾಸ, ಪೂಜೆ, ದಾನಧರ್ಮಗಳಲ್ಲಿ ತೊಡಗುವುದು, ಸಾಯಂಕಾಲ ಹಾಡು, ಕಥಾಶ್ರವಣ ಹಾಗೂ ತಾಂಬೂಲ ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯವಾದ ವ್ರತಾಂಶಗಳು.
ಸೋಮವಾರದ ವ್ರತ, ಮಂಗಳಗೌರೀವ್ರತ ಹಾಗೂ ಶ್ರಾವಣಶನಿವಾರಗಳು ಶ್ರಾವಣದ ಪ್ರಮುಖವ್ರತಗಳು.

ಶ್ರಾವಣಸೋಮರಗಳಂದು ಉಪವಾಸ, ರುದ್ರಾಭಿಷೇಕ, ಬಿಲ್ವಾರ್ಚನೆ, ಪಂಚಾಕ್ಷರೀ-ಜಪ, ದಾನಧರ್ಮಾದಿಗಳು ನಡೆಯುತ್ತವೆ. ಕಾವಡಿಯನ್ನು ಹೊರುವ ಪದ್ಧತಿಯೂ ಉಂಟು. ಹದಿನಾರುಸೋಮವಾರಗಳ ವ್ರತವನ್ನು ಶ್ರಾವಣದಲ್ಲೇ ಪ್ರಾರಂಭಿಸಲಾಗುತ್ತದೆ. ಮದುವೆಯಾದ ಮೊದಲ ಐದುವರ್ಷಗಳಂದು ಸುಮಂಗಲಿಯರು ಶಿವಮುಷ್ಟಿವ್ರತವನ್ನು ಆಚರಿಸುವುದುಂಟು. ಮುಷ್ಟಿಯಷ್ಟು ಅಕ್ಕಿ, ಬಿಳಿ ಎಳ್ಳು, ತೊಗರಿ, ಗೋದಿ ಹಾಗೂ ಅರಳುಗಳನ್ನು ಒಂದೊಂದಾಗಿ ಒಂದೊಂದು ಸೋಮವಾರ ಶಿವನಿಗೆ ಅರ್ಪಿಸುತ್ತ ಬರುತ್ತಾರೆ. ಈ ಮಾಸವಿಡೀ ರುದ್ರಾಕ್ಷಿಮಾಲೆ ಧರಿಸುವವರುಂಟು.