ಬೆಂಗಳೂರು: ಕಲಿಯುಗ ಕರ್ಣ, ಮಂಡ್ಯದ ಗಂಡು, ರೆಬೆಲ್ ಸ್ಟಾರ್ ಅಂಬರೀಶ್ ಇನ್ನು ನೆನಪು ಮಾತ್ರ. ಇಂದು ಸಂಜೆ 5.55ರ ಸಮಯಕ್ಕೆ ಕಂಠೀರವ ಸ್ಟುಡಿಯೋದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂಬರೀಶ್ ಅವರ ಅಂತ್ಯಸಂಸ್ಕಾರ ನೆರವೇರಿದ್ದು, ಅಂಬಿ ಪಂಚಭೂತಗಳಲ್ಲಿ ಲೀನರಾದರು. ಒಕ್ಕಲಿಗ ಸಂಪ್ರದಾಯದಂತೆ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು.
ಪೊಲೀಸರು ಮೂರು ಸುತ್ತು ಕುಶಾಲ ತೋಪು ಹಾರಿಸಿ ಗೌರವ ಸಮರ್ಪಣೆ ಮಾಡಿದರು. ಅಂಬರೀಶ್ ಪಾರ್ಥಿವ ಶರೀರದ ಮೇಲೆ ಹೊದಿಸಲಾಗಿದ್ದ ರಾಷ್ಟ್ರಧ್ವಜವನ್ನು ಪತ್ನಿ ಸುಮಲತಾ ಅವರಿಗೆ ಹಸ್ತಾಂತರಿಸಲಾಯಿತು. 500 ಕೆಜಿ ಗಂಧದ ಕಟ್ಟಿಗೆ, 30 ಕೆ.ಜಿ ತುಪ್ಪ ಹಾಗೂ 10 ಕೆ.ಜಿ ಕರ್ಪೂರ ಬಳಸಿ ನಿರ್ಮಿಸಲಾಗಿದ್ದ ಚಿತೆಯ ಮೇಲೆ ಅಂಬರೀಶ್ ಪಾರ್ಥಿವ ಶರೀರವನ್ನು ಇರಿಸಲಾಯಿತು. ಸುಮಲತಾ ಹಾಗೂ ಅಭಿಷೇಕ್ ಅಂಬರೀಶ್ ಬಾಯಿಗೆ ಅಕ್ಕಿ ಹಾಕಿದರು. ಸುಮಲತಾ ಅಂಬಿ ಕಾಲಿಗೆ ನಮಸ್ಕರಿಸಿ ಕಣ್ಣೀರಿಟ್ಟರು. ಪುತ್ರ ಅಭಿಷೇಕ್ ಅಪ್ಪನನ್ನು ಆಲಂಗಿಸಿಕೊಂಡು ತೀವ್ರ ದುಃಖತಪ್ತರಾದರು. ಬಳಿಕ ಅಭಿಷೇಕ್ ಅಂಬರೀಶ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.
ಇದಕ್ಕೂ ಮುನ್ನ ಸಿಎಂ ಹೆಚ್ಡಿ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್, ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ, ಮಾಜಿ ಸಿಎಂ ಎಸ್.ಎಂ.ಕೃಷ್ಣ, ಮಾಜಿ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್, ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ, ಸಚಿವ ಡಿಕೆ ಶಿವಕುಮಾರ್, ಕೆಜೆ ಜಾರ್ಜ್, ಹೆಚ್ಡಿ ರೇವಣ್ಣ, ಡಿಸಿ ತಮ್ಮಣ್ಣ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮಾಜಿ ಡಿಸಿಎಂ ಆರ್. ಅಶೋಕ್, ತೆಲುಗು ನಟ ಮೋಹನ್ ಬಾಬು, ಪುತ್ರ ವಿಷ್ಣು ಮಂಚು ಹಾಗೂ ಪುತ್ರಿ ಲಕ್ಷ್ಮಿ ಮಂಚು, ಹಿರಿಯ ನಟಿ ಬಿ. ಸರೋಜಾದೇವಿ, ಜಯಪ್ರದಾ, ನಟ ರವಿಚಂದ್ರನ್, ಶಿವರಾಜ್ಕುಮಾರ್, ಅರ್ಜುನ್ ಸರ್ಜಾ, ಪುನೀತ್ ರಾಜ್ಕುಮಾರ್, ಯಶ್, ದರ್ಶನ್, ನಿಖಿಲ್ ಕುಮಾರಸ್ವಾಮಿ, ಜಗ್ಗೇಶ್, ಹಿರಿಯ ನಟ ದೊಡ್ಡಣ್ಣ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಚಿನ್ನೇಗೌಡ್ರು, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಶಾಸಕ ಮುನಿರತ್ನ ನಾಯ್ಡು, ಶಾಸಕ ಹ್ಯಾರಿಸ್, ಮಾಜಿ ಶಾಸಕ ಎಸ್ಎಸ್ ಮಲ್ಲಿಕಾರ್ಜುನ್, ಎಂಎಲ್ಸಿ ಶರವಣ, ನಟ ಸುಂದರ್ ರಾಜ್, ನಿರ್ಮಾಪಕ ಸಾ.ರಾ ಗೋವಿಂದ್, ಹಿರಿಯ ನಟ ವಿನೋದ್ ಆಳ್ವಾ, ಜೈಜಗದೀಶ್, ಹಿರಿಯ ನಟ ಶ್ರೀನಾಥ್, ಗುರುಕಿರಣ್, ನಟ ರಮೇಶ್ ಅರವಿಂದ್, ನಟಿ ಸಿಂಧು ಲೋಕನಾಥ್, ನಟ ಆದಿ, ಶ್ರೀನಗರ ಕಿಟ್ಟಿ, ಅನಿರುದ್ಧ್, ಕೀರ್ತಿ ವಿಷ್ಣುವರ್ಧನ್, ಪ್ರಥಮ್, ಸಾಧುಕೋಕಿಲಾ, ಧೃವ ಸರ್ಜಾ ಮುಂತಾದ ಗಣ್ಯರು ಪಾರ್ಥಿವ ಶರೀರಕ್ಕೆ ಹೂಗುಚ್ಛ ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು. ಇಡೀ ಸ್ಯಾಂಡಲ್ವುಡ್ ಹಾಗೂ ಸಹಸ್ರಾರು ಅಭಿಮಾನಿಗಳು ಅಶ್ರುತರ್ಪಣದೊಂದಿಗೆ ಕಲಿಯುಗ ಕರ್ಣನಿಗೆ ಭಾರವಾದ ಮನಸ್ಸಿನಿಂದ ವಿದಾಯ ಹೇಳಿದರು.