ಕಾರವಾರ : ಕರ್ನಾಟಕದ ಕರಾವಳಿಯ ಮೀನುಗಳಿಗೆ ಗೋವಾ ಸರಕಾರವು ಹೇರಿರುವ ನಿಷೇಧದ ಕುರಿತು ಚರ್ಚಿಸಲು ಕೇಂದ್ರ ಸಚಿವ ಶ್ರೀಪಾದ ನಾಯ್ಕ ರವರ ನೇತೃತ್ವದಲ್ಲಿ ಗೋವಾ ಸರಕಾರದ ವಿಧಾನಸಭಾ ಸ್ಪೀಕರ್ ಡಾ. ಪ್ರಮೋದ ಸಾವಂತ್ ಹಾಗೂ ಮೀನುಗಾರಿಕಾ ಸಚಿವರಾದ ವಿನೋದ್ ಪಾಲೇಕರ್ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಗಳನ್ನೊಳಗೊಂಡ ನಿಯೋಗ ಕರ್ನಾಟಕದಿಂದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ, ಮಂಗಳೂರಿನ ಸಂಸದರಾದ ಶ್ರೀ ನಳೀನ್ ಕುಮಾರ್ ಕಟೀಲು ಕರ್ನಾಟಕದ ಕರಾವಳಿಯ ಶಾಸಕರಾದ ಶ್ರೀ ರಘುಪತಿ ಭಟ್, ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀಮತಿ ರೂಪಾಲಿ ಸಂತೋಷ ನಾಯ್ಕ , ಕುಮಟಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ದಿನಕರ ಕೆ. ಶೆಟ್ಟಿ ಹಾಗೂ ಕರಾವಳಿ ಭಾಗದ ಇನ್ನುಳಿದ ಶಾಸಕರನ್ನೊಳಗೊಂಡ ನಿಯೋಗ ಪಾಲ್ಗೊಂಡಿತ್ತು.
ಚರ್ಚೆಯಲ್ಲಿ ಪರವಾನಗಿ ಇದ್ದ ಗಾಡಿಗಳನ್ನು ಯಾಕೆ ತಡೆಯಲಾಗಿದೆ ಎಂದು ಪ್ರಶ್ನಿಸಲಾಯಿತು. ತಪಾಸಣೆಯ ವೇಳೆಯಲ್ಲಿ ಕಾರವಾರದಲ್ಲಿ ತಪಾಸಣೆಗೆ ಒಳಪಟ್ಟ ಗಾಡಿಗಳನ್ನು ಮತ್ತೆ ಗೋವಾದಲ್ಲಿ ತಪಾಸಣೆಗೆ ಒಳಪಡಿಸಿ ತಿರಸ್ಕರಿಸುವುದು ಸಮಂಜಸವಲ್ಲ.ಆದ್ದರಿಂದ ತಪಾಸಣೆಯನ್ನು ಕಾರವಾರ ಹಾಗೂ ಗೋವಾ ಗಡಿಭಾಗದ ಪೋಲೆಂನಲ್ಲೇ ತಪಾಸಣೆಗೆ ಒಳಪಡಿಸಬೇಕೆಂದರು. ಗೋವಾದ ಮುಖ್ಯಸ್ಥರು ಕಾರವಾರ ಹಾಗೂ ಉತ್ತರಕನ್ನಡ ಜಿಲ್ಲೆಯಿಂದ ಗೋವಾಕ್ಕೆ ಮೀನು ಸಾಗಿಸುವ ಚಿಕ್ಕ ವಾಹನಗಳ ಹಾಗೂ ದೊಡ್ಡ ವಾಹನಗಳ ಲೆಕ್ಕ ನೀಡಲು ಕೋರಿದರು. ನಂತರ ಶಾಸಕರಾದ ಶ್ರೀಮತಿ ರೂಪಾಲಿ ಎಸ್. ನಾಯ್ಕ ರವರು ಯಾರೋ ಮಾಡಿದ ತಪ್ಪಿಗೆ ಯಾರೋ ಶಿಕ್ಷೆ ಅನುಭವಿಸುವಂತಾಗಿದೆ. ಯಾರೋ ಒಬ್ಬರು ಅಥವಾ ಇಬ್ಬರು ಮೀನುಗಳನ್ನು ಶೇಖರಿಸಲು ರಾಸಾಯನಿಕಗಳನ್ನು ಸೇರಿಸಿದ್ದಾರೆ ಎಂದು ಜಿಲ್ಲೆಯ ಎಲ್ಲಾ ಬಡ ಮೀನುಗಾರರ ಮೀನಿಗೆ ನಿರ್ಬಂಧ ಹೇರಿರುವುದು ಬಹಳ ದುಃಖವನ್ನುಂಟು ಮಾಡಿದೆ ಎಂದರು.
ಶಾಸಕರು ಕಾರವಾರ ಭಾಗದ ಮೀನುಗಾರಿಕಾ ಮುಖಂಡರೊಂದಿಗೆ ಚರ್ಚಿಸಿ ಒಂದು ನಿಯೋಗದೊಂದಿಗೆ ಮುಂದಿನ ಚರ್ಚೆಯಲ್ಲಿ ಪಾಲ್ಗೊಳ್ಳುವುದಾಗಿ ಕೋರಿದಾಗ ಅವರು ಧನಾತ್ಮಕವಾಗಿ ಪ್ರತಿಕ್ರಿಯಿಸಿದರು. ಇದರೊಂದಿಗೆ ಗೋವಾ ಸರಕಾರವು ರಾಜ್ಯದ ಮೀನುಗಾರರ ಮೇಲೆ ಹೇರಿರುವ ನಿರ್ಬಂಧವನ್ನು ತೆರವುಗೊಳಿಸಿ ರಾಜ್ಯದ ಮೀನುಗಾರರು ಗೋವಾದಲ್ಲಿ ಮೀನಿನ ವ್ಯವಹಾರ ನೆಡೆಸಲು ಅವಕಾಶ ಒದಗಿಸುವ ಎಲ್ಲಾ ಭರವಸೆ ಇದೆ ಎಂದರು.